ಬೆಂಗಳೂರು: ರಾಜಧಾನಿಯ 30ಕ್ಕೂ ಅಧಿಕ ಶಾಲೆಗಳಿಗೆ (Threat to Bangalore Schools) ಈಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಹಾಕಿರುವ ವಿಚಾರದಲ್ಲಿ ರಾಜಕೀಯ ನಾಯಕರು ಕೂಡಾ ಮಾತನಾಡಿದ್ದಾರೆ. ಕೆಲವರು ಆತಂಕದಿಂದ ಮಾತನಾಡಿದ್ದರೆ, ಕೆಲವರು ಇದು ಕೇವಲ ಬೆದರಿಕೆ ಮಾತ್ರ, ಇದಕ್ಕೆ ಹೆದರಬೇಕಾಗಿಲ್ಲ ಎಂದಿದ್ದಾರೆ. ಅದರ ನಡುವೆ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ (MLA Munirathna) ಅವರು ಈ ರೀತಿ ಬಾಂಬ್ ಇಡುವವರಿಗೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಧೈರ್ಯ ಬಂದಿದೆ, ಕಾಂಗ್ರೆಸ್ ನಾಯಕರೇ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರ ಹೆಸರನ್ನೂ ಉಲ್ಲೇಖ ಮಾಡಿದ್ದಾರೆ.
ʻʻಯಾವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂತೋ ಅಲ್ಲಿಂದ ಇವೆಲ್ಲವೂ ಶುರುವಾಗಿದೆ. ಹುಲಿ ಬಂತು ಹುಲಿ ಕಥೆ ಶುರುವಾಗಿದೆ. ಇವರೆಲ್ಲ ಹೇಳಿ ಹೇಳಿ ಒಂದು ದಿನ ನಿಜ ಮಾಡ್ತಾರೆ.ʼʼ ಎಂದು ಮುನಿರತ್ನ ಹೇಳಿದ್ದಾರೆ.
ʻʻಬಾಂಬ್ ಇಡೋರಿಗೆ ಇಲ್ಲಿಂದಲೇ ಕುಮ್ಮಕ್ಕು ಹೋಗ್ತಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತ ಹೇಳಲ್ಲ. ಆದರೆ, ಸರ್ಕಾರದಲ್ಲಿರುವ ಕೆಲವು ವ್ಯಕ್ತಿಗಳ ಮಾತಿನಿಂದ ಕುಮ್ಮಕ್ಕು ಸಿಗುತ್ತಿದೆʼʼ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆಯನ್ನು ಉಲ್ಲೇಖಿಸಿ ಮುನಿರತ್ನ ಹೇಳಿದರು.
ಜಮೀರ್ ಅಹಮದ್ ಖಾನ್ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ʻಮುಸ್ಲಿಂ ವ್ಯಕ್ತಿಯೊಬ್ಬರು ನಡೆದುಕೊಂಡು ಬಂದಾಗ ಬಿಜೆಪಿಯ ಎಲ್ಲ ನಾಯಕರು ಎದ್ದುನಿಂತು ನಮಸ್ಕಾರ ಸಾಬ್ ಎಂದು ಹೇಳುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆʼʼ ಎಂದು ಸ್ಪೀಕರ್ ಆಗಿ ಯು.ಟಿ. ಖಾದರ್ ಅವರ ಆಯ್ಕೆಯನ್ನು ಉಲ್ಲೇಖಿಸಿ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಅದನ್ನೇ ಉಲ್ಲೇಖಿಸಿರುವ ಮುನಿರತ್ನ ಅವರು, ʻʻಜಮೀರ್ ಅಹಮದ್ ಖಾನ್ ಅವರು ಸ್ಪೀಕರ್ ಕುರ್ಚಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ಸ್ಪೀಕರ್ ಕೂರುವ ಜಾಗದಲ್ಲಿ ಅಶೋಕ ಸ್ಥಂಭ, ಸೂರ್ಯ, ಚಂದ್ರ ಇದೆ. ಕುರ್ಚಿಯಲ್ಲಿ ಕೂರುವ ವ್ಯಕ್ತಿಗೆ ಗೌರವ ಕೊಡ್ತೀವೋ ಇಲ್ಲವೋ ಗೊತ್ತಿಲ್ಲ. ಆ ಅಶೋಕ ಸ್ಥಂಭ, ಸೂರ್ಯ, ಚಂದ್ರ ಇವುಗಳಿಗಂತೂ ಕೈ ಮುಗೀತೀವಿ. ಪೀಠಕ್ಕೆ ಇಂತಹ ಅಗೌರವ ತೋರುವ ವ್ಯಕ್ತಿಗಳಿಂದಲೇ ಬಾಂಬ್ ಬೆದರಿಕೆ ಬರ್ತಿದೆʼʼ ಎಂದು ಮುನಿರತ್ನ ಹೇಳಿದರು.
ಇದನ್ನೂ ಓದಿ: Bomb threat : ಮುಸ್ಲಿಮರಾಗಿ, ಇಲ್ಲವೇ ನಿಮ್ಮ ಮಕ್ಕಳನ್ನು ಕೊಲ್ತೇವೆ; ಶಾಲೆಗಳಿಗೆ ಬಂದ ಬೆದರಿಕೆ
ಬೆಂಗಳೂರಿನ 30ಕ್ಕೂ ಅಧಿಕ ಶಾಲೆಗಳಿಗೆ ಬೆದರಿಕೆ
ಬೆಂಗಳೂರಿನ 30ಕ್ಕೂ ಅಧಿಕ ಶಾಲೆಗಳಿಗೆ ಶುಕ್ರವಾರ ಮುಂಜಾನೆ 6 ಗಂಟೆ ಮತ್ತು 9 ಗಂಟೆಯ ಹೊತ್ತಿಗೆ ಈಮೇಲ್‌ಗಳು ಬಂದಿದ್ದು, ಅದರಲ್ಲಿ ಶಾಲೆಯ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಲಾಗಿತ್ತು. ಅಪ್ಪಟ ಉಗ್ರಗಾಮಿಗಳ ಭಾಷೆಯಲ್ಲಿರುವ ಈ ಪತ್ರದಲ್ಲಿ ಒಂದೋ ನೀವು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು. ಇಲ್ಲವಾದರೆ ನಿಮ್ಮನ್ನು, ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. ಆದರೆ, ಯಾವುದೇ ಶಾಲೆಗಳ ಆವರಣದಲ್ಲಿ ಇದುವರೆಗೆ ಬಾಂಬ್ ಪತ್ತೆಯಾಗಿಲ್ಲ.
ಬಾಂಬ್ ಬೆದರಿಕೆ ಬಂದಿರುವ ಶಾಲೆಗಳಿಗೆ ರಜೆ ನೀಡಲಾಗಿದ್ದು, ಬಾಂಬ್ ಸ್ಕ್ವಾಡ್‌ಗಳು ತಪಾಸಣೆ ನಡೆಸುತ್ತಿವೆ. ಈ ಪತ್ರಗಳ ಮೂಲ ಒಂದೇ ಆಗಿದ್ದು, ಅದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ.