ಬೆಂಗಳೂರು: ಇಲ್ಲಿನ ವೈಟ್‌ಫೀಲ್ಡ್‌ನ ಬ್ರೂಕ್ ಫೀಲ್ಡ್ ಸಮೀಪದ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಫೋಟವಾಗಿದ್ದರಿಂದ (Blast in Bengaluru) ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar), ಗೃಹ ಸಚಿವ ಡಾ. ಜಿ. ಪರಮೇಶ್ವರ್ (DR G Parameshwar) ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಬಾಂಬ್ ಸ್ಫೋಟದ (Bomb Blast) ಬಗ್ಗೆ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆರೋಪಿ ಬಸ್‌ನಿಂದ ಬಂದಿಳಿದು ಹೋಟೆಲ್‌ನಲ್ಲಿ ತಿಂಡಿ ತಿಂದು ಬಾಂಬ್ ಇಟ್ಟ ಘಟನಾವಳಿಯನ್ನು ವಿವರಿಸಿದ್ದಾರೆ. ಇನ್ನು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದಾರೆ.
ಸ್ಥಳ ಪರಿಶೀಲನೆ ಬಳಿಕ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಡಿ.ಕೆ. ಶಿವಕುಮಾರ್, ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಆರೋಪಿಯು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್‌ನಲ್ಲಿ ಬಂದಿದ್ದಾನೆ. ಅಲ್ಲಿಂದ ರಾಮೇಶ್ವರಂ ಕೆಫೆಗೆ ಬಂದು ಟೋಕನ್ ಪಡೆದುಕೊಂಡಿದ್ದಾನೆ. ಅಲ್ಲೇ ರವೆ ಇಡ್ಲಿಯನ್ನು ತಿಂದಿದ್ದಾನೆ. 1 ಗಂಟೆ ಬಳಿಕ ಬಾಂಬ್ ಸ್ಫೋಟಗೊಳ್ಳುವಂತೆ ಟೈಮರ್ ಇಟ್ಟು, ಆ ಬ್ಯಾಗ್ ಅನ್ನು ಹೋಟೆಲ್‌ನಲ್ಲಿ ಬಿಟ್ಟಿದ್ದಾನೆ. ಈ ಎಲ್ಲ ದೃಶ್ಯಾವಳಿಗಳೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.
ತನಿಖೆಯನ್ನು ಪೊಲೀಸರು ಬಹಳ ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ. ಬಾಂಬ್ ಇಟ್ಟ ವ್ಯಕ್ತಿ ಯಾರು ಎಂಬುದು ಬಹುತೇಕ ಗೊತ್ತಾಗಿದೆ. ಸಿಸಿಬಿಯೂ ತನಿಖೆಯಲ್ಲಿ ಭಾಗಿಯಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನ ಮಾಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಹೈ ಇಂಟೆನ್ಸಿಟಿಯ ಬಾಂಬ್ ಅಲ್ಲ
ಈಗ ಸ್ಫೋಟಗೊಂಡಿರುವುದು ಹೈ ಇಂಟೆನ್ಸಿಟಿಯುಳ್ಳ ಬಾಂಬ್ ಅಲ್ಲ. ಕಡಿಮೆ ತೀವ್ರತೆಯುಳ್ಳದ್ದಾಗಿದೆ. ಹೀಗಾಗಿ ಸೌಂಡ್ ಜೋರಾಗಿ ಬಂದಿದ್ದು, ಹಾನಿಯ ತೀವ್ರತೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಕೆಲವರ ಕಿವಿಗಳಿಗೆ ತೊಂದರೆಯಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬಾಂಬ್ ಸ್ಕ್ವಾಡ್, ಎಫ್‌ಎಸ್‌ಎಲ್ ಟೀಂ ಭೇಟಿ
ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂ, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ತನಿಖೆಯನ್ನು ಕೈಗೊಂಡಿದೆ. ಸಿಸಿಬಿಯವರು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ. ಏಳೆಂಟು ತಂಡಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಯಾರೂ ಗಾಬರಿಗೊಳ್ಳುವುದು ಬೇಡ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಧಿಕಾರಿಗಳಿಂದ ತನಿಖೆ
ಸ್ಥಳಕ್ಕೆ ಬೆಂಗಳೂರು ನಗರ ಆಯುಕ್ತ ದಯಾನಂದ ದೌಡಾಯಿಸಿದ್ದು, ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಎನ್‌ಐಎ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ ಎಂದು ಖಚಿತ ಪಡಿಸಲಾಗಿದೆ.ಮೈಕ್ರೊ ಓವನ್ ಅಥವಾ ಬಾಯ್ಲರ್ ಬ್ಲಾಸ್ಟ್ ಆಗಿದೆಯಾ ಎಂಬುದನ್ನು ಸಹ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅಂತಹ ಯಾವುದೇ ಸ್ಫೋಟ ಆಗಿಲ್ಲ ಎಂದು ದೃಢಪಡಿಸಿದ್ದಾರೆನ್ನಲಾಗಿದೆ. ಎಫ್‌ಎಸ್‌ಎಲ್ ಅಧಿಕಾರಿಗಳು ತನಿಖೆ ನಡೆಸಿದ್ದು, ಟೈಮರ್ ಬಾಂಬ್‌ನಲ್ಲಿ ಏನೆಲ್ಲ ಬಳಕೆ ಮಾಡಲಾಗಿದೆ ಎಂಬುದನ್ನು ಬಹಿರಂಗಗೊಳಿಸಬೇಕಿದೆ.
ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ
ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಗಾಯಾಳುಗಳ ಸಂಖ್ಯೆ 8ಕ್ಕೆ ಏರಿಕೆ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೈಕ್ರೋ ಚಿಪ್ ಇಂಡಿಯಾ ಲಿ. ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಧ್ಯಾಹ್ನಕ್ಕೆ ಊಟಕ್ಕೆ ಬಂದಿದ್ದರು. ಊಟದ ಸಮಯಕ್ಕೆ ಸ್ಫೋಟಗೊಂಡಿದ್ದು, ಕೈ ತೊಳೆಯುವ ಜಾಗದಿಂದ ಶಬ್ಧ ಕೇಳಿ ಬಂದಿದೆ. ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬಾಕೆ ಗಾಯಗೊಂಡಿದ್ದಾರೆ. ಫಾರುಕ್ ಹುಸಾಯ್, ದಿಪಾಂಶು ಎಂಬುವವರು ಗಾಯಗೊಂಡಿದ್ದು, ಸ್ವರ್ಣ ನಾರಯಣಪ್ಪ ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Blast in Bangalore : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಫೋಟ; ಐವರು ಗಂಭೀರ
ನವ್ಯಾ (25), ಶ್ರೀನಿವಾಸ್ (67), ನಾಗಶ್ರೀ (25), ಬಾಲಮುರುಳಿ (34), ಮೋನಿ (30), ಶಂಕರ್ (41) ಎಂಬುವವರು ಗಾಯಗೊಂಡ ಕೆಲವರು ಎನ್ನಲಾಗಿದೆ. ಇವರಲ್ಲಿ ನಾಗಶ್ರಿ ಅವರ ಕಣ್ಣಿಗೆ ಏಟಾಗಿದೆ. ಮೋನಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ