Site icon Vistara News

Cauvery Dispute : ಕರ್ನಾಟಕ ಬಂದ್‌ ದಿನವೇ ಪ್ರಾಧಿಕಾರ ಸಭೆ; ಕಾವೇರಿ ಕಣಕ್ಕೆ ಸುತ್ತೂರು, ನಂಜಾವಧೂತ ಶ್ರೀ ಎಂಟ್ರಿ

Cauvery authority meeting on sep 29

ನವದೆಹಲಿ/ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery water Management Authority-CWMA) ಅತ್ಯಂತ ಮಹತ್ವದ ಸಭೆ ಸೆಪ್ಟೆಂಬರ್‌ 29ರಂದು ದಿಲ್ಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯವು ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation committe- CWRC) ನೀಡಿರುವ ನೀರು ಬಿಡುಗಡೆ ಆದೇಶವನ್ನು ಪ್ರಶ್ನಿಸಬಹುದಾಗಿದೆ. ಅಂದರೆ ರಾಜ್ಯದಲ್ಲಿ ಕಾವೇರಿ ನೀರು ಬಿಡುಗಡೆ ವಿರುದ್ಧ (Cauvery Dispute) ನಡೆಯಲಿರುವ ಕರ್ನಾಟಕ ಬಂದ್‌ನ (Karnataka Bandh)C ದಿನವೇ ಪ್ರಾಧಿಕಾರದ ಸಭೆಯೂ ನಡೆಯಲಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ಸೆಪ್ಟೆಂಬರ್‌ 26ರಂದು ನಡೆದು ಕರ್ನಾಟಕವು ಸೆಪ್ಟೆಂಬರ್‌ 28ರಿಂದ ಅಕ್ಟೋಬರ್‌ 15ರವರೆಗೆ 15 ದಿನಗಳ ಕಾಲ ಪ್ರತಿದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಕಂಡುಬಂದಿತ್ತು. ರಾಜ್ಯ ಸರ್ಕಾರ ಇದನ್ನು ಪ್ರಶ್ನೆ ಮಾಡುವುದಾಗಿ ಹೇಳಿದೆ.

ಇದೀಗ ಸೆ. 29ರಂದು ಪ್ರಾಧಿಕಾರದ ಸಭೆ ನಡೆಯಲಿರುವುದರಿಂದ ಅದರಲ್ಲಿ ಸರ್ಕಾರವು ಕಾವೇರಿ ಸಮಿತಿಯ ನಿರ್ಣಯವನ್ನು ಪ್ರಶ್ನೆ ಮಾಡಬಹುದಾಗಿದೆ. ಆದರೆ, ಪ್ರಾಧಿಕಾರವು ರಾಜ್ಯ ಸರ್ಕಾರದ ವಾದವನ್ನು ಒಪ್ಪುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಯಾಕೆಂದರೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವು ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡುತ್ತಿರುವುದು ಇದು ಮೂರನೇ ಬಾರಿ. ಮೊದಲು ಆಗಸ್ಟ್‌ 26ರಂದು 5000 ಕ್ಯೂಸೆಕ್‌, ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ಮಾಡಿದ್ದ ಸಮಿತಿ ಇದೀಗ ಮೂರನೇ ಸಲ ಆದೇಶ ನೀಡಿದೆ. ಹಿಂದಿನ ಎರಡೂ ಸಂದರ್ಭದಲ್ಲೂ ಅದು ಕರ್ನಾಟಕದ ವಾದಗಳಿಗೆ ಮನ್ನಣೆ ನೀಡಿಲ್ಲ. ಬದಲಾಗಿ CWRC ಹೇಳಿದ್ದೇ ಸರಿ ಎಂದಿತ್ತು. ಸುಪ್ರೀಂಕೋರ್ಟ್‌ ಪ್ರಾಧಿಕಾರ ಹೇಳಿದ್ದು ಸರಿ ಇರುತ್ತದೆ ಎಂದಿತ್ತು.

ಹೀಗಾಗಿ ಈ ಬಾರಿ ಏನಾಗುತ್ತದೆ ಎಂಬ ಕುತೂಹಲವಿದೆ. ರಾಜ್ಯದಲ್ಲಿ ಎರಡೆರಡು ಬಂದ್‌ಗಳು ನಡೆದಿರುವುದು, ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶಕ್ಕೆ ಒತ್ತಡ ಹೆಚ್ಚಿರುವುದು, ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರಿದಿರುವುದು ಮೊದಲಾದ ಅಂಶಗಳನ್ನು ಪ್ರಾಧಿಕಾರ ಹೇಗೆ ಪರಿಗಣಿಸುತ್ತದೆ ಎಂಬುದರ ಆಧಾರದಲ್ಲಿ ಅದರ ನಿರ್ಣಯ ಹೊರಬೀಳಿದೆ.

ಒಂದೊಮ್ಮೆ ಅಂದೂ ಪ್ರಾಧಿಕಾರ CWRC ಆದೇಶವನ್ನೇ ಎತ್ತಿಹಿಡಿದರೆ ಕರ್ನಾಟಕ ಬಂದ್‌ ನಡುವೆ ಆಕ್ರೋಶ ಭುಗಿಲೇಳುವ ಸಾಧ್ಯತೆಯೂ ಕಂಡುಬಂದಿದೆ.

ಕಾವೇರಿ ಕಣಕ್ಕೆ ಸುತ್ತೂರು, ನಂಜಾವಧೂತ ಶ್ರೀಗಳ ಎಂಟ್ರಿ

ಈ ನಡುವೆ ಮೊನ್ನೆಯಷ್ಟೇ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಕಾವೇರಿ ನೀರು ಬಿಡುಗಡೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ ಬೆನ್ನಿಗೇ ಈಗ ಇನ್ನಿಬ್ಬರು ಶ್ರೀಗಳು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ (Nanjavadutha swamiji) ಅವರು ಬುಧವಾರ ಮಂಡ್ಯದಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗಿಯಾದರು. ಮಂಡ್ಯದ ಸಂಜಯ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಪ್ರತಿಭಟನೆ ರ‍್ಯಾಲಿ ನಡೆದಿದ್ದು, ಅದರಲ್ಲಿ ಶ್ರೀಗಳು ಭಾಗವಹಿಸಿದ್ದರು. ಜತೆಗೆ ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.

ʻʻಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿ. ಸರ್ಕಾರದ ಜೊತೆಗೆ ನಾವಿದ್ದೀವಿ. ಸರಿಯಾದ ಅಂಕಿ ಅಂಶ ನೀಡಿ ನ್ಯಾಯಯುತವಾಗಿ ಹೋರಾಡಲಿʼʼ ಎಂದು ಸರ್ಕಾರಕ್ಕೆ ಹೇಳಿದ ಸ್ವಾಮೀಜಿ ರೈತರು ಎಂಥಹುದೇ ಸಂದರ್ಭದಲ್ಲೂ ಎದೆಗುಂದೋದು ಬೇಡ ಧೈರ್ಯವಾಗಿರಿ ಎಂದರು.

ಇದನ್ನೂ ಓದಿ: Cauvery water dispute : ಕರ್ನಾಟಕ ಬಂದ್‌ಗೆ ಬಿಜೆಪಿ-ಜೆಡಿಎಸ್‌ ಜಂಟಿ ಬೆಂಬಲ; ಕಾವೇರಲಿದೆಯೇ ಹೋರಾಟ?

ತಜ್ಞರ ತಂಡ ಕಳುಹಿಸಿ ಅಧ್ಯಯನಕ್ಕೆ ಸುತ್ತೂರು ಶ್ರೀ ಸಲಹೆ

ಕಾವೇರಿ ವಿಚಾರವಾಗಿ ಮೌನ ಮುರಿದ ಸುತ್ತೂರು ವೀರಸಿಂಹಾಸನ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯಗಳು ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಎರಡೂ ಪ್ರಾಂತಗಳ ಹೊರಗಿನ ತಜ್ಞರ ಮೂಲಕ ಅಧ್ಯಯನ ನಡೆಸಬೇಕು ಮತ್ತು ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ಜನರ ಬದುಕಿಗೆ ರಕ್ಷಣೆ ಕೊಡಬೇಕು. ತನ್ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಉಳಿಯುವಂತೆ ಮಾಡಬೇಕು. ಕಾಯಂ ಸಂಕಷ್ಟ ಸೂತ್ರ ರೂಪಿಸಬೇಕು ಎಂದು ಪತ್ರದ ಮೂಲಕ ವಿನಂತಿಸಿದ್ದಾರೆ.

Exit mobile version