ಬೆಂಗಳೂರು: ಮಾದಾವರ ಟೋಲ್‌ಗೇಟ್ ಬಳಿ ಏ.21ರಂದು ನಡೆದಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ. ಇದರಿಂದ ಪ್ರಕರಣದಲ್ಲಿ ಸಾವಿನ ಸಂಖ್ಯೆ 4ಕ್ಕೇರಿದೆ. ಅಪಘಾತದಲ್ಲಿ ಮಾರುತಿ ಬಲೆನೊ ಕಾರು ಡಿಕ್ಕಿಯಾಗಿದ್ದರಿಂದ ಪಲ್ಟಿಯಾದ ಓಮ್ನಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ ಬಾಲಕಿಯೊಬ್ಬಳು ಸಜೀವ ದಹನವಾಗಿದ್ದಳು. ಘಟನೆಯಲ್ಲಿ (Car Accident) ಗಾಯಗೊಂಡಿದ್ದ 14 ಜನರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು, ಈ ಪೈಕಿ ಮೂವರು ಇದೀಗ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿವರ
ಬೆಂಗಳೂರು-ತುಮಕೂರು ಹೆದ್ದಾರಿಯ ಮಾದಾವರ ಟೋಲ್‌ಗೇಟ್ ಬಳಿ ಏ.21ರಂದು ರಾತ್ರಿ ಮಾರುತಿ ಓಮ್ನಿ (Maruti Omni) ವಾಹನಕ್ಕೆ ಬಲೆನೊ ಕಾರು (Baleno) ಹಿಂದಿನಿಂದ ಡಿಕ್ಕಿಯಾದ (Road Accident) ಪರಿಣಾಮ ಬಾಲಕಿಯೊಬ್ಬಳು (girl death) ಮೃತಪಟ್ಟು, ನಾಲ್ವರ ಸ್ಥಿತಿ ಗಂಭೀರವಾಗಿತ್ತು.
ಓಮ್ನಿಯಲ್ಲಿದ್ದವರು ಅಬ್ಬಿಗೆರೆ, ದಾಸಾನುಪುರದ ಸಂಬಂಧಿಕರ ಮನೆಯಿಂದ ಬರುತ್ತಿದ್ದಾಗ ದುರಂತ ಘಟಿಸಿತ್ತು ಒಟ್ಟು ಎಂಟು ಜನ ಮಾರುತಿ ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಲೆನೊ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಬಲೆನೊ ಕಾರು ಹಿಂದಿನಿಂದ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಓಮ್ನಿ ಮೂರು ಪಲ್ಟಿಯಾಗಿತ್ತು. ಈ ವೇಳೆ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದ 14 ವರ್ಷದ ಬಾಲಕಿ ದಿವ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಳು.
ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಟು ಜನರಲ್ಲಿ ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್, ಶಾಂತಿಲಾಲ್ ಗಾಯಗೊಂಡಿದ್ದರು. ಎಲ್ಲರೂ ದಾಸನಪುರ ನಿವಾಸಿಗಳು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನಮನ್, ಸುನಿತಾ, ಮಾಯಾಂಕ್ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ | Amrita Pandey: ಭೋಜ್‌ಪುರಿ ಜನಪ್ರಿಯ ನಟಿ ಅಮೃತಾ ಪಾಂಡೆ ಆತ್ಮಹತ್ಯೆ; ಸಾವಿಗೆ ಮುನ್ನ ಬರೆದ ವಾಟ್ಸಾಪ್ ಸ್ಟೇಟಸ್‌ನಲ್ಲಿ ಏನಿದೆ?
ಮತ್ತೊಂದು ಕಾರಿನಲ್ಲಿದ್ದ ಚಾಲಕ ರಕ್ಷಿತ್, ಚೇತನ್, ಮುಬಾರಕ್, ಸಲ್ಮಾ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅಪಘಾತಕ್ಕೆ ಕಾರಣವಾದ ಬಾಲೆನೋ ಕಾರು ಚಾಲಕ ಇನ್ಶೂರೆನ್ಸ್ ಹಣ ಕಟ್ಟದೆ ಫೇಕ್ ನಂಬರ್ ಹಾಕಿದ್ದ ಎನ್ನಲಾಗಿದೆ. ಜತೆಗೆ ಇದರ ಅಸಲಿ ಕಾರಿನ ಕಾರು ನಂಬರ್ ಬೆಳಗಾವಿಯ ಪಲ್ಲವಿ ಎಂಬುವವರಿಗೆ ಸೇರಿದ್ದು, ಹೀಗಾಗಿ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಚುರಕುಗೊಂಡಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.