ಬೆಂಗಳೂರು: ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಸ್ಫೋಟದ (Blast in Bengaluru) ರೂವಾರಿಯನ್ನು ಸೆರೆ ಹಿಡಿಯಲು ಎನ್‌ಐಎ ಮತ್ತು ಪೊಲೀಸರು (NIA And police) ನಡೆಸುತ್ತಿರುವ ಶತ ಪ್ರಯತ್ನಗಳು ಫಲ ನೀಡುತ್ತಿಲ್ಲ. ಬಾಂಬ್ ಇಟ್ಟು ಹೋದ ಆ ಟೋಪಿವಾಲಾ (Topiwala Bomber) ದುಷ್ಕರ್ಮಿ ಅಲ್ಲಿದ್ದಾನೆ, ಇಲ್ಲಿದ್ದಾನೆ ಎಂಬ ಬಗ್ಗೆ ದಿನಕ್ಕೊಂದು ಹೊಸ ಕಥೆಗಳು ಹುಟ್ಟಿಕೊಳ್ಳುತ್ತಿವೆ. ಕೊನೆಯದಾಗಿ ಹೇಳಲಾಗುತ್ತಿರುವ ಪ್ರಕಾರ ಆತ ದಕ್ಷಿಣ ಕನ್ನಡದ ಬಂಟ್ವಾಳ ತಲುಪಿದ್ದಾನೆ ಎನ್ನಲಾಗುತ್ತಿದೆ! ಈ ನಡುವೆ ಎನ್‌ಐಎ ಆರೋಪಿಯ ಟ್ರಾವೆಲ್ ಹಿಸ್ಟರಿಯನ್ನು (Travel history) ಇಟ್ಟುಕೊಂಡು ಹಳೆ ಶಂಕಿತರ ಬೆನ್ನುಹತ್ತಿದೆ.
ನಾಲ್ವರನ್ನು ವಶಕ್ಕೆ ಪಡೆದ ಎನ್ಐಎ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಹೋದ ಆರೋಪಿ ತುಮಕೂರಿಗೆ ಹೋಗಿ ಅಲ್ಲಿಂದ ಬಳ್ಳಾರಿ ತಲುಪಿದ್ದಾನೆ ಎಂಬ ಮಾಹಿತಿ ಇದೆ. ಎನ್‌ಐಎ ಅಧಿಕಾರಿಗಳು ಕೂಡಾ ಈ ಮಾಹಿತಿಯನ್ನೇ ಆಧರಿಸಿ ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ. ಆತ ಅಲ್ಲಿಂದ ಭಟ್ಕಳಕ್ಕೆ ಹೋಗುವ ಬಸ್ಸಿನಲ್ಲಿ ಹೋಗಿದ್ದಾನೆ ಎಂಬ ಮಾಹಿತಿ ಇದೆ. ಮುಂದೆ ಆತ ದಕ್ಷಿಣ ಕನ್ನಡದ ಬಂಟ್ವಾಳಕ್ಕೆ ಹೋಗಿದ್ದಾನೆ ಎಂಬುದು ಪೊಲೀಸರಿಗೆ ಸಿಕ್ಕಿರುವ ಮಾಹಿತಿ.
ಇದೀಗ ಆತ ಬಳ್ಳಾರಿಗೆ ಯಾಕೆ ಹೋದ? ಅಲ್ಲಿ ಅವನಿಗೆ ಇರುವ ಲಿಂಕ್‌ಗಳು ಯಾವುವು? ಎನ್ನುವ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಎನ್‌ಐಎ ಅಧಿಕಾರಿಗಳು ಮಿನಾಝ್ ಅಲಿಯಾಸ್ ಸುಲೇಮಾನ್ ಎಂಬ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಂಕಿತನ ವಿಚಾರಣೆ ನಡೆಸಿದರು. ನಂತರ ಬಾಡಿ ವಾರೆಂಟ್ ಮೂಲಕ ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಶುಕ್ರವಾರ ಮತ್ತೆ ಮೂರು ಜನರನ್ನು ಎನ್ಐಎ ವಶಕ್ಕೆ ಪಡೆದಿದೆ. ಬಳ್ಳಾರಿಯ ಸೈಯದ್ ಸಮೀರ್, ದೆಹಲಿಯ ಶಯಾನ್ ರೆಹಮಾನ್ ಹಾಗು ಅನಾಸ್ ಇಕ್ಬಾಲ್ ಶೇಕ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ವೈಲೆಂಟ್ ಜಿಹಾದಿ ಭೋದನೆ, ಖಿಲಾಫತ್ ಬಗೆಗಿನ ವ್ಯಾಖ್ಯಾನಗಳನ್ನ ಮಾಡಿ ಯುವಕರನ್ನು ಐಸೀಸ್‌ಗೆ ಸೆಳೆದು ಉಗ್ರ ಚಟುವಟಿಕೆಗೆ ಪ್ರಚೋದನೆ ನೀಡುತ್ತಿದ್ದರು ಎಂಬ ಆರೋಪವಿತ್ತು.
ಈ ಕಾರಣದಿಂದ ಎನ್ ಐ ಎ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಳ್ಳಾರಿಯಲ್ಲಿ ದಾಳಿ ನಡೆಸಿ ಇವರನ್ನು ಬಂಧಿಸಿತ್ತು. ಈಗ ಮಿನಾಝ್ ಸೇರಿದಂತೆ ನಾಲ್ವರನ್ನ ಎನ್ ಐ ಎ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಂದ ಹಾಗೆ ಇವರ ನಡುವೆ ಸಂಪರ್ಕದಲ್ಲಿರುವಂತಹ ವ್ಯಕ್ತಿಯೇ ಜೀಹಾದಿಯನ್ನ ತಲೆಗೇರಿಸಿಕೊಂಡು ಬಾಂಬ್ ಸ್ಪೋಟ ಮಾಡಿರುವ ಸಾಧ್ಯತೆ ತೀರ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಎನ್ಐಎ ಅಧಿಕಾರಿಗಳು ಇವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Rameshwaram Cafe : ರಾಷ್ಟ್ರಗೀತೆಯೊಂದಿಗೆ ನಾಳೆ ಮತ್ತೆ ತೆರೆಯಲಿದೆ ರಾಮೇಶ್ವರಂ ಕೆಫೆ
ಬ್ರೂಕ್ ಫೀಲ್ಡ್ ರಾಮೇಶ್ವರಂ ಕೆಫೆಯೇ ಯಾಕೆ ಟಾರ್ಗೆಟ್?
ಬಾಂಬರ್ ಸ್ಫೋಟಕ್ಕೆ ಬ್ರೂಕ್ ಫೀಲ್ಡ್ ನ ರಾಮೇಶ್ವರಂ ಕೆಫೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡ ಎಂಬುದು ಕೂಡ ಇಂಟರೆಸ್ಟಿಂಗ್ ಆಗಿದೆ. ಜೆಪಿ ನಗರ, ರಾಜಾಜಿನಗರ ಇಂದಿರಾ ನಗರ ಸೇರಿ ನಗರದಲ್ಲಿ ಒಟ್ಟು ನಾಲ್ಕು ಕಡೆ ರಾಮೇಶ್ವರಂ ಕೆಫೆ ಇದೆ. ಆದರೆ ಬ್ರೂಕ್ ಫೀಲ್ಡ್ ಆಯ್ಕೆ ಮಾಡಿಕೊಂಡಿದಕ್ಕೆ ಕಾರಣವೂ ಇದೆ.
ಈ ಕೆಫೆ ಕೋಲಾರ, ಚೆನ್ನೈ, ಹೈದರಾಬಾದ್‌ಗೆ ಹೋಗುವ ದಾರಿಯ ಆಯಕಟ್ಟಿನ ಜಾಗದಲ್ಲಿದೆ. ಬ್ಲಾಸ್ಟ್ ಆದ ಬಳಿಕ ಪೊಲೀಸರು, ಸಹಜವಾಗಿಯೇ ಪೊಲೀಸರು ಆ ಭಾಗದಲ್ಲಿ ಎಸ್ಕೇಪ್ ಆಗಿರಬಹುದೆಂದು ಆ ಭಾಗದಲ್ಲಿ ಗಮನ ಕೇಂದ್ರೀಕರಿಸುತ್ತಾರೆ. ಆಗ ತಾನು ಬೇರೆ ಕಡೆ ಹೋಗಬಹುದು ಎಂಬ ಯೋಚನೆಯಿಂದ ಅಲ್ಲಿಗೆ ಲಗ್ಗೆ ಇಟ್ಟಿದ್ದಾನೆ ಎನ್ನಲಾಗಿದೆ. ಅವನ ಪ್ಲ್ಯಾನ್ ಸರಿಯಾಗಿ ವರ್ಕೌಟ್ ಆಗಿದೆ.