ಬೆಂಗಳೂರು: ಚುನಾವಣೆಗೆ ಮುನ್ನ ಮೇಕೆದಾಟು ಯೋಜನೆಯ (Mekedatu Project) ಅನುಷ್ಠಾನಕ್ಕಾಗಿ ಕಾಂಗ್ರೆಸ್ ದೊಡ್ಡ ಮಟ್ಟದ ಪಾದಯಾತ್ರೆ (Mekedatu padayatre) ನಡೆಸಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ತಕ್ಷಣವೇ ಯೋಜನೆಯನ್ನು ಜಾರಿಗೆ (Cauvery Dispute) ತರಬೇಕು ಎಂದು ಬಿಜೆಪಿ (BJP deamands for Mekedatu project) ಆಗ್ರಹಿಸಿದೆ. ಹೀಗಾಗಿ ಬೇಡಿಕೆ ಮಂಡಿಸುವ ಸರದಿ ಬಿಜೆಪಿಯದ್ದಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಿಗೆ (Memorandum to BWSSP presindent) ಮನವಿ ಸಲ್ಲಿಸಿದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ (CT Ravi) ನೇತೃತ್ವದ ಬಿಜೆಪಿ ನಿಯೋಗವು (BJP Delegation) ಅಲ್ಲೇ ಪ್ರತಿಭಟನೆಯನ್ನೂ ದಾಖಲಿಸಿತು.
ಮುಂಬರುವ ದಿನಗಳಲ್ಲಿ ಬೆಂಗಳೂರು ಮಹಾನಗರಕ್ಕೆ ಉದ್ಭವಿಸುವ ನೀರಿನ ಸಮಸ್ಯೆ ಬಗ್ಗೆ ಮನವಿಯಲ್ಲಿ ಗಮನ ಸೆಳೆಯಲಾಗಿದ್ದು, ಬೆಂಗಳೂರಿನ ನೀರಿನ ಸಂಕಷ್ಟ ಪರಿಹರಿಸಲು ಕೂಡಲೇ ಮೇಕೆದಾಟು ಯೋಜನೆ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಲಾಯಿತು.
ರಾಜ್ಯ ಸರ್ಕಾರವು ನೀರಿನ ಹರಿವನ್ನು ಪರಿಗಣಿಸದೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದೆ. ಇದರಿಂದ ರಾಜ್ಯದ ರೈತರಿಗೆ ಧಕ್ಕೆಯಾಗುವುದಲ್ಲದೆ ರಾಜ್ಯದ ರಾಜಧಾನಿ ಬೆಂಗಳೂರಿಗೆ, ಎಲ್ಲಾ ಜಿಲ್ಲೆಗಳ ನಗರಗಳ ಜನತೆಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದಕ್ಕೆ ಮೇಕೆದಾಟು ಯೋಜನೆಯೇ ಪರಿಹಾರವಾಗಿದ್ದು, ಅದನ್ನು ತ್ವರಿತವಾಗಿ ಅನುಷ್ಠಾನ ಮಾಡುವಂತೆ ಒತ್ತಾಯಿಸಿದೆ. ಈ ಹಿಂದೆ ಕಾಂಗ್ರೆಸ್ ಮೇಕೆದಾಟು ಯೋಜನೆ ಅನುಷ್ಠಾನ ಆಗ್ರಹಿಸಿ ಮೇಕೆದಾಟುವಿನಿಂದ ಬೆಂಗಳೂರುವರೆಗೆ ಬೃಹತ್ ಪಾದಯಾತ್ರೆ ನಡೆಸಿತ್ತು.
ಕಾನೂನಿನ ಅಂಶಗಳು ಕರ್ನಾಟಕದ ಪರವಾಗಿವೆ, ರಾಜಕೀಯ ಬೇಡ
ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಹಾಗೂ ಸುಪ್ರೀಂಕೋರ್ಟಿನ ಮಾರ್ಪಡಿಸಿದ ಆದೇಶದನ್ವಯ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ರಾಜ್ಯವು ತನ್ನ ಗಡಿಯ ಒಳ ಭಾಗದಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೈಗೊಳ್ಳಲು ಅವಕಾಶವಿರುತ್ತದೆ ಎಂದು ನಿಯೋಗ ತನ್ನ ಮನವಿಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯವು ಮೇಕೆದಾಟು ಯೋಜನೆಯ ಪೂರ್ವ ಸಾಧ್ಯತ ವರದಿ (ಪ್ರಿ ಫೀಸಿಬಿಲಿಟಿ ರಿಪೋರ್ಟ್) ಅನ್ನು 2018ರ ಆಗಸ್ಟ್ 4ರಂದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಗಣಿಸಿ ಕೇಂದ್ರ ಜಲ ಆಯೋಗವು ಅದೇ ವರ್ಷದ ನವೆಂಬರ್ 22ರಂದು ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಅನುಮತಿಯು ಸಹ ನೀಡಿತ್ತು ಎಂದು ಗಮನ ಸೆಳೆಯಲಾಯಿತು.
ಕೇಂದ್ರ ಜಲ ಆಯೋಗದಿಂದ ಪೂರ್ವ ಸಾಧ್ಯತೆ ವರದಿಗೆ ಅನುಮತಿ ದೊರೆತ ನಂತರ 9,000 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಯನ್ನು 2019ರ ಜನವರಿ 18ರಂದು ಸಲ್ಲಿಸಲಾಗಿದೆ. ಈ ಎಲ್ಲಾ ಕಾನೂನಾತ್ಮಕ ಅಂಶಗಳು ಕರ್ನಾಟಕದ ಪರವಾಗಿ ಇದ್ದರೂ ಸಹ ರಾಜ್ಯ ಸರ್ಕಾರವು ತನ್ನ ಇಚ್ಛಾಶಕ್ತಿಯನ್ನು ಮರೆತು ಮೇಕೆದಾಟು ಯೋಜನೆಯನ್ನು ರಾಜಕೀಯಗೊಳಿಸಲು ಹೊರಟಿದೆ ಎಂದು ಮನವಿ ತಿಳಿಸಿದೆ.
ಜಲಮಂಡಳಿಗೆ ಮನವಿಯಲ್ಲಿರುವ ಸಲಹೆಗಳೇನು?
- ಬೆಂಗಳೂರು ಜಲ ಮಂಡಳಿಯು ತಕ್ಷಣವೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ- CWMA) ಪತ್ರ ಬರೆದು ಮೇಕೆದಾಟು ಯೋಜನೆಗೆ ತಮಿಳುನಾಡು ಸರಕಾರ ತೆಗೆದಿರುವ ತಕರಾರು ಎಲ್ಲಾ ಅರ್ಜಿಗಳನ್ನು ವಿಲೇ ಮಾಡುವಂತೆ ಮನವಿ ಮಾಡಬೇಕು.
- ಮೇಕೆದಾಟುವಿನಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿಗಾಗಿ ಸಮತೋಲಿತ ಜಲಾಶಯ (ಬ್ಯಾಲೆನ್ಸಿಂಗ್ ರಿಸರ್ವ್ ಡ್ಯಾಮ್ ನಿರ್ಮಾಣ ಮಾಡಲು) ಅನುಮತಿ ನೀಡುವಂತೆ ಒತ್ತಾಯಿಸಬೇಕು.
- ಬೆಂಗಳೂರು ಜಲ ಮಂಡಳಿ ವತಿಯಿಂದ ಜಲ ಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಮುಂದಿನ ಮಳೆಗಾಲದವರೆಗೆ ಕಾವೇರಿ ಕೊಳ್ಳದ ಜನರಿಗೆ ಮತ್ತು ಬೆಂಗಳೂರು ಮಹಾನಗರಕ್ಕೆ ಅವಶ್ಯಕತೆ ಇರುವಷ್ಟು ನೀರನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಬೇಕು.
ರಾಜ್ಯ ಸರ್ಕಾರ ಪ್ರಬಲ ವಾದ ಮಂಡಿಸಿಲ್ಲ ಎಂದ ಬಿಜೆಪಿ
ಕಾವೇರಿ ವಿಚಾರಕ್ಕೆ ಸಂಬಂಧಿಸಿದರೆ ಸುಪ್ರೀಂಕೋರ್ಟ್ ನೀಡಿರುವ ಹಿಂದಿನ ಆದೇಶಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿರುವ ಬಿಜೆಪಿ, ತಮಿಳುನಾಡು ತನಗೆ ನಿಗದಿಯಾದುದಕ್ಕಿಂತಲೂ ಹೆಚ್ಚು ಕುರುವೈ ಬೆಳೆ ಬೆಳೆಯುತ್ತಿದೆ ಎಂದು ಹೇಳಿದೆ.
ಸಾಮಾನ್ಯ ಜಲ ವರ್ಷದಲ್ಲಿ ತಮಿಳುನಾಡಿಗೆ 177.25 ಟಿಎಂಸಿ ನೀರು
ಕಾವೇರಿ ಜಲ ವಿವಾದ ಕಣಿವೆ ರಾಜ್ಯಗಳ ಸಿವಿಲ್ ಮೇಲ್ಮನವಿಗಳಲ್ಲಿ ಅಂತಿಮ ವಾದವನ್ನು ಆಲಿಸಿದ ನಂತರ ಸರ್ವೋಚ್ಚ ನ್ಯಾಯಾಲಯವು ದಿನಾಂಕ 16/2/2018ರ ಆದೇಶದಲ್ಲಿ ತನ್ನ ತೀರ್ಪನ್ನು ನೀಡಿತ್ತು. ಕರ್ನಾಟಕ ರಾಜ್ಯದ ನೀರಿನ ಹಂಚಿಕೆಯನ್ನು 270 ಟಿಎಂಸಿಯಿಂದ 284.75 ಟಿಎಂಸಿಗೆ ಹೆಚ್ಚಿಸಲಾಯಿತು. ಇದರಲ್ಲಿ 10 ಟಿಎಂಸಿಯನ್ನು ಬರಪೀಡಿತ ಪ್ರದೇಶಗಳಿಗೂ ಮತ್ತು 4.7, ಐದು ಟಿಎಂಸಿ ನೀರನ್ನು ಬೆಂಗಳೂರಿನ ನಗರ ಸೇರಿದಂತೆ ಕುಡಿಯುವ ಹಾಗೂ ಗೃಹ ಉಪಯೋಗಿ ಉದ್ದೇಶಕ್ಕಾಗಿ ನೀಡಲಾಗಿದೆ. ಸಾಮಾನ್ಯ ಜಲ ವರ್ಷದಲ್ಲಿ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿ ನೀರನ್ನು ವಾರ್ಷಿಕವಾಗಿ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.
ತಮಿಳುನಾಡು ಈ ಬಾರಿ ಡಬಲ್ ನೀರು ಬಳಸಿದೆ
2023-24ನೇ ಸಾಲಿನ ಮಳೆಗಾಲದ ನೀರಾವರಿ ಆರಂಭದ ಋತು ಅಂದರೆ 1/6/2023-24ರಂದು ಮೆಟ್ಟೂರು ಮತ್ತು ಭವಾನಿ ಅಣೆಕಟ್ಟುಗಳಲ್ಲಿ ಲಭ್ಯವಿದ್ದ ನೀರಿನ ಮಟ್ಟ 89.335 ಟಿಎಂಸಿ. ಮೆಟ್ಟೂರು ಅಣೆಕಟ್ಟೆಯಲ್ಲಿ 71.937 ಹಾಗೂ ಭವಾನಿ ಅಣೆಕಟ್ಟೆಯಲ್ಲಿ 17.395 ಟಿಎಂಸಿ ಇತ್ತು. ಈ ಪ್ರಮಾಣದಲ್ಲಿ ನೀರಿದ್ದರೆ ತಮಿಳುನಾಡು ಕುರುವೈ ಬೆಳೆಯನ್ನು 1-80 ಬೆಳೆಯಬೇಕು ಹಾಗೂ 32 ಟಿಎಂಸಿ ನೀರನ್ನು ಮಾತ್ರ ಬಳಸಬೇಕು. ತಮಿಳುನಾಡು ಕಳೆದ ಆಗಸ್ಟ್ ಏಳರವರಿಗೆ 60.97 ಟಿಎಂಸಿ ನೀರನ್ನು ಕುರುವೈ ಬೆಳಗ್ಗೆ ಬಳಸಿದ್ದು ಕಾವೇರಿ ನ್ಯಾಯ ಮಂಡಳಿ ಆದೇಶದ ಎರಡು ಪಟ್ಟು ಹೆಚ್ಚಾಗಿದೆ.
ಆದರೂ ರಾಜ್ಯ ಸರಕಾರ ಇದನ್ನು ತಿಳಿಸಲೇ ಇಲ್ಲ
ಕಾವೇರಿ ನೀರು ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕವು ತಮಿಳುನಾಡು ಹೆಚ್ಚು ಬೆಳೆ ಬೆಳೆದಿರುವುದು, ಹೆಚ್ಚು ನೀರು ಬಳಸಿದ್ದನ್ನು ಮಂಡಿಸಲೇ ಇಲ್ಲ. ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟಿನಲ್ಲಿ ದಿನಕ್ಕೆ 24 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಅರ್ಜಿ ಸಲ್ಲಿಸಿದ ತಕ್ಷಣ ನಮ್ಮ ರಾಜ್ಯದ ಕಾವೇರಿ ಕಣಿವೆ ಡ್ಯಾಮ್‍ಗಳಿಂದ ತಮಿಳುನಾಡಿಗೆ ನೀರನ್ನು ಹರಿಬಿಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ಇದು ರೈತರ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂದು ತಿಳಿಸಲಾಗಿದೆ.
ಬೆಂಗಳೂರಿಗೆ ನೀರಿನ ಸಮಸ್ಯೆ ಕಾಡಿದರೆ ಡೇಂಜರ್
ಸರ್ಕಾರವು ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಯಾಕೆ ತಡೆಯಬೇಕು ಎಂದು ಬಿಜೆಪಿ ವಿವರಿಸಿದೆ.
- ಬೆಂಗಳೂರು ಮಹಾನಗರವು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹಿರಿಮೆ ಗರಿಮೆಗಳಿಗೆ ಪ್ರಸಿದ್ಧಿಯಾಗಿದೆ.
- ಒMದು ಕಾಲದಲ್ಲಿ ಸಾರ್ವಜನಿಕ ಉದ್ದಿಮೆಗಳಿಗೆ (ಪಬ್ಲಿಕ್ ಸೆಕ್ಟರ್) ಹೆಸರುವಾಸಿಯಾಗಿದ್ದ ಬೆಂಗಳೂರು ಮಹಾನಗರವು ಇಂದು ಸಿಲಿಕಾನ್ ವ್ಯಾಲಿಯಾಗಿದೆ.
- ಜಗತ್ತಿನಲ್ಲಿ ಅತಿ ಹೆಚ್ಚು ಸಾಫ್ಟ್‌ವೇರ್ ರಫ್ತು ಮಾಡುವ ಮಹಾನಗರವಾಗಿದೆ.
- ಒಂದು ಟರ್ಮಿನಲ್ ನಿಂದ ಪ್ರಾರಂಭವಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇಂದು ಎರಡು ಟರ್ಮಿನಲ್ ಹೊಂದಿದೆ.
- ಜಗತ್ತಿನ ನಾನಾ ಮೂಲೆಗಳಿಂದ ವಿದೇಶಿ ಗಣ್ಯರು ಮತ್ತು ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
- ಬೆಂಗಳೂರು ಮಹಾನಗರವು ವಿದೇಶಿ ನೇರ ಹೂಡಿಕೆಗೆ (ಎಫ್‍ಡಿಐ) ಹೆಸರುವಾಸಿಯಾಗಿದೆ
- ಇಂಥ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ತಡೆಯುವುದು ಮುಖ್ಯ.
ನಿಯೋಗದಲ್ಲಿ ಯಾರೆಲ್ಲ ಇದ್ದರು?
ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ಥನಾರಾಯಣ, ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣಗೌಡ ಮತ್ತಿತರರು ಈ ನಿಯೋಗದಲ್ಲಿದ್ದರು.