Site icon Vistara News

blast in bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಜಸ್ಟ್‌ 10 ಸೆಕೆಂಡ್‌ ಅಂತರದಲ್ಲಿ ಎರಡೆರಡು ಬಾರಿ ಸ್ಫೋಟ!

rameshwaram cafe bengaluru incident

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟವು ಆತಂಕವನ್ನು ಹೆಚ್ಚಿಸಿದೆ. ಈ ನಡುವೆ ಹೋಟೆಲ್‌ ಉದ್ಯಮದಲ್ಲಿ ರಾಮೇಶ್ವರಂ ಕೆಫೆಯ ಬೆಳವಣಿಗೆ ಸಹಿಸಲು ಆಗದೇ ಇರುವವರೇ ಗ್ರಾಹಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ವಿಸ್ತಾರ ನ್ಯೂಸ್‌ ಜತೆಗೆ ಪ್ರತಿಕ್ರಿಯಿಸಿದ್ದಾರೆ. ಕೆಫೆಯಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಫೆಯಲ್ಲಿ ಯಾವುದೇ ಶಾರ್ಟ್‌ ಸರ್ಕ್ಯೂಟ್‌ ಆಗಲಿ, ಸಿಲಿಂಡರ್‌ ಸ್ಫೋಟವಾಗಿಲ್ಲ. ಬದಲಿಗೆ ಕೆಫೆಯ ಕೈ ತೊಳೆಯುವ ಜಾಗದಲ್ಲಿ ಸ್ಫೋಟವಾಗಿದೆ.

ಇದು ಹೊರಗಿನಿಂದ ತಂದಿಟ್ಟಿದ್ದ ಬ್ಯಾಗ್‌ ಸ್ಫೋಟಗೊಂಡಿದೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದೆ. ಮೇಲ್ನೋಟಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರಿಗೆ ಸಿಸಿಟಿವಿ ಫೋಟೇಜ್‌ಗಳನ್ನು ಕೊಟ್ಟಿದ್ದೇವೆ. ತನಿಖೆಯಿಂದ ಎಲ್ಲವೂ ಬಯಲಾಗಲಿದೆ ಎಂದು ದಿವ್ಯಾ ತಿಳಿಸಿದ್ದಾರೆ.

ಈ ಘಟನೆಯಿಂದ ನಾನು ಅಘಾತಕ್ಕೆ ಒಳಗಾಗಿದ್ದೇನೆ. ನಮ್ಮ ಇತರೆ ಔಟ್‌ಲೇಟ್‌ಗಳಿಗೂ ಭದ್ರತೆ ಕೊಡುವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಈ ಘಟನೆಯಲ್ಲಿ ಮೂವರು ಸಿಬ್ಬಂದಿಗೆ, ಇಬ್ಬರು ಗ್ರಾಹಕರು ಗಾಯಗೊಂಡಿದ್ದಾರೆ ಎಂದು ದಿವ್ಯಾ ಮಾಹಿತಿ ನೀಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಊಟಕ್ಕೆ ಬಂದಿದ್ದ ಗ್ರಾಹಕರೊಬ್ಬರು ಸ್ಫೋಟದ ಕುರಿತು ಎಕ್ಸ್‌ ಮೂಲಕ ವಿಡಿಯೊ ಹಂಚಿಕೊಂಡಿದ್ದಾರೆ. ಕೆಫೆಯಲ್ಲಿ ಏಕಾಏಕಿ ಸ್ಫೋಟಗೊಂಡು ಪೂರ್ತಿ ಹೊಗೆ ಆವರಿಸಿಕೊಂಡಿತ್ತು. ಸಾರ್ವಜನಿಕರು, ಹೋಟೆಲ್‌ ಸಿಬ್ಬಂದಿ ಎಲ್ಲರೂ ಹೊರ ಓಡಿ ಬಂದಿದ್ದರು. ಘಟನೆಯಲ್ಲಿ ವಯೋವೃದ್ಧರು ಗಾಯಗೊಂಡಿದ್ದರು.

ಘಟನಾ ಸ್ಥಳಕ್ಕೆ ಗುಪ್ತಚರ ಇಲಾಖೆಯ ಎಡಿಜಿಪಿ ಶರತ್ ಚಂದ್ರ, ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೋಕ್‌ ಮೋಹನ್‌, ಶುಕ್ರವಾರ ಸುಮಾರು ಒಂದು ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವಾಗಿದೆ. ಸ್ಥಳಕ್ಕೆ ಎಫ್‌ಎಸ್ಎಲ್ ತಂಡ ಬಂದಿದೆ. ಘಟನೆಯಲ್ಲಿ ಒಟ್ಟಾರೆ 9 ಮಂದಿ ಗಾಯಗೊಂಡಿದ್ದಾರೆ. ಸಿಎಂ ಮತ್ತು ಗೃಹ ಸಚಿವರು ಮಾಹಿತಿ ಪಡೆದಿದ್ದಾರೆ, ಎಫ್‌ಎಸ್ಎಲ್ ಪೂರ್ಣ ಪರಿಶೀಲನೆ ಬಳಿಕ ಸ್ಫೋಟ ಸಂಬಂಧ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version