ಬೆಂಗಳೂರು: ಬೇಡರಹಳ್ಳಿಯಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ಸು ಅಗ್ನಿಗಾಹುತಿಯಾಗಿ (Fire tragedy) ಅದರೊಳಗಿದ್ದ ಕಂಡಕ್ಟರ್ ದಹನವಾದ ದುರ್ಘಟನೆಯ ತನಿಖೆಯಲ್ಲಿ ಇದೀಗ ಮಹತ್ವದ ಟ್ವಿಸ್ಟ್ ದೊರೆತಿದೆ. ಯುಪಿಐ ಪಾವತಿಯೊಂದರಿಂದ ಈ ಸುಳಿವು ತನಿಖಾಧಿಕಾರಿಗಳಿಗೆ ಲಭ್ಯವಾಗಿದ್ದು, ಇದು ಕಂಡಕ್ಟರ್ ಮಾಡಿಕೊಂಡಿರುವ ಆತ್ಮಹತ್ಯೆ ಎಂದು ಕಂಡುಬಂದಿದೆ.
ಯುಪಿಐಯಲ್ಲಿ ಕಂಡಕ್ಟರ್ ಮುತ್ತಯ್ಯ ಅವರ ಖಾತೆಯಿಂದ ಸೆಂಡ್ ಆಗಿರುವ 700 ರೂಪಾಯಿ ಈ ಸುಳಿವು ನೀಡಿದೆ. ಇದರಿಂದಾಗಿ ಬಿಎಂಟಿಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿಲ್ಲ, ನಿರ್ವಾಹಕ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ.
ಮುತ್ತಯ್ಯ ಬಸ್ ನಿಲುಗಡೆಯಾದ ನಂತರ ಹೊರ ಹೋಗಿ ಮಧ್ಯರಾತ್ರಿ ಒಂದು ಗಂಟೆ ವರೆಗೂ ಫೋನಿನಲ್ಲಿ ಮಾತನಾಡಿದ್ದಾರೆ. ಡ್ರೈವರ್ ಪ್ರಕಾಶ್ ಅವರನ್ನು ರೂಮಿನಲ್ಲಿ ಮಲಗುವಂತೆ ಹೇಳಿ ಆ ದಿನದ ಕಲೆಕ್ಷನ್ ಹಣವನ್ನು ಪ್ರಕಾಶ್ ಕೈಗೆ ಕೊಟ್ಟಿದ್ದಾರೆ. ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್‌ನಿಂದ ಹೊರ ಹೋಗಿ, ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್‌ಗೆ ಹೋಗಿದ್ದಾರೆ. ಅಲ್ಲಿ 700 ರೂಪಾಯಿಗಳ ಪೆಟ್ರೋಲ್ ಖರೀದಿಸಿದ್ದಾರೆ. ಅವರ ಯುಪಿಐ ಪಾವತಿಯ ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ.
ರಾತ್ರಿಯಲ್ಲಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆಯಾಗಿದೆ. ಪೆಟ್ರೋಲ್ ಬಂಕ್‌ಗೆ ಹಣ ಪಾವತಿಸಿ ಪೆಟ್ರೋಲ್, ಡಿಸೇಲ್ ಖರೀದಿ ಮಾಡಿದ್ದು, ಐದು ಲೀಟರ್ ಪೆಟ್ರೋಲ್, ಎರಡು ಲೀಟರ್ ಡಿಸೇಲ್ ಅನ್ನು ನೀರಿನ ಕ್ಯಾನ್‌ನಲ್ಲಿ ಮುತ್ತಯ್ಯ ತಂದಿದ್ದರು. ಈ ಬಗ್ಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯೂ ಮಾಹಿತಿ ನೀಡಿದ್ದು ಸಿಸಿಟಿವಿಯಲ್ಲೂ ಈ ದೃಶ್ಯ ಸೆರೆಯಾಗಿದೆ. ಮುಂಜಾನೆ ವೇಳೆಗೆ ಬಸ್ಸಿನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಮಾಡಿ ಪೆಟ್ರೋಲ್, ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಈ ಕುರಿತು ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವರದಿ ಬಂದ ನಂತರ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಹಣಕಾಸಿನ ತೊಂದರೆಗೆ ಸಿಲುಕಿದ್ದರಿಂದ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: Fire tragedy: ಬಿಎಂಟಿಸಿ ಬಸ್ಸಿಗೆ ಬೆಂಕಿ, ಕಂಡಕ್ಟರ್ ಸಜೀವ ದಹನ