ನವದೆಹಲಿ: ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ (CWRC directs release of 5000 cusec water daily for 15 days) ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶವಾಗಿದೆ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ(Cauvery Water Regulation Committee-CWRC) ಸೋಮವಾರ ಈ ಸೂಚನೆಯನ್ನು ನೀಡಿದೆ. ಆದರೆ, ಇದೊಂದು ಮಧ್ಯಂತರ ಆದೇಶವಾಗಿದ್ದು, ಆಗಸ್ಟ್ 29ರಂದು (ಮಂಗಳವಾರ) ದಿಲ್ಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority-CWMA) ನಡೆಯಲಿದ್ದು, ಅದರಲ್ಲಿ ನೀರು ಬಿಡುಗಡೆ ವಿಚಾರದ (Cauvery dispute) ಅಂತಿಮ ತೀರ್ಮಾನವಾಗಲಿದೆ.
ರಾಜ್ಯ ಸರ್ಕಾರ ಈಗಾಗಲೇ ಪ್ರತಿನಿತ್ಯ 1900 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿದೆ. ಆದರೆ, ಈಗ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯು ಹೆಚ್ಚುವರಿಯಾಗಿ 3100 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ. ಕಾವೇರಿ ನಿರ್ವಹಣಾ ಸಮಿತಿಯ ಆದೇಶದ ಪ್ರಕಾರ ಇಲ್ಲಿಂದ ನೀರು ಬಿಡುಗಡೆ ಮಾಡುವುದು ಮುಖ್ಯವಲ್ಲ. ಬಿಳಿಗುಂಡ್ಳು ಮಾಪನ ಕೇಂದ್ರದಲ್ಲಿ 5000 ಕ್ಯೂಸೆಕ್ ದಾಖಲಾಗಬೇಕು.
ಹಾಗಿದ್ದರೆ ನೀರು ಬಿಡಲೇಬೇಕಾ? ಇದು ಹಿನ್ನಡೆಯಾ ಮುನ್ನಡೆಯಾ?
ನಿಜವೆಂದರೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಈ ಮೊದಲು ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಕರ್ನಾಟಕ ಸರ್ಕಾರ ಅದನ್ನು ಒಪ್ಪಿರಲಿಲ್ಲ. ಆಗ ತಮಿಳುನಾಡು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಕಳೆದ ಆಗಸ್ಟ್ 25ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ನೀರು ಬಿಡಲು ಅಸಾಧ್ಯ ಎಂದು ಹೇಳಿತ್ತು. ಎರಡೂ ಸರ್ಕಾರಗಳ ಪರ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್‌ನ ವಿಶೇಷ ಕಾವೇರಿ ಪೀಠ ಯಾವುದೇ ಆದೇಶವನ್ನು ಹೊರಡಿಸಿರಲಿಲ್ಲ. ಬದಲಾಗಿ ತಕ್ಷಣವೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸುವಂತೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಿತ್ತು.
ಈ ನಡುವೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery water Management Authority- CWMA) ಸಭೆಯನ್ನು ಆಗಸ್ಟ್ 29 (ಮಂಗಳವಾರ)ಕ್ಕೆ ನಿಗದಿ ಮಾಡಲಾಗಿದೆ. ಇಷ್ಟೆಲ್ಲದರ ನಡುವೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ(Cauvery Water Regulation Committee-CWRC) ತನ್ನ ಹಿಂದಿನ ಆದೇಶವನ್ನು ಪರಿಷ್ಕರಿಸಿದೆ. ಈ ಹಿಂದೆ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸೂಚಿಸಿದ್ದ ಸಮಿತಿ ಈಗ ಅದನ್ನು 5000 ಕ್ಯೂಸೆಕ್‌ಗೆ ಇಳಿಸಿದೆ.
ಹಾಗಿದ್ದರೆ ಮುಂದೇನು?
ರಾಜ್ಯ ಸರ್ಕಾರ ಹಿಂದಿನ ಆದೇಶವನ್ನು ಉಲ್ಲಂಘಿಸಿದ ಕುರಿತದ ದಾವೆಯೇ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಹೀಗಾಗಿ ಸಮಿತಿ ನೀಡಿರುವ ಪರಿಷ್ಕೃತ ಆದೇಶದಲ್ಲಿ ಹೆಚ್ಚಿನ ಬಲ ಇಲ್ಲ. ಅದನ್ನು ತಕ್ಷಣಕ್ಕೆ ಪಾಲಿಸಬೇಕಾದ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವಿದೆ.
ಅದರ ಜತೆಗೆ ಆಗಸ್ಟ್ 29ರಂದು ನವದೆಹಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು ಅದರಲ್ಲಿ ನೀರು ಬಿಡುಗಡೆಯ ಸಾಧ್ಯತೆಯ ಬಗ್ಗೆ ಕರ್ನಾಟಕದ ವಿವರಣೆಯನ್ನು ನೀಡಲಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯ ಮುಖ್ಯಾಂಶಗಳೇನು?
ಆಗಸ್ಟ್ 28ರಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಸಂಕಷ್ಟ ಸೂತ್ರ ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಲು ಆಗ್ರಹಿಸಿತು. 22% ಕಡಿಮೆ ಮಳೆಯಾಗಿದೆ ಎಂಬ ಆಧಾರವನ್ನು ಇಟ್ಟುಕೊಂಡು ನೀರು ಹಂಚಿಕೆ ಮಾಡಬೇಕು ಎಂದು ಮನವಿ ಮಾಡಿತು. ಆದರೆ, ಕರ್ನಾಟಕ ಸರ್ಕಾರದ ಪ್ರತಿನಿಧಿ ಮಳೆ ಕೊರತೆಯನ್ನಲ್ಲ, ಒಳ ಹರಿವನ್ನು ಆಧರಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ವಾದಿಸಿದರು.
ಕರ್ನಾಟಕ ಸರ್ಕಾರ ನೀರಿನ ಅಭಾವ ಪರಿಸ್ಥಿತಿಯನ್ನು ಗಮನಿಸಿ ಕೃಷಿಗೆ ನೀರನ್ನು ಬಿಡುಗಡೆ ಮಾಡುತ್ತಿಲ್ಲ. ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಆದರೆ, ತಮಿಳುನಾಡು ಸರಕಾರ ನೀರಾವರಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿತು. ಅಂತಿಮವಾಗಿ ಸಮಿತಿಯು ಬಿಳಿಗೊಂಡ್ಲು ಜಲಾಶಯಕ್ಕೆ ಮುಂದಿನ 15 ದಿನ ಪ್ರತಿ ನಿತ್ಯ 5000ಕ್ಯೂಸೆಕ್ ನೀರು ಹರಿಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತು.