ಬೆಂಗಳೂರು: ಇಂದಿನಿಂದ 3 ದಿನಗಳ ಕಾಲ ಬೆಂಗಳೂರು ಟೆಕ್ ಸಮ್ಮಿಟ್ ನಡೆಯಲಿದೆ. ವಸಂತನಗರದಲ್ಲಿರುವ ಬೆಂಗಳೂರು ಪ್ಯಾಲೇಸ್ ನಲ್ಲಿ ಬುಧವಾರ ಟೆಕ್ ಸಮ್ಮಿಟ್ (BTS 2022) ಉದ್ಘಾಟನೆಯಾಗಿದೆ.
ನವೆಂಬರ್ 16 – 18ರವರೆಗೂ ಈ ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿದೆ. ಇದು ಏಷಿಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ ಎಂಬ ಹೆಗ್ಗಳಿಕೆ ಗಳಿಸಿದೆ.
ರಾಜ್ಯ ಸರ್ಕಾರ ಹಾಗು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಈ ಶೃಂಗವನ್ನು ಆಯೋಜಿಸುತ್ತಿದೆ. ಈ ಶೃಂಗವು ಈ ಬಾರಿ ರಜತ ಸಂಭ್ರಮ ಆಚರಿಸುತ್ತಿರುವ ಹಿನ್ನೆಲೆೆಯಲ್ಲಿ, ಟೆಕ್ ಫಾರ್ ನೆಕ್ಸ್ಟ್ ಜೆನ್ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಶೃಂಗದ ಪ್ರಯುಕ್ತ ದೇಶವಿದೇಶಗಳ 550ಕ್ಕೂ ಹೆಚ್ಚು ಪ್ರದರ್ಶಕರು ವಸ್ತುಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟಾರೆ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಸ್ಟಾರ್ಟ್ ಅಪ್ ಪೆವಿಲಿಯನ್‌ನಲ್ಲಿ 330ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಲಿದ್ದಾರೆ.
ಕೆನಡಾ, ನೆದರ್ಲೆಂಡ್ಸ್, ಜರ್ಮನಿ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗು ಇತರೆ ದೇಶಗಳ ತಂತ್ರಜ್ಞಾನ ಕಂಪನಿಗಳು, ಉದ್ಯಮಿಗಳು ಭಾಗವಹಿಸುತ್ತಿವೆ. ಯೂರೋಪ್ ಹಾಗು ಏಷಿಯಾ ಖಂಡದ 50ಕ್ಕಿಂತ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಭಾರತದ 16 ನಗರಗಳಿಂದ 16 ರಾಜ್ಯಗಳಿಂದ ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಪೆಟಿಎಂ, ಮೈಕ್ರೋಸಾಫ್ಟ್, ಫಿನ್‌ಕಾರ್ಪ್, ಗೂಗಲ್, ರೇಜರ್ ಪೇ ಸೇರಿದಂತೆ 8 ಕಂಪನಿಗಳು ಒಪ್ಪಂದಗಳಿಗೆ ಸಹಿ ಹಾಕಲಿವೆ.
ಇದನ್ನೂ ಓದಿ: BTS 2022 | ಭಾರತದ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಗಳೂರಿನ ಕೊಡುಗೆ ಗಣನೀಯ: ಪ್ರಧಾನಿ ಮೋದಿ ಶ್ಲಾಘನೆ