ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ (Blast in bengaluru) ಸಂಭವಿಸಿ ಆತಂಕದ ಅಲೆಗಳನ್ನು ಸೃಷ್ಟಿಸಿದೆ. ಈ ಪ್ರಕರಣದ ರೂವಾರಿ ಯಾರು ಎನ್ನುವ ಬಗ್ಗೆ ವಿಡಿಯೋ ಸಾಕ್ಷ್ಯಗಳು ಸಿಕ್ಕಿ 100 ಗಂಟೆಗಳೇ ಸಮೀಪಿಸಿದರೂ ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ನಡುವೆ, ದುಷ್ಕರ್ಮಿಗಳು ರಾಜ್ಯ ಸರ್ಕಾರಕ್ಕೇ ಬಾಂಬಿಡುವ ಎಚ್ಚರಿಕೆ (Bomb Threat) ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಗೆ ಈಮೇಲ್ ಬಾಂಬ್ ಬೆದರಿಕೆ ಹಾಕಲಾಗಿದೆ. 25 ಲಕ್ಷ ಡಾಲರ್ (20 ಕೋಟಿ ರೂ.) ನೀಡದೇ ಹೋದರೆ ಅನಾಹುತ ಖಚಿತ ಎಂದೂ ದುಷ್ಕರ್ಮಿ ಇಮೇಲ್‌ನಲ್ಲಿ ಬೆದರಿಕೆ ಹಾಕಿದ್ದಾನೆ.
ಶಾಹಿದ್ ಖಾನ್ ಎಂಬ ಹೆಸರಿನ ವ್ಯಕ್ತಿ ಕಳುಹಿಸಿದ್ದಾನೆ ಎಂದು ಹೇಳಲಾದ ಬೆದರಿಕೆ ಈಮೇಲ್‌ನಲ್ಲಿ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಲಿವೆ ಎಂದು ಎಚ್ಚರಿಕೆ ನೀಡಲಾಗಿದೆ. ಶನಿವಾರ 2.48ಕ್ಕೆ ನಗರದ ಹಲವು ಕಡೆ ಬಾಂಬ್‌ಗಳು ಸ್ಫೋಟಿಸಲಿವೆ ಎಂದು ಈಮೇಲ್ ಸಂದೇಶದಲ್ಲಿ ತಿಳಿಸಲಾಗಿದೆ.
ಕೇವಲ ಸಿಎಂ, ಡಿಸಿಎಂ, ಸಚಿವರು ಮಾತ್ರವಲ್ಲ, ಬಸ್, ರೈಲು, ದೇವಾಲಯಗಳು, ಹೋಟೆಲ್‌ಗಳು ಹಾಗೂ ಉತ್ಸವಗಳಲ್ಲಿ ಕೂಡಾ ಬಾಂಬ್ ಸ್ಫೋಟ ಸಂಘಟಿಸಲಾಗುವುದು ಎಂದು ಈಮೇಲ್‌ನಲ್ಲಿ ತಿಳಿಸಲಾಗಿದೆ.
ಅಂಬಾರಿ, ಪಲ್ಲಕ್ಕಿ ಉತ್ಸವ ಬಸ್ ಗಳನ್ನು ಸ್ಫೋಟಿಸುವ ಬೆದರಿಕೆ
ಇದೇ ಈ ಮೇಲ್‌ನಲ್ಲಿ ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಗೆ ಸೇರಿರುವ ಅಂಬಾರಿ, ಪಲ್ಲಕ್ಕಿ ಉತ್ಸವ ಬಸ್‌ಗಳನ್ನು ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ : Blast in Bengaluru : ರಾಮೇಶ್ವರಂ ಕೆಫೆ ಸ್ಫೋಟ; ಚೆನ್ನೈಯಲ್ಲಿ NIA ದಾಳಿ, ಐವರು ಕ್ರಿಮಿಗಳ ಸೆರೆ
ಅಧಿಕಾರಿಗಳಿಂದ ತನಿಖೆ ಆರಂಭ
ಬೆಂಗಳೂರಿನಲ್ಲಿ ತಿಂಗಳ ಹಿಂದೆ ಕೆಲವೊಂದು ಪ್ರಮುಖ ಶಾಲೆಗಳಿಗೆ ಈ ಮೇಲ್ ಮೂಲಕ ಬೆದರಿಕೆ ಒಡ್ಡಲಾಗಿತ್ತು. ಬೆಳ್ಳಂಬೆಳಗ್ಗೆ ಬಂದ ಈಮೇಲ್‌ನಿಂದ ಶಾಲೆಗಳು ಆತಂಕಕ್ಕೊಳಗಾಗಿದ್ದವು. ಅಧಿಕಾರಿಗಳು ತನಿಖೆ ನಡೆಸಿದಾಗ ಇದು ಸುಳ್ಳು ಬೆದರಿಕೆ ಎನ್ನುವುದು ಸಾಬೀತಾಯಿತು. ಹಾಗಂತ ಯಾವುದೇ ಬೆದರಿಕೆ ಕರೆ ಬಂದರೂ ಸಂಪೂರ್ಣ ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಅದರಂತೆಯೇ ಈಗ ಸಿಎಂ, ಡಿಸಿಎಂ ಸೇರಿದಂತೆ ಪ್ರಮುಖ ನಾಯಕರಿಗೆ ಬಂದಿರುವ ಬೆದರಿಕೆ ಸಂದೇಶದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈಮೇಲ್‌ನಲ್ಲಿ ಎಲ್ಲೆಲ್ಲಿ ಸ್ಫೋಟ ನಡೆಸಲಾಗುತ್ತದೆ. ಯಾವ ಯಾವ ಸ್ಫೋಟಕಗಳ ಬಳಕೆಯಾಗುತ್ತದೆ ಎಂಬ ವಿವರ ನೀಡಲಾಗಿದೆ ಎನ್ನಲಾಗಿದೆ. ಇದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಬೆಂಗಳೂರು ಸೇಫಾ ಎಂಬ ಪ್ರಶ್ನೆ
ಈ ನಡುವೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಾಗೂ ಸಿಎಂ,ಡಿಸಿಎಂಗೇ ಬೆದರಿಕೆ ಕರೆ ಬಂದಿರುವುದು ಬೆಂಗಳೂರು ಸೇಫಾ ಎನ್ನುವ ಪ್ರಶ್ನೆಯನ್ನು ಮತ್ತೆ ಹುಟ್ಟು ಹಾಕಿದೆ. ಸಾರ್ವಜನಿಕವಾಗಿ ಇಷ್ಟೊಂದು ಧೈರ್ಯವಾಗಿ ಬಾಂಬ್ ಸ್ಫೋಟಿಸುವ, ಬೆದರಿಕೆ ಹಾಕುವುದು ನಡೆಯುತ್ತಿದೆ. ಈ ಪ್ರಕರಣಗಳನ್ನು ಬಿಟ್ಟುಬಿಡಬಾರದು. ಯಾರು ಈ ರೀತಿ ಬೆದರಿಕೆ ಹಾಕುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಬೇರೆಯವರಿಗೆ ಪಾಠವಾಗಬೇಕು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.