ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಕ್ಕೆ (Karnataka Drought) ರೈತರು ಕಂಗಾಲಾಗಿದ್ದಾರೆ. ಕೆಲವು ಕಡೆ ನೀರಿಗಾಗಿ ಪರದಾಟ ಶುರುವಾಗಿದೆ. ಮಳೆ ಮುಂದೆ ಆಗುತ್ತದೆಯೋ ಇಲ್ಲವೋ ಎಂಬ ಆತಂಕದ ಛಾಯೆ ಆವರಿಸಿದೆ. ಈ ನಡುವೆ, ರಾಜ್ಯ ಸರ್ಕಾರ ರೈತರಿಗೆ ಸಮರ್ಪಕವಾಗಿ ಬರ ಪರಿಹಾರವನ್ನು ಕೊಟ್ಟಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಾ ಬಂದಿದೆ. ಈ ನಡುವೆಯೂ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಕೆಲವು ಸಚಿವರ ನಡೆ ಈಗ ಮತ್ತೊಂದು ಟೀಕೆಗೆ ಗುರಿಯಾಗಿದೆ. ರೈತರ ಬರ ಪರಿಹಾರ ಹಣವನ್ನು ಕೇಂದ್ರದಿಂದ ಪಡೆದುಕೊಳ್ಳಲು ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿರುವುದು ಎಷ್ಟು ಸರಿ? ಇದೊಂದು ದುರಾಡಳಿತದ ಸರ್ಕಾರವಾಗಿದೆ. ಈ ಸರ್ಕಾರದವರಿಗೆ ನೈತಿಕತೆ ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕಟುವಾಗಿ ಟೀಕಿಸಿದ್ದಾರೆ.
ಬರ ಪರಿಹಾರವನ್ನು ಕೇಳುವ ನಿಟ್ಟಿನಲ್ಲಿ ನವ ದೆಹಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಐಷಾರಾಮಿ ವಿಮಾನದಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದಾರೆ. ಇದೇ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ವಿಮಾನದ ಐಷಾರಾಮಿ ಸೌಕರ್ಯಗಳ ಸಹಿತ ತಮ್ಮದೊಂದು ವಿಡಿಯೊ ಶೂಟ್ ಮಾಡಿಸಿಕೊಂಡಿದ್ದಾರೆ. ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಅಪ್ಲೋಡ್ ಮಾಡಿದ್ದರು. “ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು” ಎಂದು ಜಮೀರ್ ಬರೆದುಕೊಂಡಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
"ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
— Vijayendra Yediyurappa (@BYVijayendra) December 22, 2023
ಜನರ ದುಡ್ಡು ಆಕಾಶದಲ್ಲಿ ಜಾತ್ರೆ".
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂಥಾ ಗಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು… pic.twitter.com/Bx5VLq1hsB
ಈ ವಿಡಿಯೊ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿ.ವೈ. ವಿಜಯೇಂದ್ರ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂಥ ಗಂಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಪೋಸ್ಟ್ನಲ್ಲೇನಿದೆ?
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
ಜನರ ದುಡ್ಡು ಆಕಾಶದಲ್ಲಿ ಜಾತ್ರೆ”.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂಥ ಗಂಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿರುವ ಸಚಿವ
ಜಮೀರ್ ಅಹ್ಮದ್ ಖಾನ್ ಅವರ ಜತೆ ಜನರ ತೆರಿಗೆ ಹಣ ವ್ಯಯಿಸಿ ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋಜಿನ ಭಾಗವಾಗಿರುವುದು ಈ ರಾಜ್ಯದ ದೌರ್ಭಾಗ್ಯವಲ್ಲದೆ ಮತ್ತಿನ್ನೇನೂ ಅಲ್ಲ.
ಇದನ್ನು ಓದಿ: Nandini Buffalo Milk: ಇಂದಿನಿಂದ ರಾಜ್ಯದಲ್ಲಿ ಕೆಎಂಎಫ್ ಎಮ್ಮೆ ಹಾಲು; ಇದು 3 ತಿಂಗಳು ಕೆಡಲ್ಲ!
ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ “ರೋಮ್ ದೊರೆ ನೀರೋ”ವನ್ನು ಉಲ್ಲೇಖಿಸುವ ಬದಲು “ರಾಜ್ಯವು ಬರದಿಂದ ತತ್ತರಿಸುತ್ತಿದ್ದರೆ, ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ” ಎಂದು ವರ್ಣಿಸಬಹುದಾಗಿದೆ” ಎಂದು ವಿಜಯೇಂದ್ರ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ