Site icon Vistara News

BY Vijayendra : ಜಮೀರ್‌ ಖಾನ್‌ ಅಧಿವೇಶನಕ್ಕೆ ಬರ್ಲಿ ನೋಡ್ಕೊಳ್ತೇವೆ ಎಂದ ವಿಜಯೇಂದ್ರ

BY Vijayendra in Mangalore

ಮಂಗಳೂರು: ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸ್ಪೀಕರ್ ಸ್ಥಾನಕ್ಕೆ ಎಲ್ಲರೂ ಪಕ್ಷಾತೀತವಾಗಿ ಗೌರವ ಕೊಡುತ್ತಾರೆ. ಆ ಸ್ಥಾನದಲ್ಲಿ ಕುಳಿತ ವ್ಯಕ್ತಿಗೆ ಒಂದು ಜಾತಿ, ಧರ್ಮದ ಬಣ್ಣ ಕೊಡುವ ಕಾರ್ಯವನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್‌ (Zameer Ahmed Khan) ಅವರು ಮಾಡಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು (Remove from Cabinet). ಇಲ್ಲವಾದರೆ ಅವರು ಮುಂದಿನ ಅಧಿವೇಶನದಲ್ಲಿ (Assembly Session) ಹೇಗೆ ಪಾಲ್ಗೊಳ್ಳುತ್ತಾರೋ ನೋಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸವಾಲು ಹಾಕಿದ್ದಾರೆ. ಅವರು ಬುಧವಾರ ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಗಾಗಿ ಆಗಮಿಸಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.

ಜಮೀರ್ ಅಹ್ಮದ್ ಎಂಬ ಪುಣ್ಯಾತ್ಮ ಇವತ್ತು ರಸ್ತೆಯಲ್ಲಿ ಓಡಾಡಲು ಬಿಟ್ಟದ್ದೇ ನಮ್ಮ ಅಪರಾಧ. ಇದು ತಲೆತಗ್ಗಿಸುವ ಕೆಲಸವಲ್ಲವೇ? ಇಷ್ಟೊತ್ತಿಗಾಗಲೇ ಅವರ ರಾಜೀನಾಮೆ ಪಡೆಯಬೇಕಿತ್ತು. ಜಮೀರ್ ಅಹ್ಮದ್ ಮುಂದಿನ ಅಧಿವೇಶನದಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ ಎಂದು ನೋಡುತ್ತೇವೆ ಎಂದು ವಿಜಯೇಂದ್ರ ಅವರು ಸವಾಲೆಸೆದರು. ಮುಖ್ಯಮಂತ್ರಿಗಳು ತಕ್ಷಣ ಜಮೀರ್ ರಾಜೀನಾಮೆ ಪಡೆಯಲಿ ಎಂದು ಅವರು ಆಗ್ರಹಿಸಿದರು.

ಬರದ ನಡುವೆಯೂ ಲೋಕಸಭಾ ಚುನಾವಣೆಯ ಚಿಂತೆ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆ ಕಡೆ ಗಮನ ಹರಿಸುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.

ಲೋಕಸಭಾ ಚುನಾವಣೆ ತಯಾರಿ ಕಡೆ ಗಮನ ಕೊಡಿ. ಅದರ ವಿಚಾರದಲ್ಲಿ ನಮ್ಮ ತಕರಾರಿಲ್ಲ. ಆದರೆ, ನಿಮ್ಮ ಆದ್ಯತೆ ಏನು? ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರಕಾರವು ಬೇಸಿಗೆಯಲ್ಲೂ ರೈತರಿಗೆ ತೊಂದರೆ ಆಗಬಾರದೆಂದು ಕನಿಷ್ಠ 7 ಗಂಟೆ ವಿದ್ಯುತ್ ಕೊಟ್ಟಿತ್ತು ಎಂದು ನೆನಪಿಸಿದರು.

ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಆಗುವುದಾಗಿ ಮುಂಚಿತವಾಗಿಯೇ ಆಲೋಚಿಸಿ ಬಿಜೆಪಿ ಸರಕಾರವು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಿತ್ತು. ಆದರೆ, ಮುಂಗಾರು, ಹಿಂಗಾರು ವೈಫಲ್ಯ, ಒಂದೆರಡು ತಾಸು ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದರೂ ರಾಜ್ಯ ಸರಕಾರವು ಹೊಣೆಗೇಡಿಯಾಗಿ ವರ್ತಿಸಿದೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು. ರೋಮ್ ಹೊತ್ತಿ ಉರಿಯಲು ದೊರೆ ಪಿಟೀಲು ಬಾರಿಸಿದ ಪರಿಸ್ಥಿತಿ ಇದೆಂದು ಕಿಡಿಕಾರಿದರು.

ಮೋಜಿನಲ್ಲಿ ಮುಳುಗಿದ ಸರ್ಕಾರ

ಆಡಳಿತಕ್ಕೆ ಬಂದು ಆರು ತಿಂಗಳಾದರೂ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮೋಜಿನಲ್ಲಿ ಮುಳುಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಸ್ವಗೃಹ ನವೀಕರಣ, ಅಲಂಕಾರಕ್ಕೆ ಕೋಟಿಗಟ್ಟಲೆ ಹಣ ಬಳಸುತ್ತಾರೆ. ಬರಗಾಲವಿದ್ದರೂ ಸಚಿವರಿಗೆ ಹೊಸ ಕಾರು ಖರೀದಿ ನಡೆದಿದೆ. ಇದು ಅವಿವೇಕತನದ ಪ್ರದರ್ಶನ ಎಂದು ಟೀಕಿಸಿದರು. ಇದು ನಾಡಿನ ರೈತರಿಗೆ ಮಾಡುವ ಅವಮಾನ ಎಂದರು.

ಪದೇಪದೆ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಹಾಗಿದ್ದರೆ ರಾಜ್ಯ ಸರಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ಜವಾಬ್ದಾರಿ ಮರೆತ ರಾಜ್ಯ ಸರಕಾರದ ಕಿವಿ ಹಿಂಡುವ ಕೆಲಸವನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಾವು ಮಾಡುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ; BY Vijayendra : ಸಿಎಂ ತವರಲ್ಲಿ ವಿಜಯೇಂದ್ರ ಶಕ್ತಿ ಪ್ರದರ್ಶನ; ಹಳೆ ಮೈಸೂರೇ ಟಾರ್ಗೆಟ್‌

ಶಾಸಕರಿಗೆ ಒಂದು ರೂ. ಅನುದಾನವೂ ಸಿಗುತ್ತಿಲ್ಲ

ಅಭಿವೃದ್ಧಿಗೆ ಸಂಬಂಧಿಸಿ ಶಾಸಕರಿಗೆ ಒಂದು ರೂಪಾಯಿ ಅನುದಾನವೂ ಸಿಗುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೂ ತಮ್ಮ ಕ್ಷೇತ್ರದಲ್ಲಿ ಗೌರವಯುತವಾಗಿ ಓಡಾಡದ ಹಾಗಾಗಿದೆ. ರಾಜ್ಯ ಸರಕಾರ ಜನರ ವಿಶ್ವಾಸ ಕಳಕೊಂಡಿದೆ. ರೈತ ವಿರೋಧಿ, ಬಡವರ ವಿರೋಧಿ ಸರಕಾರಕ್ಕೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಮುಂದೆ ಅದಾಗದಂತೆ ನಾವು ಇವತ್ತು ಎಚ್ಚರ ವಹಿಸಬೇಕಿದೆ. ಹಿಂದೂ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಭ್ರಷ್ಟ, ದುಷ್ಟ ಸರಕಾರವನ್ನು ಎಲ್ಲರೂ ಒಗ್ಗಟ್ಟಾಗಿ ಎಚ್ಚರಿಸುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಸಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುವಂತೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದ ಮತ್ತು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರು ಹಾಜರಿದ್ದರು.

Exit mobile version