ಬೆಂಗಳೂರು: “ರಾಜ್ಯ ಸರಕಾರದ ಸಚಿವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ (Insulting farmers). ಅಂಥ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬುದ್ಧಿವಾದ ಹೇಳಲಿ. ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಲಿʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದ್ದಾರೆ.
ರೈತರು ಬರಗಾಲ ಬರಲಿ, ಸಾಲ ಮನ್ನಾ ಆಗಲಿ ಎಂದು ಹಾರೈಸುತ್ತಾರೆ ಎಂಬ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ (Shivananda Paateel) ಅವರ ಹೇಳಿಕೆಯನ್ನು ಖಂಡಿಸಿದ ಬಿ.ವೈ ವಿಜಯೇಂದ್ರ ಅವರು, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಅವರ ಹೇಳಿಕೆಯೂ ಖಂಡನಾರ್ಹ. ಅವರು ಮತ್ತೆ ಮತ್ತೆ ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಅನ್ನ ಕೊಡುವ ರೈತರ ಬಗ್ಗೆ ಸಚಿವರ, ಸರಕಾರದ ಧೋರಣೆ ಆಕ್ಷೇಪಾರ್ಹ ಎಂದು ಹೇಳಿದ ಅವರು ಬರ ಸಂಕಷ್ಟದ ಸಮಯದಲ್ಲಿ ಜಮೀರ್ ಅಹ್ಮದ್ ಖಾನ್ ಮತ್ತು ಟೀಮ್ನ ಐಷಾರಾಮಿ ದೆಹಲಿ ಪ್ರವಾಸದ ನಡೆಯನ್ನೂ ಖಂಡಿಸಿದರು.
ಬರಗಾಲ ಸಂಬಂಧ ರೈತರಿಗೆ ಸಮರ್ಪಕ ಪರಿಹಾರ ನೀಡದ ಸರಕಾರ ಇದು. ರೈತರಿಗೆ ಪದೇಪದೇ ಅವಮಾನ ಮಾಡುವ ಸರ್ಕಾರ ಎಂದು ಹೇಳಿದ ಅವರು, ಸಚಿವರ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಸೇರಿ ಸಚಿವರ ನಡವಳಿಕೆ ನಾವೆಲ್ಲ ತಲೆತಗ್ಗಿಸುವಂತಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಪದೇ ಪದೇ ಅನ್ನದಾತರನ್ನು ಅವಮಾನಿಸುವುದು, ರೈತರ ಜೀವನವನ್ನು ಹಂಗಿಸುವುದು, ರೈತರ ಮೇಲೆ ದೌರ್ಜನ್ಯ ನಡೆಸುವುದು, ಕಾಂಗ್ರೆಸ್ ತನ್ನ ಸಂಸ್ಕೃತಿಯನ್ನಾಗಿ ಅಳವಡಿಸಿಕೊಂಡಂತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವ ಶಿವಾನಂದ ಪಾಟೀಲರಿಗೆ ರೈತರನ್ನು ನಿಂದಿಸಿ ಅವಹೇಳನ ಮಾಡುವ ಉಸ್ತುವಾರಿ ವಹಿಸಿಕೊಟ್ಟಂತಿದೆ.
— Vijayendra Yediyurappa (@BYVijayendra) December 25, 2023
ಈ ಹಿಂದೆಯೂ ಶಿವಾನಂದ ಪಾಟೀಲರು… pic.twitter.com/8TP8XatNqe
ಇದನ್ನೂ ಓದಿ : Shivananda Pateel : ರೈತರಿಗೆ ಅಪಮಾನ; ಸಚಿವ ಪಾಟೀಲ್ ವಿರುದ್ಧ ಬಿಜೆಪಿ ಆಕ್ರೋಶ; ಪದಚ್ಯುತಿಗೆ ಆಗ್ರಹ
ಶಿವಾನಂದ ಪಾಟೀಲ್ ಹೇಳಿದ್ದೇನು?
ಇಡೀ ರಾಜ್ಯದ ರೈತರು ಬರದಿಂದ (Drought Situation) ಕಂಗೆಟ್ಟು ಆಕಾಶ ನೋಡುತ್ತಿದ್ದಾರೆ. ಸರ್ಕಾರವೂ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದೆ. ಅದರ ನಡುವೆ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ (Agriculture Marketing Minister) ಶಿವಾನಂದ ಪಾಟೀಲ್ (Shivananda pateel) ಉಡಾಫೆ ಮಾತೊಂದನ್ನು ಆಡಿದ್ದಾರೆ. ʻʻಬರಗಾಲ ಬರಲೆಂದು ರೈತರು ದಾರಿ ಕಾಯ್ತಾರೆʼʼ ಎಂದು ಹೇಳುವ ಮೂಲಕ ಅವರು ರೈತರನ್ನು ಅಪಮಾನಿಸಿದ್ದಾರೆ. ಈ ಹಿಂದೆಯೂ ಅವರು ರೈತರ ಆತ್ಮಹತ್ಯೆ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು. ಲವ್ ಕೇಸಲ್ಲಿ ಸತ್ತೋರನ್ನೆಲ್ಲ ರೈತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದಿದ್ದರು.
ರೈತರ ವಿಚಾರದಲ್ಲಿ ಹಗುರವಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್, ಬರಗಾಲ ಬರಲೆಂದು ರೈತರಿಗೆ ಅದೊಂದೇ ಆಸೆ ಇರುತ್ತೆ. ಬರಗಾಲ ಬಂದ್ರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆʼʼ ಎಂದು ಅವರು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಈ ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ʻʻರೈತರಿಗೆ ಸಾಲ ಮನ್ನಾದ ನಿರೀಕ್ಷೆ ಇದೆ. ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯʼʼ ಎಂದಿದ್ದಾರೆ. ಅದರ ಜತೆಗೆ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು ಎಂದಿದ್ದಾರೆ ಸಚಿವರು.