Site icon Vistara News

Blast in Bengaluru : ಟೋಪಿವಾಲಾ ಬಾಂಬರ್‌ ಸುಳಿವು ನೀಡಿದರೆ 10 ಲಕ್ಷ ಬಹುಮಾನ: NIA ಘೋಷಣೆ

Blast in Bengaluru Bomber

ಬೆಂಗಳೂರು: ಮಾರ್ಚ್‌ 1ರಂದು ಬೆಂಗಳೂರಿನ ವೈಟ್‌ ಫೀಲ್ಡ್‌ನ ಸಮೀಪದ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಇಟ್ಟ (Blast in Bengaluru) ದುಷ್ಕರ್ಮಿ, ಟೋಪಿವಾಲಾ ಬಾಂಬರ್‌ನ (Topiwala Bomber) ಪತ್ತೆಗೆ ರಾಷ್ಟ್ರೀಯ ತನಿಖಾ ದಳ (National Investigation Agency-NIA) ಸಾರ್ವಜನಿಕರ ನೆರವು ಕೋರಿದೆ. ಬಾಂಬ್‌ ಸ್ಫೋಟದ ರೂವಾರಿಯಾಗಿರುವ ಆ ದುಷ್ಟನ ಸುಳಿವು ನೀಡಿದವರಿಗೆ ಎನ್‌ಐಎ 10 ಲಕ್ಷ ರೂ. ಬಹುಮಾನ ಘೋಷಣೆ (Rupees 10 lakhs prize) ಮಾಡಿದೆ.

ಘಟನೆ ನಡೆದು ಆರು ದಿನಗಳೇ ಕಳೆದರೂ ಇನ್ನೂ ಪ್ರಮುಖ ಆರೋಪಿ ಬಾಂಬರ್‌ ಮತ್ತು ಆತನಿಗೆ ಸಹಾಯ ಮಾಡಿದ ಯಾರ ಸುಳಿವೂ ಸಿಗದ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕಟಣೆಯೊಂದನ್ನು ಹೊರಡಿಸಿದೆ. ದುಷ್ಕರ್ಮಿಗಳ ಸುಳಿದು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.

ಆರೋಪಿ ಸುಳಿವು ನೀಡುವವರು ಎನ್.ಐ.ಎ ನ ಈ ನಂಬರ್ ಗೆ ಸಂಪರ್ಕಿಸಬಹುದು ಎಂದು 080289510999-89042441100 ನಂಬರನ್ನು ನೀಡಿದೆ. ಮಾಹಿತಿ ನೀಡಿದ ಬಾತ್ಮೀದಾರರ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು ಎಂದು ಭರವಸೆ ನೀಡಿದೆ.

Blast in Bengaluru Bomber topilwala

ಮಾರ್ಚ್‌ 1ರಂದು ಮಧ್ಯಾಹ್ನ 12.55ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಕೇವಲ 10 ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾಂಬ್‌ ಗಳು ಸ್ಫೋಟಿಸಿದ್ದವು. ಕಸದ ಡಬ್ಬಿಯ ಸಮೀಪ ಇಟ್ಟಿದ್ದ ಬಾಂಬ್‌ಗಳು ಸ್ಫೋಟಿಸಿ 10 ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಇದೊಂದು ಸಾಮಾನ್ಯ ಸ್ಫೋಟ ಎಂಬ ಎಣಿಕೆ ಇತ್ತಾದರೂ ಮುಂದೆ ಭಯೋತ್ಪಾದಕ ಕೃತ್ಯವೆನ್ನುವುದು ಸ್ಪಷ್ಟವಾಯಿತು. ಇದೀಗ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಆದರೂ ಈ ಪ್ರಕರಣದ ರೂವಾರಿ ಟೋಪಿವಾಲಾನ ಜಾಡನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

ಮಾರ್ಚ್‌ 1ರಂದು ಹೋಟೆಲ್‌ಗೆ ಬಂದು ಬಾಂಬ್‌ ಇಟ್ಟು ಹೋದ ದುಷ್ಕರ್ಮಿ ಆರು ದಿನವಾದರೂ ಪತ್ತೆಯಾಗಿಲ್ಲ. ಅಂದು ಬೆಳಗ್ಗೆ 11.34ಕ್ಕೆ ಟೋಪಿ ಹಾಕಿಕೊಂಡು ಹೋಟೆಲ್‌ ಪ್ರವೇಶಿಸಿದ್ದ ದುಷ್ಕರ್ಮಿ ರವಾ ಇಡ್ಲಿ ಖರೀದಿಸಿ ಅದನ್ನು ತಿಂದು ಬಾಂಬ್‌ನ್ನು ಇಟ್ಟು 11.43ಕ್ಕೆ ಹೋಟೆಲ್‌ನಿಂದ ಹೊರಬಿದ್ದಿದ್ದ. ಬಳಿಕ ಆತ ಎಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಎಲ್ಲೂ ದಾಖಲೆಗಳು ಇದುವರೆಗೆ ಸಿಕ್ಕಿಲ್ಲ ಎನ್ನಲಾಗಿದೆ.

ಈ ನಡುವೆ ಎನ್‌ಐಎ ಚೆನ್ನೈನಲ್ಲಿ ‌ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದೆ. ಅದರ ನಡುವೆ ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರ್‌ ಇ ತಯ್ಬಾ ಜತೆ ಸಂಪರ್ಕ ಹೊಂದಿರುವ ಟಿ. ನಜೀರ್‌ನ ವಿಚಾರಣೆ ನಡೆಸಲಾಗಿದೆ. ಆತನ ಜತೆ ಸಂಪರ್ಕ ಹೊಂದಿರುವ ಇನ್ನೂ ಕೆಲವರನ್ನು‌ ಎನ್‌ಐಎ ವಿಚಾರಣೆ ನಡೆಸಿದೆ. ಆದರೆ, ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ : Blast in Bengaluru : ಬಾಂಬ್‌ ಸ್ಫೋಟ ನಡೆದ ರಾಮೇಶ್ವರಂ ಕೆಫೆ ಮಾ. 9ಕ್ಕೆ ರಿಓಪನ್‌

ಚಿತ್ರ ಬಿಡುಗಡೆ ಮಾಡಿದ ಎನ್‌ಐಎ

ಸ್ಫೋಟಕ ತಂದಿಟ್ಟ ದುಷ್ಕರ್ಮಿಯ ಚಿತ್ರವನ್ನು ಎನ್‌ಐಎ ಬಿಡುಗಡೆ ಮಾಡಿದ್ದು, ಇದರಲ್ಲಿ ಆತ ಟೋಪಿ ಹಾಕಿಕೊಂಡಿದ್ದು, ಮುಖಕ್ಕೆ ಮಾಸ್ಕ್‌ ಧರಿಸಿದ್ದಾನೆ. ತಲೆ ತಗ್ಗಿಸಿಯೇ ಇರುವುದರಿಂದ ಆತನ ಮುಖ ಪರಿಚಯ ಸ್ಪಷ್ಟವಾಗುತ್ತಿಲ್ಲ. ಆದರೆ, ಆತನ ಹಾವ ಭಾವ, ನಡಿಗೆ ಮತ್ತಿತರ ಸುಳಿವುಗಳ ಆಧಾರದಲ್ಲಿ ಆತನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ.

Exit mobile version