ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟವು (rameshwaram cafe blast) ಇಡೀ ಬೆಂಗಳೂರು ನಗರವನ್ನೇ (Blast In Bengaluru) ತಲ್ಲಣಗೊಳಿಸಿದೆ. ಈ ನಡುವೆ ಬಾಂಬ್ ಸ್ಫೋಟಿಸಿದ್ದ ಶಂಕಿತ ವ್ಯಕ್ತಿಯು ಸಾಮಾನ್ಯರಂತೆ ಬಿಎಂಟಿಸಿ ಬಸ್‌ನಲ್ಲಿ (BMTC Bus) ಬಂದಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರು ಬಾಂಬರ್ ಸಂಚರಿಸಿದ ಬಸ್ ರೂಟ್ ಸಂಖ್ಯೆಯ ಜಾಡು ಹಿಡಿದಿದ್ದಾರೆ.
ಬಾಂಬ್ ಇಟ್ಟಿದ್ದ ವ್ಯಕ್ತಿ ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಪ್ರಯಾಣ ಮಾಡಿದ್ದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಶಂಕಿತ ವ್ಯಕ್ತಿಯು ಪ್ರಯಾಣ ಮಾಡಿದ ದೃಶ್ಯಾವಳಿಯನ್ನೆಲ್ಲ ನಿಗಮವು ಪೊಲೀಸರಿಗೆ ಒಪ್ಪಿಸಿದೆ. ಬಾಂಬ್ ಇರುವ ಬ್ಯಾಗ್ ಹಿಡಿದು ಬಸ್‌ನಲ್ಲೇ ಬಂದಿದ್ದ ಶಂಕಿತ ವ್ಯಕ್ತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಮತ್ತೆ ವಾಪಸ್ ವೋಲ್ವೋ ಬಸ್‌ನಲ್ಲಿ ಹೋಗಿದ್ದಾನೆ.
ಇದನ್ನೂ ಓದಿ: Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್; ಗಾಯಾಳುಗಳು ಸೇಫ್, ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಶಂಕಿತ ವ್ಯಕ್ತಿ ಬಿಎಂಟಿಸಿ ಬಸ್ಸಿನಲ್ಲಿ ಓಡಾಡಿದ್ದಾನೆ. ಬಸ್‌ನಿಂದ ಇಳಿದು ಹೋದ ಕುರಿತು ಅಧಿಕಾರಿಗಳು ಮಾಹಿತಿ ಕೇಳಿದ್ದರು. ಹೀಗಾಗಿ ಎಲ್ಲ ಸಿಸಿಟಿವಿ ಫೋಟೆಜ್‌ಗಳನ್ನು ಕೊಟ್ಟಿದ್ದೇವೆ. ನಾವು ಕೊಟ್ಟ ಮಾಹಿತಿ ಮೇಲೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇದರ ಹೊರತಾಗಿ ತನಿಖೆಯಲ್ಲಿ ಮೂಗು ತೂರಿಸಲು ಹೋಗಲ್ಲ ಎಂದು ತಿಳಿಸಿದ್ದಾರೆ.
ವೋಲ್ವೋ ಬಸ್ ಡಿಪೋ 25ಕ್ಕೆ ಸೇರಿದ್ದು, ರೂಟ್ ನಂಬರ್ 500 ಎಫ್ ಐಟಿಪಿಎಲ್, ಹೆಚ್‌ಎಸ್‌ಆರ್ ಲೇಔಟ್ ನಡುವೆ ಸಂಚಾರ ಮಾಡುವ ಬಸ್ ಇದಾಗಿದೆ. ಈ ಬಸ್‌ನಲ್ಲಿ ಶಂಕಿತ ಸಂಚಾರ ಮಾಡಿರುವುದು ಪಕ್ಕಾಗಿದೆ. ಶುಕ್ರವಾರ ಬೆಳಗ್ಗೆ ಸಮಯ 11:50:45 ಬಂದಿದ್ದ ಬಸ್‌ನಲ್ಲಿ ಶಂಕಿತ ಸಂಚರಿಸಿದ್ದಾನೆ. ವೋಲ್ವೋ ಬಸ್‌ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಐಟಿಪಿಎಲ್ ಹಾಗೂ ಹೂಡಿ ಭಾಗಕ್ಕೆ ಸಂಚಾರ ಮಾಡಿದ್ದಾನೆ.
ಇಂದೊಂದು ಫ್ರೀ ಪ್ಲಾನ್ಡ್ ಬ್ಲಾಸ್ಟಾ?
ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇದೊಂದು ಪೂರ್ವ ನಿಯೋಜಿತ ಕೃತ್ಯವಾ ಎಂಬ ಅನುಮಾನ ಮೂಡುತ್ತಿದೆ. ದಿ ರಾಮೇಶ್ವರಂ ಕೆಫೆ ಸ್ಫೋಟವನ್ನು ಬ್ಯುಸಿನೆಸ್ ವಿಚಾರಕ್ಕೆ ಟಾರ್ಗೆಟ್ ಮಾಡಿಲ್ಲ. ಬದಲಿಗೆ ಸಾವು-ನೋವುಗಳನ್ನು ಮಾಡಲೇಬೇಕೆಂಬ ಕಾರಣಕ್ಕೆ ಸ್ಫೋಟ ನಡೆಸಲಾಗಿದೆ ಎನ್ನಲಾಗುತ್ತಿದೆ. ಕೆಫೆಯಲ್ಲಿ ಮಧ್ಯಾಹ್ನ ಹೊತ್ತು ಗ್ರಾಹಕರು ಅತಿ ಹೆಚ್ಚಾಗಿ ಬರುತ್ತಾರೆ ಎಂಬ ಮಾಹಿತಿ ಮೊದಲೇ ಸಂಗ್ರಹಿಸಿದ್ದರು. ಸ್ಫೋಟಕ್ಕೂ ಮುನ್ನ ಶಂಕಿತರು ಸಾಕಷ್ಟು ರಿಸರ್ಚ್ ಮಾಡಿದ್ದಾರೆ. ಹೀಗಾಗಿ ಯಾವ ಬಸ್‌ನಲ್ಲಿ ಬಂದು ಇಳಿಬೇಕು, ಯಾವ ಬಸ್ ಮೂಲಕ ವಾಪಸ್ ಹೋಗಬೇಕೆಂದು ಮೊದಲೇ ಮಾಹಿತಿಯನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಸಿಸಿ ಕ್ಯಾಮೆರಾಗಳ ಕೈ ಸಿಗದಂತೆ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕ್ಯಾಪ್, ಕೈ ರೇಖೆ ಗುರುತು ಸಿಗದಂತೆ ಹ್ಯಾಂಡ್ ಗ್ಲೌಸ್ ಬಳಕೆ ಮಾಡಲಾಗಿದೆ. ಸುಮಾರು 25ರ ಆಸುಪಾಸಿನ ಶಂಕಿತ ಎಂದು ಗುರುತಿಸಲಾಗಿದೆ. ವೋಲ್ವೋ ಬಸ್ ಹತ್ತಿ ರಾಮೇಶ್ವರಂ ಕೆಫೆಯಿಂದ ಎರಡು ಸ್ಟಾಪ್ ನಂತರ ಇಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 500 ಎಫ್ ವೋಲ್ವೋ ಬಸ್‌ನ ಕೊನೆಯ ನಿಲ್ದಾಣವಾಗಿದ್ದು, ಅಲ್ಲಿಂದ ಬೇರೆ ಕಡೆಗೆ ಬಸ್ ಮೂಲಕವೇ ಹೋಗಲು ಪ್ಲಾನ್ ಇತ್ತು ಎನ್ನಲಾಗಿದೆ.
ಇನ್ನೂ ಕೃತ್ಯಕ್ಕೆ ಸ್ವಂತ ವಾಹನ ಬಳಕೆ ಮಾಡಿಲ್ಲ, ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿದ್ದಾನೆ. ಮತ್ತೊಂದು ಕಡೆ ತಾನು ಬಂದ ಬಸ್‌ನಲ್ಲಿ ಬಾಂಬ್ ಬಿಟ್ಟು ಹೋಗಬಹುದಿತ್ತು, ಆದರೆ ರಾಮೇಶ್ವರಂ ಕೆಫೆನೇ ಯಾಕೆ ಎಂಬ ಪ್ರಶ್ನೆಯು ಉದ್ಭವಿಸಿದೆ. ಇದೆಲ್ಲವೂ ಪೊಲೀಸರ ತನಿಖೆಯಿಂದಲೇ ಹೊರಬಾರಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ