ಬೆಂಗಳೂರು: ಶೋರೂಮ್‌ನಲ್ಲಿ ತಮ್ಮ ಕಾರಿನ ನಂಬರ್ ಹೊಂದಿದ್ದ, ದಾಖಲೆಗಳನ್ನೂ ಹೊಂದಿದ್ದ ಕಾರು ಮಾರಾಟಕ್ಕೆ ನಿಂತಿದ್ದ ವಿಷಯ ಕೇಳಿ ಶಾಸಕರೇ ತಬ್ಬಿಬ್ಬಾದ ಘಟನೆ (fake car fraud) ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಶೋ ರೂಮ್‌ನಲ್ಲಿ ಕಾರು ಖರೀದಿ ಮಾಡುವ ಮುನ್ನ ಎಚ್ಚರ ವಹಿಸಿ. ಸ್ವಲ್ಪ ಯಾಮಾರಿದರೂ ನಿಮ್ಮ ಕತೆ ಗೋವಿಂದ ಆಗಲಿದೆ. ಯಾವುದೋ ಕಾರಿಗೆ ಇನ್ಯಾವುದೋ ನಂಬರ್ ಹಾಕಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.
ಹೀಗೆ ವಂಚನೆಗೆ ಒಳಗಾದವರು ವಿಧಾನ ಪರಿಷತ್ ಸದಸ್ಯ ಬೋಜೇಗೌಡ. ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಪಕ್ಕದಲ್ಲೇ ಇರುವ ಐ ಕಾರ್ಸ್ ಸ್ಟುಡಿಯೋ ಶೋರೂಮ್‌ನಲ್ಲಿ ಈ ಘಟನೆ ನಡೆದಿದೆ. ಈ ಶೋರೂಮ್‌ನಲ್ಲಿ ಶಾಸಕರ ಕಾರಿನ ನಂಬರ್ ಹೊಂದಿದ್ದ ಕಾರು ನಿಂತಿದ್ದುದನ್ನು ಎಂಎಲ್‌ಸಿ ಪಿಎ ಕಂಡು ಶೋರೂಮ್ ಒಳಹೋಗಿ ವಿಚಾರಿಸಿದ್ದರು. ʼಕಾರು ಸೇಲಾಗಿದೆ, ನಿಮಗೆ ಬೇಕಿದ್ದರೆ ಟ್ರಯಲ್ ನೋಡಿʼ ಎಂದು ಶೋರೂಂನವರು ಕೇಳಿದ್ದಾರೆ.
ಪಿಎ ಶಾಕ್ ಆಗಿ, ದಾಖಲೆ ಸರಿಯಿದೆಯೇ ಎಂದು ವಿಚಾರಿಸಿದ್ದಾರೆ. ಆರ್‌ಸಿ ಕಾರ್ಡ್ ಸಹ ಇತ್ತು, ಅದೂ ಬೋಜೇಗೌಡರ ಹೆಸರಲ್ಲೇ ಇತ್ತು. ತಕ್ಷಣ ಪಿಎ ಬೋಜೇಗೌಡರಿಗೆ ಕಾಲ್ ಮಾಡಿ, ನಿಮ್ಮ ಕಾರು ಮಾರಾಟ ಮಾಡಿದಿರಾ ಎಂದು ಕೇಳಿದ್ದಾರೆ. ಇಲ್ಲ ಎಂದು ಬೋಜೇಗೌಡರು ಉತ್ತರಿಸಿದ್ದಾರೆ. ಶೋರೂಂನಲ್ಲಿ ನಿಮ್ಮ ನಂಬರಿನ ಕಾರು ಇದೆ ಎಂಬ ಮಾಹಿತಿಯನ್ನು ಪಿಎ ನೀಡಿದ್ದು, ಕೂಡಲೇ ಹೈಗ್ರೌಂಡ್ ಠಾಣೆಯಲ್ಲಿ ಎಂಎಲ್‌ಸಿ ದೂರು ದಾಖಲಿಸಿದ್ದಾರೆ.
ದೂರಿನನ್ವಯ ಹೈಗ್ರೌಂಡ್ ಪೊಲೀಸರು ಐ ಕಾರ್ ಸ್ಟುಡಿಯೋ ಮಾಲಿಕ ಇಮ್ರಾನ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Fraud Gang | ಅಡಮಾನಕ್ಕೆ ಇಟ್ಟ ಕಾರು ಬೇರೊಬ್ಬರ ಪಾಲು; ಪೊಲೀಸರ ಬಲೆಗೆ ಖರ್ತನಾಕ್ ಗ್ಯಾಂಗ್