ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ (Congress Government) ಜನವಿರೋಧಿ ಮತ್ತು ರೈತವಿರೋಧಿ ನೀತಿಯನ್ನು ಖಂಡಿಸಿ ಶುಕ್ರವಾರ (ಸೆಪ್ಟೆಂಬರ್ 8) ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ (BJP Protest at Bangalore) ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ (N Ravi kumar) ಅವರು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಕಣಕ್ಕೆ ಧುಮುಕಿದ್ದು, ಸೆಪ್ಟೆಂಬರ್ 8ರ ಪ್ರತಿಭಟನೆಯ ಬೆನ್ನಿಗೇ ರಾಜ್ಯಾದ್ಯಂತ ಪ್ರವಾಸ (Statewide tour) ಮಾಡುವುದಾಗಿ ಘೋಷಿಸಿದ್ದಾರೆ.
ರಾಜ್ಯದಾದ್ಯಂತ ಮಳೆ ಇಲ್ಲದೆ ಬರ ಆವರಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸರಕಾರ ಸ್ಪಂದಿಸುತ್ತಿಲ್ಲ. 198ಕ್ಕಿಂತ ಹೆಚ್ಚು ತಾಲ್ಲೂಕುಗಳಲ್ಲಿ ಬರದ ದುಸ್ಥಿತಿ ಇದೆ. ಆದರೆ, ಬರಪೀಡಿತ ತಾಲ್ಲೂಕುಗಳನ್ನು ರಾಜ್ಯ ಸರಕಾರ ಇನ್ನೂ ಘೋಷಿಸಿಲ್ಲ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ರವಿಕುಮಾರ್ ಟೀಕಿಸಿದರು.
ದರ ಕರುಗಳಿಗೆ ಕುಡಿಯುವ ನೀರಿಲ್ಲ; ಮೇವೂ ಇಲ್ಲದ ಪರಿಸ್ಥಿತಿ ಇದೆ. ವಿದ್ಯುತ್ ಬಿಲ್ ದುಬಾರಿಯಾಗಿದ್ದರಿಂದ ಮಧ್ಯಮ ವರ್ಗದವರು ಪರಿತಪಿಸುತ್ತಿದ್ದಾರೆ. ಹಾಲಿನ ದರವನ್ನೂ ಹೆಚ್ಚಿಸಿದ್ದಾರೆ. ರಾಜ್ಯ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಲಾಗಿದೆ ಎಂದು ರವಿಕುಮಾರ್ ಆಕ್ಷೇಪಿಸಿದರು.
ʻʻಬಿಜೆಪಿ ಸರಕಾರ ಇದ್ದಾಗ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿಯಾಗಿ 4೦೦೦ ರೂ. ನೀಡಲಾಗುತ್ತಿತ್ತು. ಅದನ್ನೂ ರದ್ದು ಮಾಡಿದ್ದಾರೆ. ರಾಜ್ಯದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಕಾಂಗ್ರೆಸ್ ಸರಕಾರವು 100 ದಿನಗಳ ಆಡಳಿತ ಅವಧಿಯಲ್ಲಿ 5 ಗ್ಯಾರಂಟಿ ಅನುಷ್ಠಾನವನ್ನೇ ವಿಷಯವನ್ನಾಗಿ ಮಾಡಿಕೊಂಡು ಸಂಭ್ರಮಕ್ಕೆ ಮುಂದಾಗಿದೆ. ಸರಕಾರವು ರಾಜ್ಯದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂತೆ ಸಂಭ್ರಮದಲ್ಲಿ ತೊಡಗಿದೆ ಎಂದು ರವಿ ಕುಮಾರ್ ಟೀಕಿಸಿದರು.
ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ರಾಜ್ಯಾದ್ಯಂತ ಹೋರಾಟ
ʻʻರಾಜ್ಯದಲ್ಲಿ ನೂರಾರು ಸಮಸ್ಯೆಗಳ ಸರಮಾಲೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟಿದೆ. ನಾಳೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದುʼʼ ಎಂದು ಅವರು ತಿಳಿಸಿದರು.
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬೆಂಗಳೂರಿನ ಎಲ್ಲ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
15 ಸಾವಿರ ಜನ ಸೇರಿಸಿ ಬೆಂಗಳೂರಲ್ಲಿ ಹೋರಾಟ
ಈ ನಡುವೆ, ಬಿ.ಎಸ್. ಯಡಿಯೂರಪ್ಪ ಅವರು ಕೂಡಾ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ʻʻನಾಳೆ ಶಾಸಕರು, ಸಂಸದರು ಸೇರಿ ೧೫ ಸಾವಿರ ಜನರು ಸೇರಿಸಿ ಹೋರಾಟ ಮಾಡಲಿದ್ದೇವೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರದ ವಿರುದ್ಧ ಅನಿವಾರ್ಯವಾಗಿ ನಾವು ಹೋರಾಟ ಮಾಡಬೇಕಾಗಿದೆ. ಈ ಹೋರಾಟ ಯಾವ ಸ್ವರೂಪಕ್ಕೆ ಹೋಗುತ್ತೋ ಗೊತ್ತಿಲ್ಲ. ಈ ಹೋರಾಟದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸರ್ಕಾರವೇ ಜವಬ್ದಾರಿʼʼ ಎಂದು ಬಿಎಸ್‌ವೈ ಎಚ್ಚರಿಸಿದರು.
ʻʻನಮ್ಮ ಯಾವ ಶಾಸಕರೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ನಾನು ಪಕ್ಷದ ಶಾಸಕರ ಜೊತೆಗೆ ಮಾತಾಡಿದ್ದೇನೆ. ನಾಳೆ ಅವರು ಎಲ್ಲರು ಪ್ರತಿಭಟನೆ ಗೆ ಬರ್ತಾರೆʼʼ ಎಂದು ಹೇಳಿದರು ಬಿಎಸ್‌ವೈ.
ʻʻವಿಪಕ್ಷ ನಾಯಕ ಆಯ್ಕೆ ಇವತ್ತು ನಾಳೆ ಮಾಡುತ್ತಾರೆ. ವಿರೋಧ ಪಕ್ಷದ ನಾಯಕ ಇಲ್ಲ ಅಂತ ವಿಪಕ್ಷವಾಗಿ ಕೆಲಸ ಗಳು ನಿಂತಿಲ್ಲ. ನಾನು ನಿಮಗೆ ಇವತ್ತು ಒಂದು ಮಾತು ಹೇಳ್ತೇನೆ, ಇವತ್ತಿಂದ ಯಡಿಯೂರಪ್ಪ ಮನೆಯಲ್ಲಿ ಕುಳಿತು ಕೊಳ್ಳುವುದಿಲ್ಲ. ನನ್ನ ಪ್ರವಾಸ ಇನ್ನೂ ಮೂರು ನಾಲ್ಕು ದಿನಗಳಲ್ಲಿ ಪ್ರಾರಂಭ ಆಗುತ್ತದೆ. ರಾಜ್ಯ ಪ್ರವಾಸ ಮಾಡಿ ಬರುವ ಲೋಕಸಭಾ ಚುನಾವಣೆ ಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುವಂತೆ ಮಾಡುತ್ತೇನೆʼʼ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಪಥ ಮಾಡಿದರು.