Site icon Vistara News

ಬೆಂಗಳೂರಿನ 8 ವಲಯಗಳಲ್ಲೂ ಕಾರ್ಯಪಡೆ ರಚನೆ: CM ಘೋಷಣೆ

Bommai rain inspection

ಬೆಂಗಳೂರು: ರಾಜಧಾನಿ ಜನರನ್ನು ಹೈರಾಣಾಗಿಸುತ್ತಿರುವ ಮಳೆಯಿಂದ ಆಗುವ ಹಾನಿ ತಪ್ಪಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) 8 ವಲಯಕ್ಕೂ ತಲಾ ಒಂದು ಕಾರ್ಯಪಡೆ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತಿಳಿಸಿದರು.

ಬೆಂಗಳೂರಿನ ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಾದ ರಾಮಮುರ್ತಿನಗರದ ನಾಗಪ್ಪ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಕಾರ್ಯಪಡೆಯಲ್ಲಿ ಒಬ್ಬ ಸಚಿವರನ್ನು ಮುಖ್ಯಸ್ಥರನ್ನಾಗಿ ಮಾಡಿ, ಆ ಭಾಗದ ಶಾಸಕರು, ಸಂಸದರು. ವಿಧಾನ ಪರಿಷತ್‌ ಸದಸ್ಯರು, ಹಿರಿಯ ಅಧಿಕಾರಿಗಳನ್ನು ಸಮಿತಿಯಲ್ಲಿ ಸದಸ್ಯರಾಗಿಸಲಾಗುತ್ತದೆ. ಈ ಕಾರ್ಯಪಡೆಗಳ ನೇತೃತ್ವದಲ್ಲಿ ಆಯಾ ವಲಯದ ಅಭಿವೃದ್ಧಿ ಕಾರ್ಯಗಳು, ಪ್ರವಾಹದಂತಹ ಸಂದರ್ಭಗಳಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನೀಡಿ ಇಂದೇ ಆದೇಶ ಹೊರಡಿಸಲಾಗುವುದು ಎಂದರು.

ಇದನ್ನೂ ಓದಿ | ನೀರು ನುಗ್ಗಿರುವ ಮನೆಗಳಿಗೆ ₹25,000 ಪರಿಹಾರ: CM ಬಸವರಾಜ ಬೊಮ್ಮಾಯಿ

ಹೆಬ್ಬಾಳ ವ್ಯಾಲಿಗೆ ಹೆಬ್ಬಾಳ ಮತ್ತು ಯಲಹಂಕದಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬರುತ್ತದೆ. ಗುರುವಾರ ವೀಕ್ಷಣೆ ಮಾಡಿದ ಸ್ಥಳಗಳಲ್ಲಿ ಹೆಚ್ಚುವರಿ ಎಸ್‌ಟಿಪಿ ಘಟಕಗಳನ್ನು ಹಾಕಲು ತೀರ್ಮಾನಿಸಲಾಗಿದೆ. ರೈಲ್ವೆ ಸೇತುವೆಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾಮಗಾರಿಗೆ ₹42 ಕೋಟಿ ನೀಡಿದೆ. ವಿನ್ಯಾಸವೂ ಸಿದ್ಧಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು. ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಭಾಗದಲ್ಲಿ ಕಾಲುವೆಯ ಮುಂದಿನಭಾಗದ ಅಗಲೀಕರಣಕ್ಕೂ ಆದೇಶ ನೀಡಲಾಗಿದೆ. ಐಟಿಐ ಪ್ರದೇಶದಲ್ಲಿ ಅನುಮತಿ ಪಡೆದು ಸುಮಾರು 900 ಮೀಟರ್‌ ಹೆಚ್ಚುವರಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ರಾಮಮೂರ್ತಿನಗರದ 3-4 ಬಡಾವಣೆಗಳಲ್ಲಿ ಸುಲಭವಾಗಿ ನೀರು ಹರಿದುಹೋಗಲು ವ್ಯವಸ್ಥೆಯಾಗುತ್ತದೆ. ಈ ಪ್ರದೇಶದಲ್ಲಿ ಚರಂಡಿಗಳ ಮೇಲೆ ಕಟ್ಟಡಗಳನ್ನು ಕಟ್ಟಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡುವುದಿಲ್ಲ

ಇನ್ನು ಮುಂದೆ ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶ ನೀಡುವುದಿಲ್ಲ ಎಂದು ಬೊಮ್ಮಾಯಿ ತಿಳಿಸಿದರು. ಕೆರೆ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸುವ ಸಂಬಂಧ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಮಾಡಲಾಗಿದೆ. ಬೆಂಗಳೂರು ನಗರ, ಯಲಹಂಕ ತಾಲ್ಲೂಕು,ಯಲಹಂಕ ಹೋಬಳಿ, ದೊಡ್ಡಬೆಟ್ಟಹಳ್ಳಿ ಗ್ರಾಮದಲ್ಲಿನ ಜಲಾವೃತ ಪ್ರದೇಶವನ್ನು ವಸತಿ ವಲಯಕ್ಕೆ ಬದಲಾವಣೆ ಮಾಡಲು ಕೋರಿದ್ದ ಮೇರೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಲಾಗಿದೆ ಎಂದು ತಿಳಿಸಿದರು. ಯಾವುದೇ ಅಧಿಸೂಚಿತ ಕೆರೆ ಪ್ರದೇಶದಗಳ ಮೇಲೆ ಬಡಾವಣೆಗಳನ್ನು ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಇದನ್ನೂ ಓದಿ | Video | ಬೆಂಗಳೂರಿನಲ್ಲಿ ತೆಂಗಿನ ಮರಕ್ಕೆ ಬಡಿದ ಸಿಡಿಲು: ರಾಜಧಾನಿಯಲ್ಲಿ ಮಳೆ ಆರ್ಭಟ

Exit mobile version