Site icon Vistara News

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಶಂಕಿತ ಉಗ್ರ ಮಾಝ್‌ ಮುನೀರ್‌ NIA ವಶಕ್ಕೆ

Blast in Bengaluru NIA Maaz muneer1

ಬೆಂಗಳೂರು: ಮಾರ್ಚ್‌ 1ರಂದು ಮಧ್ಯಾಹ್ನ 12.55ಕ್ಕೆ ಬೆಂಗಳೂರಿನ ವೈಟ್‌ ಫೀಲ್ಡ್‌ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಇಟ್ಟು (Blast in Bengaluru) ಸ್ಫೋಟಿಸಿದ ಪ್ರಕರಣದ ಪ್ರಧಾನ ರೂವಾರಿಯನ್ನು ಪತ್ತೆ ಹಚ್ಚಲು ಎನ್‌ಐಎ ಮತ್ತು ಇತರ ಪೊಲೀಸ್‌ ವ್ಯವಸ್ಥೆ ತೀವ್ರ ಹುಡುಕಾಟ ನಡೆಸುತ್ತಿದೆ. ರಾಜ್ಯದ ನಾನಾ ಕಡೆಗಳಲ್ಲಿ ಅವನ ಜಾಡನ್ನು ಹಿಡಿದು ಹೋಗಿದ್ದರೂ ಇದುವರೆಗೆ ಫಲ ಸಿಕ್ಕಿಲ್ಲ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಒಂದು ಟ್ವಿಸ್ಟ್‌ನಲ್ಲಿ ಎನ್‌ಐಎ ಪೊಲೀಸರು (NIA Police) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಂಕಿತ ಉಗ್ರ ಮಾಝ್‌ ಮುನೀರ್‌ನನ್ನು (Suspected terrorist Maaz Muneer) ವಶಕ್ಕೆ ಪಡೆದಿದ್ದಾರೆ.

ಘಟನೆ ನಡೆದು ಹದಿನೈದು ದಿನಗಳೇ ಕಳೆದುಹೋಗಿವೆ. ಆದರೆ, ಆರೋಪಿಯ ಸುಳಿವಿಲ್ಲ. ಆತ ಬೆಂಗಳೂರಿನ ಹೋಟೆಲ್‌ನಲ್ಲಿ ಬಾಂಬಿಟ್ಟು ಗುರುಗುಂಟೆ ಪಾಳ್ಯದಲ್ಲಿ ಬಸ್‌ ಹತ್ತಿ ತುಮಕೂರಿಗೆ ಹೋಗಿ, ಅಲ್ಲಿಂದ ಬಳ್ಳಾರಿಗೆ ಹೋಗಿದ್ದಾಗಿ ಹೇಳಲಾಗಿತ್ತು.‌ ಎನ್‌ಐಎ ಪೊಲೀಸರು ನಾನಾ ಜಾಡುಗಳನ್ನು ಹಿಡಿದು ಯಾದಗಿರಿ ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಶಂಕಿತ ಬಾಂಬರ್‌ನ ಹಲವು ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ನಡುವೆ, ಶಂಕಿತ ಬಾಂಬರ್‌ ಜತೆಗೆ ಸಂಪರ್ಕದಲ್ಲಿದ್ದಾರೆ ಎಂದು ಸಂಶಯವಿದ್ದ ಮಿನಾಜ್‌ ಸೇರಿದಂತೆ ಹಲವು ವ್ಯಕ್ತಿಗಳನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆಯಲ್ಲಿ ಯಾವುದೇ ಸುಳಿವು ಸಿಗದೆ ಮರಳಿ ಜೈಲಿಗೆ ಬಿಟ್ಟಿದೆ.

ಇದೀಗ ಪಶ್ಚಿಮ ಘಟ್ಟಗಳಲ್ಲಿ ಕೂತು ಕ್ರಿಮಿನಲ್ ಸಂಚು ಮಾಡಿ ಸಮಾಜ ವಿದ್ರೋಹ ಕೃತ್ಯ ಎಸಗುತ್ತಿದ್ದ ತೀರ್ಥಹಳ್ಳಿ ಬ್ರದರ್ಸ್ ಗಳಲ್ಲಿ ಒಬ್ಬನಾದ ಮಾಝ್ ಮುನೀರ್‌ನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದಲ್ಲಿ Big breaking; ಬಳ್ಳಾರಿಯ ಶಬ್ಬೀರ್‌ NIA ವಶಕ್ಕೆ

ಮಾಝ್ ಮುನೀರ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ. ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಸಂಚಿನಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಹೇಳಲಾದ ಮಾಜ್‌ ಮುನೀರ್‌ನ ಮೇಲೆ ಕಣ್ಣು ಬಿದ್ದಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಾಡಿ ವಾರೆಂಟ್ ಪಡೆದು ಮಾಝ್ ಮುನೀರ್‌ನ ವಿಚಾರಣೆ ನಡೆಸಲಾಗುತ್ತಿದೆ.

ಮೊಹಮ್ಮದ್‌ ಶಾರಿಕ್‌, ಮಾಝ್‌ ಮುನೀರ್‌ ಸೇರಿದಂತೆ ಹಲವರು ತೀರ್ಥಹಳ್ಳಿ ಪರಿಸರದಲ್ಲಿ ಉಗ್ರ ಕೃತ್ಯಕ್ಕೆ ಸಂಚು ನಡೆಸುತ್ತಿದ್ದವರು. ಅವರಿಗೆಲ್ಲರಿಗೂ ಗುರುವಾಗಿರುವ ಅಬ್ದುಲ್ ಮತೀನ್ ಸದ್ಯ ಪರಾರಿಯಾಗಿದ್ದಾನೆ. ಆತನ ಇನ್ನೊಬ್ಬ ಸಹಚರನೇ ಮುಸಾವೀರ್ ರೆಹಮಾನ್ ಈತ ಕೂಡ ಎಸ್ಕೇಪ್ ಆಗಿದ್ದಾನೆ.

ಕುಕ್ಕರ್ ಬ್ಲಾಸ್ಟ್ ‌ಗೂ ರಾಮೇಶ್ವರಂ ಬ್ಲಾಸ್ಟ್‌ನಲ್ಲಿ ಬಳಸಿದ ಪದಾರ್ಥಗಳು ಒಂದೇ ತೆರನಾಗಿರುವುದರಿಂದ ತೀರ್ಥಹಳ್ಳಿ ಗ್ಯಾಂಗ್‌ ಮೇಲೆ ಹಲವಾದ ಶಂಕೆ ಮೂಡಿದೆ. ಈ ಹಿಂದೆ ಮಿನಾಝ್ ಮತ್ತು ಶಬೀರ್‌ನನ್ನು ಹಿಡಿದು ವಿಚಾರಣೆ ನಡೆಸಿ ಬಿಡಲಾಗಿದೆ. ಇದೀಗ ಮಾಜ್‌ ಮುನೀರ್‌ನಿಂದ ಏನಾದರೂ ಮಾಹಿತಿ ಸಿಗಬಹುದೇ ಎಂದು ಕಾದು ನೋಡಬೇಕಾಗಿದೆ.

Exit mobile version