Site icon Vistara News

Bharat Jodo : ಭಾರತದ ಅರ್ಧದಷ್ಟು ಗಸ್ತು ಕೇಂದ್ರ ಚೀನಾ ವಶದಲ್ಲಿವೆ ಆದರೆ ಮೋದಿ ಸುಳ್ಳು ಹೇಳುತ್ತಿದ್ದಾರೆ: ಕಾಂಗ್ರೆಸ್‌ ಆರೋಪ

border-issue-china has occupied half of the patrolling centres says supriya srinate of congress

ಬೆಂಗಳೂರು: ಭಾರತ ಚೀನಾ ಗಡಿ ಪ್ರದೇಶದಲ್ಲಿ ಭಾರತದ ಅರ್ಧದಷ್ಟು ಗಸ್ತು ಕೇಂದ್ರಗಳನ್ನು ಚೀನಾ ಅತಿಕ್ರಮಣ ಮಾಡಿಕೊಂಡಿದೆಯಾದರೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾತ್ರ, ಯಾವುದೇ ಅತಿಕ್ರಮಣ ಆಗಿಲ್ಲ ಎಂದು ಹೇಳುತ್ತಿದೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಟೆ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಪ್ರಿಯಾ ಶ್ರಿನಾಟೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಕಾಶ್ಮೀರವನ್ನು ತಲುಪಿದ್ದು, ಇದುವರೆಗೂ ಸುಮಾರು 3900 ಕಿ.ಮೀ ದೂರ ಈ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಯಾತ್ರೆ ತನ್ನ ಅಂತಿಮ ಘಟ್ಟ ತಲುಪಿದ್ದು, ಈ ಯಾತ್ರೆ ಸಮಾಜದಲ್ಲಿನ ಕೋಮು ಸೌಹಾರ್ದತೆ ಕಾಪಾಡುವುದು, ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ ವಿಚಾರವಾಗಿ ಧ್ವನಿ ಎತ್ತುವ ಉದ್ದೇಶವನ್ನು ಪೂರ್ಣಗೊಳಿಸಿದೆ ಎಂದರು.

ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ ವಿಚಾರವಾಗಿ ಮಾತನಾಡಲು ತಯಾರಿಲ್ಲ. ಹೀಗಾಗಿ ಈ ವಿಚಾರಗಳ ಬಗ್ಗೆ ಧ್ವನಿ ಎತ್ತಲು ಕಾಂಗ್ರೆಸ್ ಪಕ್ಷ ಈ ಯಾತ್ರೆ ನಡೆಸಿದೆ. ಆಮೂಲಕ ಸರ್ಕಾರಕ್ಕೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ. ಈ ಭಾರತ ಜೋಡೋ ಯಾತ್ರೆ ಶಸ್ವಿಯಾಗಿ ಸಾಗಿದ್ದು, ಸಮಾಜದ ಎಲ್ಲ ವರ್ಗದ, ಎಲ್ಲಾ ಕ್ಷೇತ್ರದ ಜನರು ಈ ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಈ ಯಾತ್ರೆಯಲ್ಲಿ ಶ್ರೀಮಂತರು, ಬಡವರು, ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯವಿಲ್ಲದೇ ನಡೆದಿದೆ. ಒಟ್ಟು 12 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯಾತ್ರೆ ಸಾಗಿದೆ.

ರಾಹುಲ್ ಗಾಂಧಿ ಅವರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವುದಾಗಿ ಹೇಳಿದ್ದು, ಯಾತ್ರೆ ಸಂದರ್ಭದಲ್ಲಿ ಒಂದು ರಾಜ್ಯದಲ್ಲಿನ ಹವಾಗುಣಗಳ ಮಧ್ಯೆ, ಬಿರು ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಎಲ್ಲ ವಯೋಮಾನದ ಜನರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದು ನಮ್ಮ ಯಶಸ್ಸು.

ಮೋದಿ ಸರ್ಕಾರ ಮಧ್ಯಮ ವರ್ಗ, ಬಡವರು, ದಿನಗೂಲಿ ಕಾರ್ಮಿಕರ ಬದುಕಿಗೆ ಯಾವುದೇ ನೀತಿ, ಕಾರ್ಯಕ್ರಮ ನೀಡಿಲ್ಲ. ಈ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಶೇ.5ರಷ್ಟು ತೆರಿಗೆ ವಿನಾಯಿತಿ ನೀಡಿದರೆ, ಬಡವರು ಬಳಸುವ ಮೊಸರು, ಹಿಟ್ಟಿನ ಮೇಲೆ ಜಿಎಸ್ಟಿ ಹಾಕಲಾಗಿದೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ. ಇನ್ನು ಕೈ ಜತೆ ಕೈ ಜೋಡಿಸಿ ಕಾರ್ಯಕ್ರಮದಲ್ಲಿ ಭಾರತದ ಗಡಿಯೊಳಗೆ ಚೀನಾ ಅತಿಕ್ರಮಣದ ವಿಚಾರವನ್ನು ನಾವು ಜನರಿಗೆ ತಿಳಿಸುತ್ತಿದ್ದೇವೆ. ಇಂದಿನ ವರದಿ ಪ್ರಕಾರ ಲಡಾಕ್ ಪ್ರದೇಶದಲ್ಲಿ ನಮ್ಮ 65 ಗಸ್ತು ಕೇಂದ್ರಗಳ ಪೈಕಿ 26 ಗಸ್ತು ಕೇಂದ್ರಗಳ ಮೇಲೆ ಭಾರತ ನಿಯಂತ್ರಣ ಕಳೆದುಕೊಂಡಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ದೇಶದ ಮೇಲೆ ಯಾರ ಅತಿಕ್ರಮಣವೂ ಆಗಿಲ್ಲ ಎಂದು ಹೇಳುತ್ತಾರೆ ಎಂದರು.

ಇದನ್ನೂ ಓದಿ : Bharat Jodo Yatra | ಭಾರತ್‌ ಜೋಡೋ ಯಾತ್ರೆಯ ಸಮಾರೋಪಕ್ಕೆ 21 ಪಕ್ಷಗಳಿಗೆ ಆಹ್ವಾನ, ಜೆಡಿಎಸ್‌ಗಿಲ್ಲ ಆಮಂತ್ರಣ

ಕಳೆದ ಮೂರು ವರ್ಷಗಳಲ್ಲಿ ಭಾರತವು ಚೀನಾ ಜತೆಗೆ ಅತಿ ಹೆಚ್ಚಿನ ವ್ಯಾಪಾರ ವ್ಯವಹಾರ ನಡೆಸಿರುವುದು, ಕೇಂದ್ರ ಸರ್ಕಾರ ನಮ್ಮ ಸೈನಿಕರ ತ್ಯಾಗ ಬಲಿದಾನವನ್ನು ಪರಿಗಣಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಚೀನಾ ಹೇಗೆ ನಮ್ಮ ದೇಶದ ನಂಬರ್ 1 ವ್ಯಾಪಾರ ರಾಷ್ಟ್ರವಾಗಲು ಸಾಧ್ಯ? ಚೀನಾ ಹಾಗೂ ಭಾರತದ ನಡುವಣ ವ್ಯಾಪಾರದ ವಿತ್ತೀಯ ಕೊರತೆಯು 100 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗಿದೆ. ಇದರಿಂದ ಚೀನಾ ಬಹುದೊಡ್ಡ ಲಾಭ ಪಡೆಯುತ್ತಿದೆ. ಇದು ಭಾರತದ ಆರ್ಥಿಕತೆಯ ಇತಿಹಾಸದಲ್ಲಿ ಚೀನಾ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಲಾಭ ಪಡೆಯುತ್ತಿದೆ.

ಈ ಎಲ್ಲ ವಿಚಾರವಾಗಿ ಕೈ ಜತೆ ಕೈ ಜೋಡಿಸಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿಸಲಾಗುವುದು. ಇನ್ನು ಜ.30ರಂದು ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಲಾಗುವುದು. ಅದರ ಜತೆಗೆ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲೂ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಗುವುದು. ಆ ಮೂಲಕ ಭಾರತ ಜೋಡೋ ಯಾತ್ರೆಯನ್ನು ಅಂತ್ಯಗೊಳಿಸಲಾಗುವುದು.

Exit mobile version