ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee) ಮಂಗಳವಾರ ನಡೆಸಿದ ಮಹತ್ವದ ಸಭೆಯಲ್ಲಿ ಕರ್ನಾಟಕಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.ಈವರೆಗೆ ಪ್ರತಿದಿನವೂ ಐದು ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದ ಸಮಿತಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಬಿಡುವಂತೆ ಆದೇಶ ನೀಡಿದೆ.
ಕಳೆದ ಸೆಪ್ಟೆಂಬರ್ 13ರಂದು ಕಾವೇರಿ ನೀರು ನಿಯಂತ್ರಣ ಸಮಿತಿ 15 ದಿನಗಳವರೆಗೆ ಪ್ರತಿದಿನ 5000 ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತ್ತು. ಸೆ. 18ರಂದು ನಡೆದ ಪ್ರಾಧಿಕಾರದ ಸಭೆ ಅದನ್ನು ಅನುಮೋದಿಸಿತ್ತು. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ಈ ಆದೇಶವನ್ನು ಎತ್ತಿಹಿಡಿಯಲಾಗಿತ್ತು.
ಇದೀಗ ಮಂಗಳವಾರ (ಸೆ. 26) ನಡೆದ ಸಭೆಯಲ್ಲಿ ಕರ್ನಾಟಕದ ಮಂಡಿಸಿದ ವಾದವನ್ನು ಪರಿಗಣಿಸಿದ ಸಮಿತಿ ನೀರೇ ಬಿಡುವುದಿಲ್ಲ ಎಂಬ ಮನವಿಯನ್ನು ಒಪ್ಪಲಿಲ್ಲ. ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್‌ಗೆ ಇಳಿಸಿ ಎಂದು ಸೂಚನೆ ನೀಡಿದೆ.
ಸೆ. 13ರಂದು ಹದಿನೈದು ದಿನಗಳವರೆಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ನೀಡಿದ ಆದೇಶ ಊರ್ಜಿತದಲ್ಲಿರುವುದರಿಂದ ಸೆ. 28ರಿಂದ ಹೊಸ ಆದೇಶ ಜಾರಿಗೆ ಬರಲಿದೆ. ಆಗ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಈ ಆದೇಶವು ಅಕ್ಟೋಬರ್ 15ರವರೆಗೆ ಜಾರಿಯಲ್ಲಿ ಇರಲಿದ್ದು, ಅಲ್ಲಿವರೆಗೆ ಪ್ರತಿ ದಿನವೂ 3000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕಾಗುತ್ತದೆ.
CWRC ಯ ಮುಂದೆ ವಾಸ್ತವ ಸ್ಥಿತಿ ಸಲ್ಲಿಕೆ ಮಾಡಿದ ಕರ್ನಾಟಕ
ಇದಕ್ಕಿಂತ ಮೊದಲು ಕರ್ನಾಟಕವು ತನ್ನ ನೀರಿನ ಪರಿಸ್ಥಿತಿಯ ವಿವರಣೆಯನ್ನು ನೀಡಿತು.
25.09.2023 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಟ್ಟೂ ಒಳಹರಿವಿನ ಕೊರತೆ 53.04% ಆಗಿದೆ. ಕರ್ನಾಟಕ ಸರ್ಕಾರವು ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಈ ಅಂಶವು ಸಮಿತಿ ಗಂಭೀರವಾಗಿ ಪರಿಗಣಿಸಬೇಕೆಂದು ಕರ್ನಾಟಕ ಮನವಿ ಮಾಡಿತು.
ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಇದಕ್ಕೆ ಪ್ರತಿಯಾಗಿ ತಮಿಳುನಾಡು ನಿಯಮ ಪ್ರಕಾರ 12500 ಕ್ಯೂಸೆಕ್ ನೀರು ಪ್ರತಿದಿನವೂ ಬಿಡುಗಡೆ ಮಾಡಬೇಕು ಎಂಬ ವಾದವನ್ನೇ ಮುಂದೆ ಮಾಡಿತು.
ಅಂತಿಮವಾಗಿ ನಿಯಂತ್ರಣ ಸಮಿತಿಯು ನೀರಿನ ಪ್ರಮಾಣವನ್ನು ಇಳಿಸಿ ಆದೇಶ ಹೊರಡಿಸಿತು.
ಇದೀಗ ಕರ್ನಾಟಕವು ಈ ಅದೇಶವನ್ನು ಮತ್ತೆ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಅವಕಾಶವಿದೆ.