Site icon Vistara News

BY Vijayendra : ಬಿಜೆಪಿ ಸಂಕಲ್ಪ ಪತ್ರಕ್ಕಾಗಿ ರಾಜ್ಯದಲ್ಲಿ3 ಲಕ್ಷ ಜನರ ಅಭಿಪ್ರಾಯ ಸಂಗ್ರಹ; ಬಿ.ವೈ ವಿಜಯೇಂದ್ರ

BY Vijayendra

ಬೆಂಗಳೂರು: ಬಿಜೆಪಿ ಸಂಕಲ್ಪ ಪತ್ರಕ್ಕಾಗಿ (BJP Sankalpa Patra) ರಾಜ್ಯದ ಕನಿಷ್ಠ 3 ಲಕ್ಷ ಜನರ ಅಭಿಪ್ರಾಯ ಸಂಗ್ರಹದ ಗುರಿ ಇದೆ. ದೇಶದಲ್ಲಿ 1 ಕೋಟಿ ಜನರ ಅಭಿಪ್ರಾಯ ಸಂಗ್ರಹಿಸುವ ಗುರಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಂಕಲ್ಪ ಪತ್ರ ಜನಾಭಿಪ್ರಾಯ ಸಂಗ್ರಹಣಾ ಅಭಿಯಾನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಮಿಸ್ಡ್ ಕಾಲ್ ನೀಡುವುದರ ಮೂಲಕ ಪಾಲ್ಗೊಳ್ಳಬಹುದು. ಕರೆ ಮಾಡಲು ಸಂಖ್ಯೆ : 909090-2124 ನೀಡಲಾಗಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯ (Parliament Election 2024) ಕ್ಷಣಗಣನೆ ಸಂದರ್ಭದಲ್ಲಿ ನರೇಂದ್ರ ಮೋದಿಜೀ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಚಿಂತನೆಯಂತೆ ಪ್ರಣಾಳಿಕೆ ಬದಲು ಜನಾಭಿಪ್ರಾಯ ಪಡೆದು ಸಂಕಲ್ಪ ಪತ್ರದ ಮೂಲಕ ಚುನಾವಣೆ ಎದುರಿಸಲಾಗುತ್ತಿದೆ ಎಂದು ಬಿ.ವೈ ವಿಜಯೇಂದ್ರ ತಿಳಿಸಿದರು.

ಬಿಜೆಪಿ ಕೇಂದ್ರ ಸರಕಾರವು 2014ರ, 2019ರ ಚುನಾವಣೆ ಸಂದರ್ಭದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದೆ. 10 ವರ್ಷದ ನರೇಂದ್ರ ಮೋದಿ (PM Narendra Modi) ಅವರ ಅವರ ಆಡಳಿತಾವಧಿಯಲ್ಲಿ ಭರವಸೆ ಈಡೇರಿಸಿದ್ದಲ್ಲದೆ, ಯೋಜನೆ ಶಂಕುಸ್ಥಾಪನೆ ಜೊತೆಗೆ ಉದ್ಘಾಟನಾ ದಿನಾಂಕ ನಿಗದಿಪಡಿಸಿ ಸಕಾಲದಲ್ಲಿ ಪೂರ್ಣಗೊಳಿಸಿದ್ದನ್ನು ನೋಡಿದ್ದೇವೆ ಎಂದು ಅವರು ವಿವರಿಸಿದರು.

ಜನಸಂಘ ಕಾಲದಿಂದ ಪ್ರಣಾಳಿಕೆಯಲ್ಲಿ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನಕ್ಕೆ ಕಾರಣವಾದ ಜಮ್ಮು- ಕಾಶ್ಮೀರದ 370ನೇ ವಿಧಿ ರದ್ದು ಮಾಡುವ ಮೂಲಕ ಮೋದಿಯವರು ನುಡಿದಂತೆ ನಡೆದಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮನ ಭವ್ಯ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಈ ಬಾರಿ ಘೋಷಣಾ ಪತ್ರ ಪ್ರಣಾಳಿಕೆ ಬದಲು ಸಂಕಲ್ಪ ಪತ್ರ ಮುಂದಿಡಲಾಗುವುದು ಎಂದರು.

ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆ ವೇಳೆ 2047ರಲ್ಲಿ ನಮ್ಮ ಭಾರತ ವಿಕಸಿತ ಭಾರತ ಎಂಬ ಸಂಕಲ್ಪವನ್ನು ಮೋದಿಜೀ ಅವರು ಮುಂದಿಟ್ಟಿದ್ದಾರೆ. ಅದನ್ನು ಸಾಕಾರಗೊಳಿಸಲು ಅಭಿಪ್ರಾಯ ಸಂಗ್ರಹದ ಅಭಿಯಾನ ಆರಂಭಿಸಿದೆ. ಸಮಾಜದ ರೈತರು, ಮಹಿಳೆಯರು, ಯುವಜನತೆ ಸೇರಿ ಎಲ್ಲ ವರ್ಗದ ಜನರಿಂದ ಅಭಿಮತ ಸಂಗ್ರಹಿಸಲಿದ್ದೇವೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ ಅಭಿಯಾನ ಮಾರ್ಚ್ 3ರಿಂದ 15ರ ತನಕ ನಡೆಯಲಿದೆ. “ವಿಕಸಿತ ಭಾರತ – ಇದು ಮೋದಿ ಗ್ಯಾರಂಟಿ” ಈ ವಿಷಯದ ಕುರಿತು ರಾಜ್ಯಾದ್ಯಂತ ವಿಡಿಯೋ ವ್ಯಾನ್ ಹಾಗೂ ಸಲಹೆ ಪೆಟ್ಟಿಗೆಗಳ ಮೂಲಕ ಮುಂದಿನ 5 ವರ್ಷಗಳ ಗುರಿಯ ಕುರಿತು ರಾಜ್ಯದ ಜನರ ಆಶೀರ್ವಾದ ಪಡೆದು ಸಲಹೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಮಾತನಾಡಿ, ಭಾರತ ವಿಶ್ವಗುರುವಾಗುವುದು ಎಲ್ಲರ ಬಯಕೆ. ಇದಕ್ಕಾಗಿ ಪ್ರತಿ ಪ್ರಜೆಯ ಸಂಕಲ್ಪವನ್ನು ದಾಖಲಿಸಲು ಈ ಅಭಿಯಾನ ಮಾಡಲಾಗುತ್ತಿದೆ. ರಸ್ತೆ ಬದಿ ವ್ಯಾಪಾರಿ, ಪೊಲೀಸ್ ಕಾನ್‍ಸ್ಟೆಬಲ್, ಇಂಜಿನಿಯರ್, ಕ್ರೀಡಾಪಟು ಸೇರಿ ಪ್ರತಿಯೊಬ್ಬರ ಭಾವನೆಗೆ ಅವಕಾಶವಿದೆ ಎಂದು ವಿವರಿಸಿದರು.

ಬಿಜೆಪಿ ಸಂಕಲ್ಪ ಪತ್ರವು ವಿಸ್ತೃತ ಅಭಿಪ್ರಾಯವನ್ನು ಹೊಂದಿರುತ್ತದೆ. ಶಿಕ್ಷಣ, ಕ್ರೀಡೆ, ಧಾರ್ಮಿಕ ಭಾವನೆಗಳ ರಕ್ಷಣೆ ಸೇರಿ ಎಲ್ಲ ಭಾವನೆಗಳ ಸಂಗ್ರಹ ನಡೆಯಲಿದೆ. ಕರ್ನಾಟಕದಲ್ಲಿ 3 ಲಕ್ಷಕ್ಕಿಂತ ಹೆಚ್ಚು ಜನರು ಅಭಿಪ್ರಾಯ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ : Parliament Election : ಚಿಕ್ಕಬಳ್ಳಾಪುರದಿಂದ ಶರತ್‌ ಬಚ್ಚೇಗೌಡರ ಪತ್ನಿ ಪ್ರತಿಭಾ ಕಣಕ್ಕೆ?; ಕುಟುಂಬ ಹೇಳಿದ್ದೇನು?

ಮೋದಿ ಗ್ಯಾರಂಟಿ ನಿಜವಾದುದು. ಇತರ ಪಕ್ಷಗಳದು ನೀರಿನ ಮೇಲೆ ಗುಳ್ಳೆ ಇದ್ದಂತೆ ಎಂದು ಜನರಿಗೂ ಅರಿವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ನೈಜ ಗ್ಯಾರಂಟಿಯನ್ನು ಮೋದಿಜೀ ಕೊಟ್ಟಿದ್ದಾರೆ. ಓಲೈಕೆ ರಾಜಕಾರಣ ಬಿಜೆಪಿಯದಲ್ಲ ಎಂದು ಹೇಳಿದರು. ಜನರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ನೀಡಬೇಕು ಎಂದು ಬಿ.ವೈ ವಿಜಯೇಂದ್ರ ಅವರು ಮನವಿ ಮಾಡಿದರು.

ರಾಜ್ಯ ಉಪಾಧ್ಯಕ್ಷೆ ಮತ್ತು ಅಭಿಯಾನದ ಸಹ ಸಂಚಾಲಕಿ ಮಾಳವಿಕಾ ಅವಿನಾಶ್ ಅವರು ಮಾತನಾಡಿ, ಸಂಕಲ್ಪ ಪತ್ರಕ್ಕೆ ಡಿಜಿಟಲ್ ಮೀಡಿಯ ಮೂಲಕ ಅಥವಾ ನಮೋ ಆಪ್ ಮೂಲಕ ದಾಖಲಿಸಲು ಅವಕಾಶವಿದೆ. ಇದನ್ನು ಬಳಸಿಕೊಳ್ಳಿ ಎಂದು ವಿನಂತಿಸಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾಮೋಹನ್‍ದಾಸ್ ಅಗರವಾಲ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಖ್ಯಾತ ಕ್ರಿಕೆಟ್ ತಾರೆ ವೆಂಕಟೇಶಪ್ರಸಾದ್, ಸಾಹಿತಿ- ಐಎಎಸ್ ಅಧಿಕಾರಿ, ಅಭಿಯಾನದ ಸಹ ಸಂಚಾಲಕ ಸಿ.ಆರ್.ಸೋಮಶೇಖರ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಮತ್ತಿತರರು ಉಪಸ್ಥಿತರಿದ್ದರು. ನರೇಂದ್ರ ಮೋದಿಯವರ ಸರಕಾರದ ಸಾಧನೆಗಳ ವಿಡಿಯೋ ಪ್ರದರ್ಶನವಿತ್ತು. ಕ್ರಿಕೆಟ್ ತಾರೆ ವೆಂಕಟೇಶಪ್ರಸಾದ್ ಸೇರಿ ಹಲವರು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಸಲಹಾ ಪೆಟ್ಟಿಗೆಗೆ ಹಾಕಿದರು.

Exit mobile version