ಬೆಂಗಳೂರು: ಬೆಂಗಳೂರಿನ ʼಕೆಫೆ ರನ್‌ವೆʼ ಎಂಬ ಹುಕ್ಕಾಬಾರ್‌ನಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಹುಕ್ಕಾಗಳನ್ನು ಮಾರುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಹುಕ್ಕಾ ಮಾರುತ್ತಿದ್ದ 3 ಜನ ಆಸಾಮಿಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣಾ ಪೊಲೀಸರು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಮಾನ ನಿಲ್ದಾಣ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕನ್ನಮಂಗಲ ಗೇಟ್‌ನ ಸಮೀಪ ಇರುವ ಬೆಂಗಳೂರು ಹೈದರಾಬಾದ್ ರಸ್ತೆ (ಎನ್‌ಎಚ್-7) ಪಕ್ಕದಲ್ಲಿರುವ CAFE RUNWAYಯಲ್ಲಿ ಹುಕ್ಕಾ ಬಾರ್‌ಗಳನ್ನು ತೆರೆಯಲಾಗಿತ್ತು. ಆದರೆ, ಅಲ್ಲಿ ಸರ್ಕಾರವು ಹೊರಡಿಸಿರುವ ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೇ ಹುಕ್ಕಾ ಮಾರಾಟಮಾಡುತ್ತಿರುವ ಪ್ರಕರಣ ಪೊಲೀಸರಿಗೆ ತಿಳಿದುಬಂದಿತ್ತು. ಈ ಹುಕ್ಕಾ ಲಾಂಜ್‌ಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಹಣಕ್ಕೆ ಅಪಾಯಕಾರಿ ಹುಕ್ಕಾ ಸೇದಲು ನೀಡಿ ವ್ಯಸನಿಗಳಾಗುವಂತೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಪೊಲೀಸರಿಗೆ ದೊರಕಿತ್ತು.
ಇದನ್ನೂ ಓದಿ: ಡ್ರಗ್ಸ್ ಸೇವನೆ, ರೇವ್ ಪಾರ್ಟಿ ಆರೋಪ, ಪಬ್ ಮೇಲೆ ಪೊಲೀಸರ ದಾಳಿ
ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಪೊಲೀಸರು ಮೇ 8ರ ಶನಿವಾರ ರಾತ್ರಿ ಸುಮಾರು 8 ಗಂಟೆಯ ಹೊತ್ತಿಗೆ CAFE RUNWAYಯ ಮೇಲೆ ದಾಳಿ ಮಾಡಿದರು. ಮೂವರು ಆರೋಪಿಗಳನ್ನು ಬಂಧಿಸಿ, ಹುಕ್ಕಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹುಕ್ಕಾ ಚಿಲುಮೆ, ಹುಕ್ಕಾ ಪೈಪುಗಳು, ಸಿಗರೇಟು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಸೀಂ ಅಹಮ್ಮದ್, ಮಹಮ್ಮದ್ ಸಲ್ಮಾನ್ ಎಂಬುವರ ಮಾಲೀಕತ್ವಕ್ಕೆ ಈ ಹುಕ್ಕಾಬಾರ್ ಸೇರಿದೆ ಎಂದು ತಿಳಿದು ಬಂದಿದೆ. ಆರೋಪಿಗಳು ಹಾಗೂ ಹುಕ್ಕಾಬಾರ್ ಮಾಲೀಕರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರೋಪಿಗಳು:
1) ಆತಿಕುರ್ ರೆಹಮಾನ್ ಬಿನ್ ನಿಜಾಮುದ್ದೀನ್- 25 ವರ್ಷ
2) ಅಯೂಬ್ ಖಾನ್ ಬಿನ್ ಶಂಶುದ್ದೀನ್- 26 ವರ್ಷ
3) ಗಣೇಶ್ ಬಿನ್ ಹರಿಬಹದ್ದೂರ್- 19 ವರ್ಷ