ಬೆಂಗಳೂರು: ರಾಜಧಾನಿಯ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಸ್ಫೋಟವನ್ನು (Bomb Blast) ನಡೆಸಿದ್ದು ಒಬ್ಬನೇ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಮೂರು ಪ್ರಮುಖ ಸ್ಫೋಟಗಳು (Blast in Bengaluru) ಸಂಭವಿಸಿದ್ದು, ಮೂರೂ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿದ್ದು, ಇದನ್ನು ಒಂಟಿ ತೋಳ ಅಟ್ಯಾಕ್ (Single Wolf attack) ಎಂದು ವ್ಯಾಖ್ಯಾನಿಸಲಾಗಿದೆ.
2014ರ ಡಿಸೆಂಬರ್ 28ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಕೋಕೊನಟ್ ಗ್ರೋವ್ ರೆಸ್ಟೋರೆಂಟ್ (Coconut Grove restaurant) ಎದುರಿನ ಪಾದಚಾರಿ ರಸ್ತೆಯ ಹೂವಿನ ಕುಂಡದಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಅದರಲ್ಲಿ ಭವಾನಿ ಎಂಬ 37 ವರ್ಷದ ಮಹಿಳೆ ಮೃತಪಟ್ಟಿದ್ದರು. ಅಂದು ಈ ಕೃತ್ಯವನ್ನು ನಡೆಸಿದ್ದು ಒಬ್ಬನೇ ಎನ್ನುವುದು ತನಿಖೆಯಲ್ಲಿ ಗೊತ್ತಾಗಿತ್ತು.
2022ರ ನವೆಂಬರ್ 19ರಂದು ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಅದನ್ನು ನಡೆಸಿದ್ದು ಶಿವಮೊಗ್ಗದ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಖ್. ಈ ಪ್ರಕರಣದಲ್ಲಿ ಕೂಡಾ ಒಬ್ಬನೇ ಭಾಗಿಯಾಗಿದ್ದ.
ಇದೇ ರೀತಿ ರಾಮೇಶ್ವರಂ ಕೆಫೆ ಸ್ಫೋಟದಲ್ಲೂ ಒಬ್ಬನೇ ವ್ಯಕ್ತಿ ಒಂಟಿ ತೋಳದ ರೀತಿಯಲ್ಲಿ ಈ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ. ಅಂದರೆ ಈ ಕೃತ್ಯದ ಹಿಂದೆ ಎಷ್ಟೇ ಜನರು ಇರಬಹುದು. ಆದರೆ, ಒಟ್ಟಾರೆ ಕೃತ್ಯವನ್ನು ಹ್ಯಾಂಡಲ್ ಮಾಡಿದ್ದು ಒಬ್ಬನೇ ವ್ಯಕ್ತಿ ಎನ್ನುವುದು ಈಗ ಬಯಲಾಗಿದೆ.
ಚರ್ಚ್ ಸ್ಟ್ರೀಟ್ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಅಂದು ಐಸಿಸ್ ತಾನು ಹೊತ್ತುಕೊಂಡಿತ್ತು. ಆದರೆ, ರಾಮೇಶ್ವರಂ ಕೆಫೆ ವಿಚಾರದಲ್ಲಿ ಮೌನವಾಗಿದೆ.
ಇದನ್ನು ಓದಿ : Blast in Bengaluru : ಬಾಂಬ್ ಬ್ಲಾಸ್ಟ್ ಆದ ರಾಮೇಶ್ವರಂ ಕೆಫೆ ಶಿವರಾತ್ರಿ ದಿನ ರೀ ಓಪನ್
Blast in Bengaluru : ಏನಿದು ಒಂಟಿ ತೋಳ ಮಾದರಿ ದಾಳಿ?
ರಾಮೇಶ್ವರಂ ಕೆಫೆ ದಾಳಿ ಪ್ರಕರಣವನ್ನು ನಾನಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ಪ್ರತ್ಯೇಕ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಇಲ್ಲಿ ನಡೆದಿರುವ ದಾಳಿಯನ್ನು ಒಂಟಿ ತೋಳ ದಾಳಿ (single Wolf Terrorist) ಎಂಬ ಮಾದರಿ ಎಂದು ಉಲ್ಲೇಖಿಸಲಾಗಿದೆ. ಒಬ್ಬನೇ ವ್ಯಕ್ತಿ ಬಾಂಬ್ ತಯಾರಿಸಿ, ಆತನೇ ಸ್ಫೋಟಿ ಸುವ ಸಂಪೂರ್ಣ ಜವಾಬ್ದಾರಿ ಹೊಂದಿದ್ದರೆ ಒಂಟಿ ತೋಳ ಭಯೋತ್ಪಾದಕ ಎಂದು ಹೆಸರು ನೀಡಲಾಗುತ್ತದೆ. ಈ ಹೆಸರನ್ನು ಮೊದಲು ನೀಡಿದ್ದು ಅಮೆರಿಕ.
ಹಲವು ರಾಜ್ಯಗಳ ಸಂಪರ್ಕದಲ್ಲಿ ಪೊಲೀಸರು
ಈ ನಡುವೆ, ರಾಮೇಶ್ವರಂ ಕೆಫೆಯಲ್ಲಿ ಕೃತ್ಯ ನಡೆಸಿ ಪರಾರಿಯಾಗಿರುವ ಈತನಿಗಾಗಿ ಎಲ್ಲ ಕಡೆ ಹುಡುಕಾಟ ನಡೆಯುತ್ತಿದೆ. ರಾಜ್ಯದ ಪೊಲೀಸರು ಮಹಾರಾಷ್ಟ್ರ ಹಾಗೂ ತೆಲಂಗಾಣದ ಎಟಿಸಿ ಹಾಗೂ ಕೌಂಟರ್ ಇಂಟೆಲಿಜೆನ್ಸ್ ಸೆಲ್ ಟೀಂ ಸಂಪರ್ಕದಲ್ಲಿದ್ದಾರೆ. ಕೌಂಟರ್ ಇಂಟಲಿಜೆನ್ಸ್ ಸೆಲ್‌ಗಳು ಬಾಂಬ್ ಸ್ಫೋಟ. ಉಗ್ರ ಕೃತ್ಯಗಳ ತನಿಖೆಯಲ್ಲಿ ಖ್ಯಾತಿ ಗಳಿಸಿದೆ. ನಗರ ಪೊಲೀಸರು ತಮಿಳುನಾಡು, ಕೇರಳ ಹಾಗೂ ತೆಲಂಗಾಣದಲ್ಲಿ ಬೀಡುಬಿಟ್ಟಿದ್ದಾರೆ.
ಮೂರ್ನಾಲ್ಕು ಬಸ್ ಚೇಂಜ್, ಗಡಿ ದಾಟಿ ಹೋಗಿದ್ದಾನಾ ಕಿರಾತಕ?
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದ. ಬ್ಯಾಗ್ ಹಾಕಿಕೊಂಡು ರಾಮೇಶ್ವರ ಕೆಫೆಗೆ ಬಂದು ಇಡ್ಲಿ ತಿಂದು ಅಲ್ಲೇ ಬ್ಯಾಗ್ ಇಟ್ಟು ಹೋಗಿದ್ದ ಆತ ಅಲ್ಲಿಂದ ಮತ್ತೆ ಬಸ್‌ನಲ್ಲೇ ಹೋಗಿದ್ದ.
ಆತ ಹಲವು ಬಸ್‌ಗಳಲ್ಲಿ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ಇದೆ. ಒಂದು ಬಸ್ ನಲ್ಲಿ ಒಂದೇ ಸ್ಟಾಪ್ ಪ್ರಯಾಣ ಮಾಡಿ 15ಕ್ಕೂ ಅಧಿಕ ಬಸ್ ಗಳಲ್ಲಿ ಪ್ರಯಾಣ ಮಾಡಿರುವ ಮಾಹಿತಿ ಇದೆ. ಹೀಗೆ ಮಾಡುವ ಮೂಲಕ ತನ್ನನ್ನು ಯಾರೂ ಟ್ರ್ಯಾಕ್ ಮಾಡದಂತೆ ಜಾಗರೂಕತೆ ವಹಿಸಿದ್ದಾನೆ ಎನ್ನಲಾಗಿದೆ.
ಬೇರೆ ಬೇರೆ ರೂಟ್ ನ ಬಸ್ ಗಳಲ್ಲಿ ಪ್ರಯಾಣ ಮಾಡಿರುವ ಶಂಕಿತ ಆರೋಪಿ, ಕೆಲ ಬಸ್ ಗಳಲ್ಲಿ ಟಿಕೆಟ್ ಪಡೆದು, ಇನ್ನೂ ಕೆಲ ಬಸ್ ಗಳಲ್ಲಿ ಟಿಕೆಟ್ ಪಡೆಯೇದ ಪ್ರಯಾಣಿಸಿರುವ ಮಾಹಿತಿ ಇದೆ.
ಶರ್ಟ್, ಪ್ಯಾಂಟ್ ಬದಲಿಸಿ ತಪ್ಪಿಸಿಕೊಂಡನಾ ಆರೋಪಿ?
ಈ ನಡುವೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಪೊಲೀಸರನ್ನು ಯಾಮಾರಿಸಲು ಶರ್ಟ್ ಮತ್ತು ಪ್ಯಾಂಟ್ ಬದಲಿಸಿ ಹೋಗಿದ್ದಾನೆ ಎನ್ನಲಾಗಿದೆ.
ಶರ್ಟ್ ಮೇಲೆ ಶರ್ಟ್ ಹಾಕಿಕೊಂಡು ಬಂದಿದ್ದ ಆತ ಎಸ್ಕೇಪ್ ವೇಳೆ ತಕ್ಷಣ ಬಟ್ಟೆ ಬದಲಿಸಿದ್ದಾನೆ ಎನ್ನಲಾಗಿದೆ. ಈ ರೀತಿ ಬದಲಿಸುವ ಸಿಸಿಟಿವಿ ದೃಶ್ಯ ಕಲೆಹಾಕಲು ಪೊಲೀಸರು ಸರ್ಕಸ್ ಮಾಡುತ್ತಿದ್ದಾರೆ. ಸಿಸಿಬಿ ಮತ್ತು ಪೊಲೀಸ್ ಇಲಾಖೆಯ ಇನ್ನೂರಕ್ಕೂ ಹೆಚ್ಚು ಅಧಿಕಾರಿಗಳಿಂದ ಶಂಕಿತನಿಗಾಗಿ ಹುಡುಕಾಟ ನಡೆಯುತ್ತಿದೆ.