ಬೆಂಗಳೂರು: ಯಾವುದೇ ನದಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ (Supreme Court Intervention) ಮಾಡುವಂತಿಲ್ಲ ಎಂದು ಸಂವಿಧಾನದಲ್ಲೇ ಇದೆ ಎಂಬ ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ (Former Advocate General BV Acharya) ಅದೇ ಸಂದರ್ಭದಲ್ಲಿ ಕಾವೇರಿ ವಿವಾದದಲ್ಲಿ (Cauvery Dispute) ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಧ್ಯ ಪ್ರವೇಶ ಮಾಡುವಂತೆ ಕೋರುವುದು ತಪ್ಪಲ್ಲ ಎಂದಿದ್ದಾರೆ.
ಕಾವೇರಿ ನೀರಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಮತ್ತು ರಾಜ್ಯ ಎದುರಿಸುತ್ತಿರುವ ಇಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ವಿಸ್ತಾರ ನ್ಯೂಸ್ ಬಿ.ವಿ. ಆಚಾರ್ಯ ಅವರನ್ನು ಮಾತನಾಡಿಸಿತು.
ʻʻರಾಜ್ಯಕ್ಕೆ ಮೊದಲಿಂದಲೂ ಹಿನ್ನಡೆ ಆಗಿದೆ. ಕಾರಣ ಏನು ಎಂದು ಹೇಳಲು ಆಗುವುದಿಲ್ಲ. ನಾವು ಕೋರ್ಟ್ ಹೋದಾಗಲೆಲ್ಲ ನಮಗೆ ಅನ್ಯಾಯ ಆಗಿದೆʼʼ ಎಂದು ಬಿ.ವಿ. ಆಚಾರ್ಯ ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.
ʻʻದೇಶದಲ್ಲಿ ನಮ್ಮ ಬಗ್ಗೆ ತಪ್ಪು ಭಾವನೆ ಮೂಡಿದೆ. ಕೋರ್ಟ್ ಆದೇಶ ಇಲ್ಲದೇ ಕರ್ನಾಟಕ ನೀರು ಬಿಡುವುದಿಲ್ಲ ಅನ್ನೋ ಭಾವನೆ ಇದೆ. ಅದನ್ನು ನಾವು ಮೊದಲು ತೊಲಗಿಸಬೇಕುʼʼ ಎಂದು ಬಿ.ವಿ ಆಚಾರ್ಯ ಹೇಳಿದರು.
ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಅಗತ್ಯವಿಲ್ಲ, ನ್ಯಾಯಮಂಡಳಿ ಇದೆಯಲ್ಲ
ʻʻನೀರಿನ ವಿವಾದಗಳು ಬಂದಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಸರಿಯಲ್ಲ. ಕೋರ್ಟ್ ಮಧ್ಯಪ್ರವೇಶ ಆಗಬಾರದು ಎಂದು ಸಂವಿಧಾನದಲ್ಲೇ ಇದೆ. ಜಲ ನ್ಯಾಯಮಂಡಳಿಗಳನ್ನು ಮಾಡಿದ್ದು ಅದೇ ಕಾರಣಕ್ಕಾಗಿ. ನ್ಯಾಯಮಂಡಳಿಗಳು ತಾಂತ್ರಿಕ ಪರಿಣತರನ್ನು, ಜಲ ತಜ್ಞರನ್ನು ಹೊಂದಿರುತ್ತವೆ. ಅವರಿಗೆ ವಿವಾದದ ಮೂಲ ಸ್ವರೂಪ ಸ್ಪಷ್ಟವಾಗಿ ಗೊತ್ತಿರುತ್ತದೆ. ಹೀಗಾಗಿ ಅಲ್ಲೇ ಅದು ಬಗೆ ಹರಿಯಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ನೀಡಲಾದ ತೀರ್ಮಾನ ದೊಡ್ಡ ಅನ್ಯಾಯ ಎಂದು ಹೇಳಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಎರಡು ಅರ್ಜಿಗಳನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: VISTARA TOP 10 NEWS : ಸಂಸದರ ಸಭೆಯಲ್ಲಿ ಸಿದ್ದು- ಜೋಶಿ ಜಟಾಪಟಿ, ಮಹಿಳಾ ಮೀಸಲು ವಿಧೇಯಕ ಪಾಸ್ ಇತರ ದಿನದ ಪ್ರಮುಖ ಸುದ್ದಿಗಳು
ಹಾಗಿದ್ದರೆ ರಾಜ್ಯದ ಮುಂದಿರುವ ದಾರಿ ಯಾವುದು?
ಬಿ.ವಿ. ಆಚಾರ್ಯ ಅವರ ಪ್ರಕಾರ, ʻʻರಾಜ್ಯಕ್ಕೆ ಇರುವ ದಾರಿ ಎಂದರೆ ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಬೇಕು. ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಲು ಒತ್ತಾಯ ಮಾಡಬೇಕುʼʼ ಎಂದು ಹೇಳಿದರು.
ʻʻಪ್ರಧಾನಿ ಮಧ್ಯ ಪ್ರವೇಶ ಮಾಡುವಂತೆ ಮೂರೂ ಪಕ್ಷಗಳು ಸಹ ಒತ್ತಾಯ ಮಾಡಬೇಕು. ಅದರಿಂದ ಮಾತ್ರ ನಮಗೆ ಮಧ್ಯಂತರ ಪರಿಹಾರ ಸಿಗಬಹುದುʼʼ ಎಂದು ಹೇಳಿದ ಅವರು, ಇಂತಹ ಸಂಕೀರ್ಣ ಸಂದರ್ಭಗಳಲ್ಲಿ ಈ ಹಿಂದೆಯೂ ಪ್ರಧಾನ ಮಂತ್ರಿಗಳು ಮಧ್ಯಪ್ರವೇಶ ಮಾಡಿದ್ದಾರೆ. ಪಿವಿ ನರಸಿಂಹ ರಾವ್ ಅವರು ಮಧ್ಯಪ್ರವೇಶ ಮಾಡಿದ್ದರುʼʼ ಎಂದು ನೆನಪಿಸಿದರು.
ʻʻನಮ್ಮ ರಾಜ್ಯದ ರಾಜಕಾರಣಿಗಳು ಇದನ್ನು ರಾಜಕೀಯ ಪ್ರತಿಷ್ಠೆ ವಿಚಾರವಾಗಿ ತೆಗೆದುಕೊಳ್ಳುವುದು ಬೇಡ. ತಮಿಳುನಾಡು ಸಹ ಒತ್ತಾಯ ಮಾಡುವುದು ಸರಿಯಲ್ಲ. ರಾಜಕೀಯ ಬಿಟ್ಟು ಒಂದಾಗಬೇಕುʼʼ ಎಂದು ಹೇಳಿದರು.
ಇದನ್ನೂ ಓದಿ: Cauvery Dispute : ಕಾವೇರಿ ಹೋರಾಟಕ್ಕೆ ಧುಮುಕಿದ ಆದಿಚುಂಚನಗಿರಿ ಶ್ರೀ; ರೈತ ಪರ ನಿರ್ಧಾರ ತೆಗೆದುಕೊಳ್ಳಲು ಹಕ್ಕೊತ್ತಾಯ
ಪ್ರಧಾನ ಮಂತ್ರಿಗಳು ಏನು ಮಾಡಬಹುದು?
ʻʻಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಲು ಅವಕಾಶ ಇದೆ. ಇಬ್ಬರು ಮುಖ್ಯಮಂತ್ರಿಗಳನ್ನು ಕೂರಿಸಿ ಪಿಎಂ ಸಮಸ್ಯೆ ಬಗೆಹರಿಸಬಹುದು. ರಾಜಿಯಿಂದ ಮಾತ್ರ ಇದು ಸಾಧ್ಯ. ನರಸಿಂಹ ರಾವ್ ಅವರು ಮಧ್ಯಪ್ರವೇಶ ಮಾಡಿದ ಪ್ರಕರಣಕ್ಕೆ ನಾನು ಸಾಕ್ಷಿಯಾಗಿದ್ದೆʼʼ ಎಂದು ಹೇಳಿದರು.
ʻʻಕಾವೇರಿ ವಿವಾದವನ್ನು ರಾಜಕೀಯವಾಗಿ ನೋಡಬೇಡಿ. ರಾಜಕೀಯ ತರುವುದು ತಪ್ಪು. ಬಿಜೆಪಿ ನಾಯಕರು ಸಹ ಪ್ರಧಾನಿ ಮೇಲೆ ಒತ್ತಡ ಹಾಕಲಿ. ಕಾಂಗ್ರೆಸ್‌ನವರೂ ಅವರು ಒತ್ತಾಯ ಮಾಡಬೇಕು. ಮೂರು ಪಕ್ಷಗಳು ರಾಜಕೀಯ ಬಿಟ್ಟು ಕಾವೇರಿಗಾಗಿ ಒಂದಾಗಿ ಕೆಲಸ ಮಾಡಿʼʼ ಎಂದು ಹೇಳಿದರು ಬಿ.ವಿ. ಆಚಾರ್ಯ.
ಸುಪ್ರೀಂಕೋರ್ಟ್ ಹೇಳಿದ್ಮೇಲೆ ನೀರು ಬಿಡಲೇಬೇಕು
ಸುಪ್ರೀಂಕೋರ್ಟ್ ಒಮ್ಮೆ ಆದೇಶ ಕೊಟ್ಟ ಮೇಲೆ ಅದನ್ನು ಪಾಲನೆ ಮಾಡಲೇಬೇಕು. ನೀರು ಬಿಡದಿದ್ರೆ ನ್ಯಾಯಾಂಗ ನಿಂಧನೆ ಆಗುತ್ತದೆ. ನಮ್ಮಲ್ಲಿ ನೀರೇ ಇಲ್ಲ ಅಂದರೆ ಬಿಡದೇ ಇರಬಹುದು. ಆದರೆ, ಇರುವಾಗ ಬಿಡದೆ ಇರುವಂತಿಲ್ಲ. ಆದರೆ, ನೀರು ಬಿಟ್ಟರೆ ಕುಡಿಯುವ ನೀರಿಗೂ ಸಮಸ್ಯೆ ಆಗುತ್ತದೆ. ರಾಜ್ಯದ ಕುಡಿಯುವ ನೀರಿನ ಹಿತದೃಷ್ಟಿಯಿಂದ ತಡೆಯಬಹುದು. ನಮ್ಮ ಜೀವ ರಕ್ಷಣೆಗೆ ನೀರು ಬೇಕು, ಅವರಿಗೆ ಬೆಳೆಗಳಿಗೆ ಕುಡಿಯುವ ನೀರು ಕೇಳ್ತಿದ್ದಾರೆ ಎಂದು ನಾವು ವಾದ ಮಾಡಬಹುದು. ನಮ್ಮ ಮೇಲೆ ನ್ಯಾಯಾಂಗ ನಿಂದನೆ ಕೇಸ್ ಹಾಕಿದರೆ ಆ ಸಮಯದಲ್ಲಿ ಈ ದಾಖಲೆ ಒದಗಿಸಬೇಕು. ಆಗ ಆಗ ನ್ಯಾಯಾಂಗ ನಿಂದನೆ ಆಗುವುದಿಲ್ಲʼʼ ಎಂದು ಆಚಾರ್ಯ ವಿವರಿಸಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದು ತಪ್ಪಲ್ಲ
ʻʻಅಧಿಕಾರಿಗಳು ಕಾವೇರಿ ಸಂಬಂಧಿತ ಸಭೆಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದು ತಪ್ಪು ಎಂದು ಹೇಳಲಾಗದು. ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರಿಂದಲೇ ನಮಗೆ ಹಿನ್ನಡೆ ಆಯಿತು ಅನ್ನೋದನ್ನು ನಾನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಾದ ನಡೆಯುತ್ತದೆ, ತೀರ್ಪು ಬರುತ್ತದೆ. ಕೆಲವು ಸಂಧಾನದ ಕೇಸ್‌ಗಳು ಒಬ್ಬೊಬ್ಬರು ಒಂದೊಂದು ದೇಶದಲ್ಲಿ ಇದ್ದೂ ತೀರ್ಪುಗಳಾಗುತ್ತವೆ. ನಾವು ಏನು ಹೇಳುತ್ತೇವೆ ಎನ್ನುವುದು ಮುಖ್ಯ, ಎಲ್ಲಿಂದ ಹೇಳುತ್ತೇವೆ ಎನ್ನುವುದು ಈಗ ಮುಖ್ಯವಾಗಿ ಉಳಿದಿಲ್ಲʼʼ ಎಂದು ಬಿ.ವಿ ಆಚಾರ್ಯ ವಿವರಿಸಿದರು.