Site icon Vistara News

Blast in Bengaluru :‌ ಬೆಂಗಳೂರಿಗೆ ಸ್ಫೋಟ ಹೊಸದಲ್ಲ, ಇಲ್ಲಿವೆ ಸೇಫ್‌ ಸಿಟಿಯನ್ನು ನಡುಗಿಸಿದ್ದ ಆ 4 ಬ್ಲಾಸ್ಟ್‌ಗಳ ಕಥೆ

Blast in Bengaluru Rameshwar Cafe

ಬೆಂಗಳೂರು: ಸೇಫ್‌ ಸಿಟಿ ಎಂದೇ ಹೆಸರಾದ ಬೆಂಗಳೂರಿನಲ್ಲಿ ಆಗಾಗ ಆತಂಕ ಹುಟ್ಟಿಸುವ ಘಟನೆಗಳು (Blast in Bengaluru) ನಡೆಯುತ್ತಲೇ ಇವೆ. ಬೆಂಗಳೂರಿನಲ್ಲಿ 2008, 2012, 2013 ಮತ್ತು 2014ರಲ್ಲಿ ನಡೆದ ಸ್ಫೋಟಗಳು ಭಾರಿ ಆತಂಕ ಸೃಷ್ಟಿಸಿದ್ದೆವು. ಇವೆಲ್ಲವೂ ಉಗ್ರ ಸಂಘಟನೆಗಳಿಂದಲೇ (Terrorist Organizations) ನಡೆದಿದ್ದವು. ಇವುಗಳಲ್ಲಿ ಕೆಲವು ಸಾವು, ಹಲವರಿಗೆ ಗಾಯ ಉಂಟು ಮಾಡಿದ್ದರೂ ಅಂತಿಮವಾಗಿ ಇಲ್ಲಿನ ಜನ ಜೀವನದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಲು ಶಕ್ತವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಭದ್ರತಾ ವ್ಯವಸ್ಥೆ, ತಾಂತ್ರಿಕ ವ್ಯವಸ್ಥೆಗಳು, ಪೊಲೀಸ್‌ ಗುಪ್ತಚರ ವ್ಯವಸ್ಥೆಗಳು ಬಲವಾಗಿವೆ. ಹೀಗಾಗಿ ಉಗ್ರರ ಚಲನವಲನಗಳ ಮೇಲೆ ತೀವ್ರವಾಗಿ ಕಣ್ಣಿಡಲಾಗುತ್ತಿದೆ. ಇದರಿಂದ ಕೆಲವೊಂದು ಘಟನೆಗಳು ನಡೆಯುವ ಮೊದಲೇ ದುಷ್ಕರ್ಮಿಗಳನ್ನು ಬಂಧಿಸಲಾಗುತ್ತಿವೆ. ಇದರ ನಡುವೆಯೂ ಬೆಂಗಳೂರಿನ ಇಂದಿರಾ ನಗರದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಫೋಟವೊಂದು ಸಂಭವಿಸಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

Blast in Bengaluru : ಹಾಗಿದ್ದರೆ ಆ ನಾಲ್ಕು ಭಯಾನಕ ಬ್ಲಾಸ್ಟ್‌ಗಳು ಯಾವುದು?

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಈ ಹಿಂದೆ ನಡೆದ ಪ್ರಮುಖ ಬಾಂಬ್‌ ಸ್ಫೋಟಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Blast in Bengaluru : 2008ರಲ್ಲಿ ನಡೆದಿತ್ತು 9 ಕಡೆ ಸರಣಿ ಸ್ಫೋಟ (Serial Blasts in 9 places)

ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸ್ಫೋಟಗಳು ಭಾರಿ ಆತಂಕಕ್ಕೆ ಕಾರಣವಾಗಿದ್ದವು. ಇದು ಬೆಂಗಳೂರಿನಲ್ಲಿ ಸಂಭವಿಸಿದ ಮೊದಲ ದೊಡ್ಡ ಮಟ್ಟದ ಸ್ಫೋಟ ಇದಾಗಿತ್ತು. 2008ರ ಜುಲೈ 25 ರಂದು ಬೆಂಗಳೂರಲ್ಲಿ ಸೀರಿಯಲ್ ಬಾಂಬ್ ಬ್ಲಾಸ್ಟ್ (2008 Bangalore Blast) ಸಂಭವಿಸಿತ್ತು. ಬೆಂಗಳೂರಿನ 9 ಕಡೆಗಳಲ್ಲಿ ಲಷ್ಕರೆ ತಯ್ಬಾ ಉಗ್ರರು ಸ್ಫೋಟ ನಡೆಸಿದ್ದು ಇದರಲ್ಲಿ ಮೂವರು ಗಾಯಗೊಂಡಿದ್ದರು. 20 ಮಂದಿ ಗಾಯಗೊಂಡಿದ್ದರು. ಕೇವಲ ಒಂದುವರೆ ಗಂಟೆ ಅವಧಿಯಲ್ಲಿ ಬೆಂಗಳೂರಿನ ನಾನಾ ಭಾಗಗಳಲ್ಲಿ ಒಂದರ ಹಿಂದೆ ಸರಣಿಯಾಗಿ ಸ್ಫೋಟ ಸಂಭವಿಸಿತ್ತು.

ಮಡಿವಾಳದಿಂದ ನಾಯಂಡಹಳ್ಳಿಯವರಗೆ ಅಲ್ಲಲ್ಲಿ ಜಿಲ್ಯಾಟಿನ್‌ ಬಳಸಿ ಸ್ಫೋಟ ನಡೆಸಲಾಗಿತ್ತು.
ಮೊದಲ ಸ್ಫೋಟ: ಮಡಿವಾಳ ಬಸ್ ಸ್ಟ್ಯಾಂಡ್- ಮಧ್ಯಾಹ್ನ 1.20
ಎರಡನೇ ಸ್ಫೋಟ: ಮೈಸೂರು ರಸ್ತೆ – ಮಧ್ಯಾಹ್ನ 1-25ರ ಸಮಯ
ಮೂರನೇ ಸ್ಫೋಟ: ಆಡುಗೋಡಿ – ಮಧ್ಯಾಹ್ನ 1-40 ಸಮಯ
ನಾಲ್ಕನೇ ಸ್ಫೋಟ: ಕೋರಮಂಗಲ – ಮಧ್ಯಾಹ್ನ 2-10
ಐದನೇ ಸ್ಫೋಟ: ವಿಠಲ್ ಮಲ್ಯ ರೋಡ್ -ಮಧ್ಯಾಹ್ನ 2-25ರ ಹೊತ್ತು
ಆರನೇ ಸ್ಫೋಟ: ಲ್ಯಾಂಗ್ ಫೋರ್ಡ್ ರೋಡ್: ಮಧ್ಯಾಹ್ನ 2-35 ಸಮಯ
ಏಳನೇ ಸ್ಫೋಟ: ರಿಚ್ಮಂಡ್ ಟೌನ್ ಬಳಿ ಸ್ಫೋಟ
ಎಂಟನೆಯದ್ದು: ಫೋರಂ ಮಾಲ್ ಬಳಿ ಬಾಂಬ್ ಪತ್ತೆ
9ನೆಯದ್ದು: ನಾಯಂಡಹಳ್ಳಿ ಬಳಿ ಪತ್ತೆಯಾಗಿತ್ತು.

Blast in Bengaluru 2014 Blasts church Street

ಆವತ್ತು ಈ ಸ್ಫೋಟವನ್ನು ಸಂಘಟಿಸಿದ್ದು ಟಿ. ನಝೀರ್‌ ಮತ್ತು ಅಬ್ದುಲ್‌ ಸತ್ತಾರ್‌ ಎಂಬ ಲಷ್ಕರ್‌ ಉಗ್ರರು. ಇಬ್ಬರು ಕೂಡಾ ಪಿಡಿಪಿಯ ಅಬ್ದುಲ್ ನಾಸಿರ್ ಮದನಿ ಜೊತೆ ಸಂಪರ್ಕ ಹೊಂದಿದ್ದರು. ಈ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಟಿ. ನಝೀರ್‌ ಕಳೆದ 10 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

2010: ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಬಾಂಬ್‌ ಬ್ಲಾಸ್ಟ್‌ (Blasts at Chinnaswamy Stadium)

2010ರ ಏಪ್ರಿಲ್‌ 17ರಂದು ಬೆಂಗಳೂರಿನ ಪ್ರತಿಷ್ಠಿತ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಮುಂಬಯಿ ಇಂಡಿಯನ್ಸ್‌ ತಂಡಗಳ ನಡುವೆ ಐಪಿಎಲ್‌ ಪಂದ್ಯ ನಡೆಯುತ್ತಿದ್ದಾಗಲೇ ಬಾಂಬ್‌ ಸ್ಫೋಟ ಸಂಭವಿಸಿತ್ತು. ಎರಡು ಬಾಂಬ್‌ಗಳು ಸ್ಟೇಡಿಯಂ ಒಳಗೇ ಸಿಡಿದು 15 ಮಂದಿ ಗಾಯಗೊಂಡರೆ, ಇನ್ನೊಂದನ್ನು ಸ್ಟೇಡಿಯಂ ಹೊರಗಡೆ ನಿಷ್ಕ್ರಿಯಗೊಳಿಸಲಾಗಿತ್ತು. ಈ ಘಟನೆಯ ಮರುದಿನ ಅಂದರೆ ಏಪ್ರಿಲ್‌ 18ರಂದು ಸ್ಟೇಡಿಯಂನ ಒಳಗಡೆ ಇನ್ನೆರಡು ಬಾಂಬ್‌ಗಳು ಸಿಕ್ಕಿದ್ದವು.! ಇಲ್ಲಿ ಬಳಸಿದ್ದ ಕಲ್ಲಿನ ಕೋರೆಗಳಲ್ಲಿ ಬಳಸುವ ಕಚ್ಚಾ ಬಾಂಬ್‌ಗಳನ್ನು. ಆದರೆ, ಟೈಮರ್‌ ಫಿಕ್ಸ್‌ ಮಾಡಿ ಸಿಡಿಸಲಾಗಿತ್ತು.

Blast in Bengaluru 2014 Blasts church Street

ಈ ಪ್ರಕರಣದಲ್ಲಿ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯಾಸಿನ್‌ ಭಟ್ಕಳ್‌ ಮತ್ತು ಇತರ 14 ಮಂದಿಯನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಇವರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಶಾಮೀಲಾಗಿದ್ದ ಮೊಹಮ್ಮದ್‌ ಖತೀಲ್‌ ಸಿದ್ದಿಕಿ ಎಂಬಾತನನ್ನು ಯರವಾಡ ಜೈಲಿನಲ್ಲಿ ಅಲ್ಲಿನ ಸಹ ಕೈದಿಗಳೇ ಕೊಂದು ಹಾಕಿದ್ದರು. 2018ರ ಜುಲೈನಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯ 14 ಆರೋಪಿಗಳಲ್ಲಿ ಮೂವರಾದ ಗೌಹರ್‌ ಅಜೀಜ್‌ ಖೊಮಾನಿ, ಕಮಲ್‌ ಹಾನ್‌ ಮತ್ತು ಮಹಮ್ಮದ್‌ ಕಫೀಲ್‌ ಅಖ್ತರ್‌ (ಎಲ್ಲರೂ ಬಿಹಾರದವರು) ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

2013 : ಬಿಜೆಪಿ ಕಚೇರಿಯ ಮುಂದೆಯೇ ಸ್ಫೋಟ; ವಾಹನಗಳು ಛಿದ್ರ (Blasts near BJP Office)

2013ರ ಏಪ್ರಿಲ್‌ 17ರಂದು ಬೆಂಗಳೂರಿನ ಮಲ್ಲೇಶ್ವರಂ 11ನೇ ಕ್ರಾಸ್‌ನಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದ ಎದುರು ಬಾಂಬ್‌ ಸ್ಫೋಟ ಸಂಭವಿಸಿ ಸುಮಾರು 16 ಮಂದಿ ಗಾಯಗೊಂಡಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಎರಡು ಕಾರುಗಳ ನಡುವೆ ನಿಲ್ಲಿಸಲಾಗಿದ್ದ ಬೈಕ್‌ನಲ್ಲಿ ಇಟ್ಟಿದ್ದ ಟೈಮರ್‌ ಬಾಂಬ್‌ ಸ್ಪೋಟಗೊಂಡಿತ್ತು. ಇದರಿಂದ ಮೂರೂ ವಾಹನಗಳು ಛಿದ್ರಗೊಂಡಿದ್ದವು. ಒಟ್ಟು 16 ಮಂದಿಗೆ ಗಾಯಗಳಾಗಿದ್ದವು. ಘಟನೆ ಸಂಬಂಧ ಸಯ್ಯದ್‌ ಅಲಿ ಮತ್ತು ಜಹಾನ್‌ ಅಮೀರ್‌ ಎಂಬವರನ್ನು ಬಂಧಿಸಲಾಗಿತ್ತು.

Blast in Bengaluru 2014 Blasts church Street

ಇದನ್ನೂ ಓದಿ : Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ; ಇವನೇ ನೋಡಿ ಬಾಂಬ್‌ ಇಟ್ಟವನು!

2014 : ಬೆಂಗಳೂರನ್ನು ಬೆಚ್ಚಿಬೀಳಿಸಿದ ಚರ್ಚ್‌ ಸ್ಟ್ರೀಟ್‌ ಬ್ಲಾಸ್ಟ್ (Church Street Blast)

‌2014ರ ಡಿಸೆಂಬರ್‌ 28ರಂದು ಬೆಂಗಳೂರಿನ ಪ್ರತಿಷ್ಠಿತ ಚರ್ಚ್‌ ಸ್ಟ್ರೀಟ್‌ನಲ್ಲಿ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಒಬ್ಬ ಮಹಿಳೆ ಮೃತಪಟ್ಟಿದ್ದರು. ಚರ್ಚ್‌ ಸ್ಟ್ರೀಟ್‌ನ ಕೋಕೊನಟ್‌ ಗ್ರೋವ್‌ ರೆಸ್ಟೋರೆಂಟ್‌ನ ಹೊರಗೆ ಪಾದಚಾರಿ ರಸ್ತೆಯಲ್ಲಿ ಇದ್ದ ಹೂವಿನ ಕುಂಡದಲ್ಲಿ ದುಷ್ಕರ್ಮಿಗಳು ಬಾಂಬ್‌ ಇಟ್ಟು ಹೋಗಿದ್ದರು. ರಾತ್ರಿ ಸುಮಾರು 8.30ಕ್ಕೆ ಈ ಬಾಂಬ್‌ ಸ್ಫೋಟ ಸಂಭವಿಸಿ ಐದು ಮಂದಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಭವಾನಿ ಎಂಬ 37ರ ಮಹಿಳೆ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟರು. ಆಕೆಯ ತಲೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದವು. ಗಾಯಗೊಂಡ ಇತರರೆಂದರೆ ಭವಾನಿ ಅವರ ಅಳಿಯ ಕಾರ್ತಿಕ್‌ (21), ಸಂದೀಪ್‌ ಎಚ್‌. (39) ಮತ್ತು ವಿಜಯ್‌ ಎಂ.ಆರ್‌. (35).

Blast in Bengaluru 2014 Blasts church Street

ಗಂಧಕ ಮತ್ತು ಪೊಟ್ಯಾಶಿಯಂ ನೈಟ್ರೇಟನ್ನು ಅಲ್ಯುಮಿನಿಯಂ ಪುಡಿಯೊಂದಿಗೆ ಮಿಕ್ಸ್‌ ಮಾಡಿ ಈ ಸ್ಫೋಟಕವನ್ನು ತಯಾರು ಮಾಡಲಾಗಿತ್ತು. ಇದಕ್ಕೆ ಕಬ್ಬಿಣದ ಮೊಳೆಗಳನ್ನು ಸೇರಿಸಲಾಗಿತು. ಸುಮಾರು 8ರಿಂದ 9 ಇಂಚು ಉದ್ದದ ಪೈಪ್‌ನಲ್ಲಿ ಇವುಗಳನ್ನು ಇಡಲಾಗಿತ್ತು. ಇದನ್ನು ಪೈಪ್‌ ಬಾಂಬ್‌ ಎಂದು ಕರೆಯಲಾಗಿತ್ತು. ಅದನ್ನು ರಿಮೋಟ್‌ ಸೆನ್ಸಾರ್‌ ಮೂಲಕ ಸಿಡಿಸಲಾಗಿತ್ತು. ಸ್ಫೋಟದ ವೇಳೆ ಹಾರಿಬಂದ ಮೊಳೆಯೊಂದು ಮಹಿಳೆಯ ಹಣೆಯ ಭಾಗವನ್ನು ಹೊಕ್ಕಿತ್ತು. ಹೀಗಾಗಿ ಅವರ ಸಾವೇ ಸಂಭವಿಸಿತು. ಈ ಘಟನೆಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿರಲಿಲ್ಲ. ಪೊಲೀಸರು ಇಂಡಿಯನ್‌ ಮುಜಾಹಿದೀನ್‌ಗೆ ಸೇರಿದ ಹೈದರ್‌ ಅಲಿ ಮತ್ತು ಒಮರ್‌ ಸಿದ್ದಿಕಿಯನ್ನು ಬಂಧಿಸಿದ್ದರು.

2005ರಲ್ಲಿ ಐಐಎಸ್‌ಸಿಯಲ್ಲಿ ವಿಜ್ಞಾನಿ ಹತ್ಯೆ ಗ್ರೆನೇಡ್‌ ದಾಳಿ

ಇದೆಲ್ಲದಕ್ಕಿಂತಲೂ ಮೊದಲು 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ವಿಜ್ಞಾನಿಯೊಬ್ಬರನ್ನು 2005 ಡಿಸೆಂಬರ್‌ 8ರಂದು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಶೂಟೌಟ್‌ ಮಾತ್ರವಲ್ಲದೇ ಗ್ರೆನೇಡ್‌ ದಾಳಿಯನ್ನು ಕೂಡ ಲಷ್ಕರ್‌ ಉಗ್ರರು ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಲಷ್ಕರ್‌ ಉಗ್ರರಿಗೆ ಶಿಕ್ಷೆ ಕೂಡ ವಿಧಿಸಲಾಗಿದೆ. ಇದು ಬೆಂಗಳೂರಿನಲ್ಲಿ ದಾಖಲಾದ ಮೊದಲ ಉಗ್ರ ಕೃತ್ಯ.

Exit mobile version