Site icon Vistara News

Blast in Bengaluru: ರಾಷ್ಟ್ರಗೀತೆಯೊಂದಿಗೆ ಮರಳಿ ತೆರೆದ ರಾಮೇಶ್ವರಂ ಕೆಫೆ, ಬಿಗಿ ಭದ್ರತೆ; ʻಧೈರ್ಯವಾಗಿರಿʼ ಎಂದ ಗ್ರಾಹಕರು

rameshwaram cafe 1

ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ ಬಳಿಯ ಕುಂದಹಳ್ಳಿಯ ʼರಾಮೇಶ್ವರಂ ಕೆಫೆʼ (Rameshwaram Cafe Blast) ಇಂದು ಮತ್ತೆ ತೆರೆದಿದೆ. ಬಾಂಬ್‌ ಬ್ಲಾಸ್ಟ್‌ (Blast in Bengaluru, bomb Blast) ಬಳಿಕ ಬಂದ್‌ ಆಗಿದ್ದ ಕೆಫೆ ಎಂಟು ದಿನಗಳ ಬಳಿಕ ಇಂದಿನಿಂದ ಮತ್ತೆ ಶುರುವಾಗುತ್ತಿದೆ. ಗ್ರಾಹಕರ ಭರ್ಜರಿ ಸ್ಪಂದನ ವ್ಯಕ್ತವಾಗಿದೆ.

ಕಳೆದ ಶುಕ್ರವಾರ ಮಾರ್ಚ್‌ ಒಂದರಂದು ಮಧ್ಯಾಹ್ನ 12.55ಕ್ಕೆ ಬಾಂಬ್‌ ಬ್ಲಾಸ್ಟ್ ಆಗಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆರೋಪಿಯ ಜಾಡು ಹಿಡಿದಿರುವ ಪೊಲೀಸರು ತಂಡಗಳನ್ನು ರಚಿಸಿಕೊಂಡು ಪಾತಕಿಯ ಹುಡುಕಾಟದಲ್ಲಿದ್ದಾರೆ. ಈ ನಡುವೆ ಒಂದು ವಾರದಿಂದ ತನಿಖೆ ಮತ್ತಿತರ ಪ್ರಕ್ರಿಯೆಗಳಿಗಾಗಿ ರಾಮೇಶ್ವರಂ ಕೆಫೆ ಬಂದ್ ಆಗಿತ್ತು.

ನಗರ ಪೊಲೀಸರು, ಎನ್ಐಎ ತಂಡ ಕೂಡ ಇಲ್ಲಿ ಬಂದು ಪರಿಶೀಲನೆ ನಡೆಸಿದ್ದರು. ಬಾಂಬ್ ಸ್ಫೋಟದಿಂದಾಗಿ ಪೀಠೋಪಕರಣಕ್ಕೆ ಹಾನಿಯಾಗಿತ್ತು. ಇದೀಗ ಎಲ್ಲವನ್ನು ಸರಿ ಪಡಿಸಿರುವ ಮಾಲೀಕರು ಇಂದಿನಿಂದ ಮತ್ತೆ ರಾಮೇಶ್ವರಂ ಕೆಫೆ ಶುರು ಮಾಡುತ್ತಿದ್ದಾರೆ.

ಕೆಫೆಯನ್ನು ಮೊದಲಿಗಿಂತ ಹೆಚ್ಚಿನ ಭದ್ರತೆಯಲ್ಲಿ ಆರಂಭಿಸುತ್ತಿದ್ದು, ಪ್ರವೇಶಿಸುವಲ್ಲಿ ಹೊಸದಾಗಿ ಮೆಟಲ್‌‌ ಡಿಟೆಕ್ಟರ್ ಅಳವಡಿಕೆ ಮಾಡಿದ್ದಾರೆ. ಸಂಶಯಾಸ್ಪದ ಜನರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಹೂವುಗಳು ಹಾಗೂ ತಳಿರು ತೋರಣಗಳಿಂದ ಕೆಫೆಯನ್ನು ಅಲಂಕರಿಸಲಾಗಿದೆ.

ಬೆಳಗ್ಗೆ 6.30ಕ್ಕೆ ಕೆಫೆ ಆರಂಭವಾಗಿದೆ. ವಿಶೇಷ ಪೂಜೆ, ಹೋಮ ಹವನದ ಬಳಿಕ ಆರಂಭವಾಗುತ್ತಿದೆ. ನಿನ್ನೆಯಿಂದ ಕೆಫೆಯಲ್ಲಿ ವಿಶೇಷ ಪೂಜೆ ಕೂಡ ನೆರವೇರಿತ್ತು. ರಾಷ್ಟ್ರಗೀತೆಯೊಂದಿಗೆ ಕೆಫೆಯನ್ನು ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ಆರಂಭ ಮಾಡಿದರು.

ಕೆಫೆ ಮರು ಓಪನ್‌ಗೆ ಗ್ರಾಹಕರಿಂದ ಭರ್ಜರಿಯಾಗಿ ರೆಸ್ಪಾನ್ಸ್ ದೊರೆತಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಹೋಟೆಲ್‌ಗೆ ಗ್ರಾಹಕರು ಆಗಮಿಸುತ್ತಿದ್ದಾರೆ. ಕೆಫೆ ಮಾಲೀಕರ ಮೊಗದಲ್ಲಿ ಇದರಿಂದ ಮಂದಹಾಸ ಮೂಡಿದೆ. ಹೋಟೆಲ್‌ಗೆ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಹೋಟೆಲ್ ಪ್ರವೇಶದ್ವಾರದಲ್ಲಿ ಮೆಟಲ್ ಡಿಟೆಕ್ಟರ್‌ ಅಳವಡಿಸಲಾಗಿದ್ದು, ಸೆಕ್ಯೂರಿಟಿಗೆ ಅಂತ ನಿವೃತ್ತಿ ಸೈನಿಕರ ನೇಮಕ ಮಾಡಿಕೊಳ್ಳಲಾಗಿದೆ. ಕೆಫೆ ಸುತ್ತಮುತ್ತ ಪೊಲೀಸರು ಕೂಡ ಭದ್ರತೆ ಒದಗಿಸಿದ್ದಾರೆ. ಗ್ರಾಹಕರ ಬ್ಯಾಗ್ ತಪಾಸಣೆ ಮಾಡಲಾಗುತ್ತಿದೆ. ಹೋಟೆಲ್‌ಗೆ ಆಗಮಿಸಿದ ಗ್ರಾಹಕರ ನಡುವೆ ಬಾಂಬ್ ಸ್ಫೋಟದ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.

ಕೆಫೆ ಮಾಲೀಕ ರಾಘವೇಂದ್ರ ರಾವ್ ಖುದ್ದು ಗ್ರಾಹಕರ ಬಳಿ ಬಂದು ಮಾತನಾಡಿಸುತ್ತಿದ್ದು, ಗ್ರಾಹಕರಿಗೆ ಧೈರ್ಯ ತುಂಬುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡುತ್ತಿದ್ದು, ಗ್ರಾಹಕರಿಂದ ಕೂಡ ಕೆಫೆ ಮಾಲೀಕರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ. ʼಧೈರ್ಯವಾಗಿರಿ. ನಾವು ನಿಮ್ಮ ಜೊತೆ ಇದ್ದೇವೆʼ ಎಂದು ಗ್ರಾಹಕರು ಆತ್ಮವಿಶ್ವಾಸ ತುಂಬುತ್ತಿದ್ದಾರೆ.

ಇದನ್ನೂ ಓದಿ: Blast in Bengaluru : NIA ಕಣ್ಣು ಬಳ್ಳಾರಿಯ ನಾಲ್ವರತ್ತ, ಬಾಂಬರ್‌ ಈಗ ಬಂಟ್ವಾಳದತ್ತ?

Exit mobile version