Site icon Vistara News

Bomb Threat : ರಾಜಭವನಕ್ಕೆ ಬಾಂಬ್‌ ಬೆದರಿಕೆ; ಪೊಲೀಸರ ದೌಡು, ಹೈ ಅಲರ್ಟ್‌

Bomb threat to raj Bhavan

ಬೆಂಗಳೂರು: ರಾಜಧಾನಿಯ ಸುಮಾರು 48 ಶಾಲೆಗಳ ಆವರಣದಲ್ಲಿ ಬಾಂಬ್‌ ಇಡಲಾಗಿದೆ (Bomb threat to Schools) ಎಂದು ನಿಗೂಢ ತಾಣದಿಂದ ಈಮೇಲ್‌ ಮಾಡಿ ಭಾರಿ ಆತಂಕಕ್ಕೆ ಕಾರಣವಾದ ಘಟನೆಯ ಬೆನ್ನಿಗೇ ಇದೀಗ ರಾಜ್ಯದ ಶಕ್ತಿ ಕೇಂದ್ರಗಳಲ್ಲಿ ಒಂದಾದ ರಾಜ ಭವನಕ್ಕೇ (Bomb threat to Raj Bhavan) ಬಾಂಬ್‌ ಬೆದರಿಕೆ ಹಾಕಲಾಗಿದೆ.

ರಾಜಭವನದಲ್ಲಿ ಬಾಂಬ್ ಇಡಲಾಗಿದೆ ಎಂದು ಸೋಮವಾರ ರಾತ್ರಿ ಕರೆ ಮಾಡಿ ತಿಳಿಸಲಾಗಿದೆ. ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಆ ವ್ಯಕ್ತಿ ಹೇಳಿದ್ದಾನೆ.

ಕರೆ ಬಂದ ತಕ್ಷಣವೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಪೊಲೀಸರು ಬಾಂಬ್‌ ಸ್ಕ್ವಾಡ್‌ ಮತ್ತು ಡಾಗ್‌ ಸ್ಕ್ವಾಡ್‌ನೊಂದಿಗೆ ಅಲ್ಲಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಾಜಭವನಕ್ಕೆ ಹೋಗಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ಆದರೆ, ಅವರು ಇನ್ನೂ ಕಟ್ಟೆಚ್ಚರ ವಹಿಸಿದ್ದಾರೆ.

ರಾಜಭವನ ತುಂಬ ವಿಶಾಲವಾದ ಜಾಗವಾಗಿದ್ದು ಯಾವ ಭಾಗದಲ್ಲಿ ಇಡಲಾಗಿದೆ ಎಂಬ ಮಾಹಿತಿಯನ್ನು ಆತ ನೀಡಿಲ್ಲ. ರಾಜಭವನದಲ್ಲಿ ರಾಜ್ಯಪಾಲರು ಮತ್ತು ಸಾಕಷ್ಟು ಸಿಬ್ಬಂದಿ ಇರುತ್ತಾರೆ. ಜತೆಗೆ ಸಾಕಷ್ಟು ಸಂದರ್ಶಕರು ಬರುತ್ತಿರುತ್ತಾರೆ. ಇದೊಂದು ಹುಸಿ ಕರೆಯೇ ಆಗಿರಬಹುದಾದ ಸಾಧ್ಯತೆ ಜಾಸ್ತಿ ಇದೆ. ಆದರೆ, ಹಾಗಂತ ಅದನ್ನು ಪೊಲೀಸರು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ಎಲ್ಲಾ ಕಡೆ ಸರ್ಚ್‌ ಮಾಡಲಾಗಿದೆ.

ಈ ನಡುವೆ, ರಾಜಭವನಕ್ಕೆ ಯಾವ ನಂಬರ್‌ನಿಂದ ಕರೆ ಮಾಡಲಾಗಿದೆ. ಅದನ್ನು ಮಾಡಿದ್ದು ಯಾರು ಎಂಬ ವಿಚಾರದಲ್ಲಿ ಪೊಲೀಸರು ತನಿಖೆ ‌ ನಡೆಸುತ್ತಿದ್ದಾರೆ. ಇದೊಂದು ಫೋನ್‌ ಕರೆ ಆಗಿರುವುದರಿಂದ ಆರೋಪಿಯನ್ನು ಪತ್ತೆ ಹಚ್ಚುವ ಸಾಧ್ಯತೆಗಳಿವೆ. ಬಳಿಕ ಆತನ ಹಿನ್ನೆಲೆಯನ್ನು ಅರಿಯಬೇಕಾಗಿದೆ.

ಇದನ್ನೂ ಓದಿ: Bomb Threat : 48 ಶಾಲೆಗಳಿಗೆ ಬಂದ ಬೆದರಿಕೆ EMail ಮೂಲ ಪತ್ತೆ, ಏನಿದು ಜರ್ಮನಿ ಕನೆಕ್ಷನ್?‌

ಶಾಲೆಗಳಿಗೆ ಬೆದರಿಕೆಗೆ ಹಾಕಿದವರ ಪತ್ತೆಯೇ ಇಲ್ಲ

ಡಿಸೆಂಬರ್‌ 1ರ ಶುಕ್ರವಾರ ಬೆಳಗ್ಗೆ ರಾಜಧಾನಿಯ 48 ಖಾಸಗಿ ಶಾಲೆಗಳಿಗೆ (Threatening letter to Bangalore Schools) ಈಮೇಲ್‌ ಮೂಲಕ ಬಂದ ಬಾಂಬ್‌ ಬೆದರಿಕೆ ಪತ್ರ (Bomb threat) ಕಳುಹಿಸಲಾಗಿತ್ತು. ಈ ಪತ್ರ Kharijites@beeble.com ಎಂಬ ಐಡಿಯಿಂದ ಈ ಪತ್ರವನ್ನು ಮೇಲ್‌ ಮಾಡಲಾಗಿದೆ. Beeble.com ಎನ್ನುವ ವೆಬ್ ಸೈಟ್ ಬಳಸಿ ಬೆದರಿಕೆ ಮೇಲ್‌ ರವಾನೆ ಮಾಡಲಾಗಿದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದರು. ಆದರೆ, ಕಳುಹಿಸಿದ್ದು ಯಾರು ಎನ್ನುವುದು ಘಟನೆ ನಡೆದು 11 ದಿನವಾದ ಬಳಿಕ ಗೊತ್ತಾಗಿಲ್ಲ.

ಬೆಂಗಳೂರಿನ ಸುಮಾರು 48 ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬೆಳಗ್ಗೆ ಆರು ಗಂಟೆಯ ವೇಳೆಗೆ ಈ ಪತ್ರವನ್ನು ಮೇಲ್‌ ಮಾಡಲಾಗಿದೆ. ಶಾಲೆಯ ಆವರಣಗಳಲ್ಲಿ ಬಾಂಬ್‌ ಇಡಲಾಗಿದೆ ಎಂಬ ಮೊದಲ ಒಕ್ಕಣೆಯನ್ನು ನೋಡಿದ್ದೇ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಹೌಹಾರಿದ್ದರು. ಪೋಷಕರು ದಿಗಿಲಿಕೊಂಡಿದ್ದರು.

ಮುಸ್ಲಿಂ ಉಗ್ರಗಾಮಿಗಳು ಬಳಸುವ ಪದಗಳೇ ಈ ಪತ್ರದಲ್ಲಿದ್ದು,‌ ಬದುಕುಳಿಯಬೇಕಾದರೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಇಲ್ಲದಿದ್ದರೆ ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಂದು ಹಾಕುತ್ತೇವೆ, ಸಾಯಲು ಸಿದ್ಧರಾಗಿ ಎಂದು ಪತ್ರದಲ್ಲಿ ಹೇಳಲಾಗಿತ್ತು.

Exit mobile version