Site icon Vistara News

Cauvery Dispute : ರಾಜ್ಯಕ್ಕೆ ಮತ್ತೆ ಶಾಕ್‌, 15 ದಿನ 2600 ಕ್ಯೂಸೆಕ್‌ ನೀರು ಹರಿಸಲು CWRC ಶಿಫಾರಸು

Cauvery dispute water CWRC order

ನವದೆಹಲಿ: ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ನಡುವೆಯೇ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ 2600 ಕ್ಯೂಸೆಕ್ ನೀರು ಬಿಡಲು ಶಿಫಾರಸು ಮಾಡಿದೆ. ಸೋಮವಾರ ದಿಲ್ಲಿಯನ್ನು ಕೇಂದ್ರವಾಗಿಟ್ಟುಕೊಂಡು ನಡೆದ ವರ್ಚ್ಯುವಲ್‌ ಸಭೆಯಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ಈ ತೀರ್ಮಾನ ಪ್ರಕಟಿಸಲಾಗಿದೆ. ಪ್ರತಿ ಬಾರಿ ಸಿಡಬ್ಲ್ಯುಆರ್‌ಸಿ ಸಭೆ ನಡೆದಾಗಲೂ ನೀರು ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ಆದೇಶ ನೀಡುವುದು ಈಗ ಕಾಯಂ ಆಗಿದೆ. ಈ ಬಾರಿ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್‌ಗೆ ಇಳಿಸಿದೆ ಎನ್ನುವುದೇ ಹೊಸ ಸಂಗತಿ.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿ ಕಾವೇರಿ ನೀರು ನಿಯಂತ್ರಣ ಸಮಿತಿ ನಡೆಸಿದ 89ನೇ ಸಭೆ ಇದಾಗಿತ್ತು. ಕಳೆದ ಐದೂ ಸಭೆಗಳಲ್ಲಿ ಸಮಿತಿಯು ನಿರಂತರವಾಗಿ ಕರ್ನಾಟಕಕ್ಕೆ 15 ದಿನಗಳ ಕಾಲ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂದು ಸೂಚಿಸುತ್ತಲೇ ಬಂದಿದೆ. ತಮಿಳುನಾಡು ಪ್ರತಿ ಬಾರಿಯೂ ಪ್ರತಿದಿನ 12500 ಕ್ಯೂಸೆಕ್‌ ನೀರಿಗೆ ಬೇಡಿಕೆ ಇಡುವುದು, ಕರ್ನಾಟಕ ಸರ್ಕಾರ ಬರದ ಕಾರಣ ನೀಡಿ ನಿರಾಕರಿಸುವುದು, ಬಳಿಕ ಸಿಡಬ್ಲ್ಯೂಆರ್‌ಸಿ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಸೂಚಿಸುವುದು ಸಾಮಾನ್ಯ ಪ್ರಕ್ರಿಯೆ ಎಂಬಂತಾಗಿದೆ.

ಈ ಬಾರಿಯೂ ಅದೇ ರೀತಿಯ ವಾದ ವಿವಾದಗಳು ನಡೆದು ಅಂತಿಮವಾಗಿ ಸಮಿತಿಯು ಮುಂದಿನ 15 ದಿನಗಳ ಕಾಲ 2500 ಕ್ಯೂಸೆಕ್‌ ನೀರು ಬಿಡುಗಡೆಗೆ ಸೂಚನೆ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority – CWMA) ಸಭೆ ನಡೆಯಲಿದ್ದು, ಅದರಲ್ಲಿ ಈ ಶಿಫಾರಸಿಗೆ ಸಂಬಂಧಿಸಿ ಚರ್ಚೆ ನಡೆದು ಅಂತಿಮ ತೀರ್ಮಾನ ಹೊರಬೀಳಲಿದೆ. ಹಿಂದಿನ ಎಲ್ಲ ಸಭೆಗಳಲ್ಲೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ CWRC ತೀರ್ಮಾನವನ್ನು ಎತ್ತಿ ಹಿಡಿದಿದೆ.

ಸಿಡಬ್ಲ್ಯುಆರ್‌ಸಿ ಮುಂದೆ ತಮಿಳುನಾಡಿನ ವಾದ ಏನಿತ್ತು?

ಕಾವೇರಿ ನೀರು ನಿಯಂತ್ರಣ ಸಮಿತಿಯ ಮುಂದೆ ವಾದ ಮಂಡಿಸಿದ ತಮಿಳುನಾಡು ಮುಂದಿನ 15 ದಿನಗಳ ಕಾಲ ಪ್ರತಿದಿನ 13000 ಕ್ಯೂಸೆಕ್‌ ನೀರು ಬಿಡಲು ಆದೇಶ ನೀಡಬೇಕು ಎಂದು ಕೇಳಿಕೊಂಡಿತ್ತು. ಅಂದರೆ ಒಟ್ಟು ಪ್ರಮಾಣ 16.90 ಟಿಎಂಸಿ ಆಗುತ್ತದೆ.

ಕರ್ನಾಟಕ ಹೇಳಿದ್ದೇನು?

ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ಕರ್ನಾಟಕದ ಜಲಾಶಯಗಳಿಗೆ ನೀರಿನ ಒಳಹರಿವು ಶೂನ್ಯ ಮಟ್ಟಕ್ಕೆ ಇಳಿದಿದೆ. ಹೀಗಾಗಿ ನೀರು ಬಿಡುವುದು ಸಾಧ್ಯವೇ ಇಲ್ಲ ಎಂದು ಕರ್ನಾಟಕ ಹೇಳಿದೆ. ಆದರೆ ಸಮಿತಿ ಅಂತಿಮವಾಗಿ ನವೆಂಬರ್‌ 1ರಿಂದ ನವೆಂಬರ್‌ 15ರವರೆಗೆ ಪ್ರತಿ ದಿನವೂ 2600 ಕ್ಯೂಸೆಕ್‌ ನೀರು ಬಿಡುವಂತೆ ಸೂಚನೆ ನೀಡಿದೆ.

ಆಗಸ್ಟ್‌ 26ರಿಂದ ನಿರಂತರ ಆದೇಶ

ಕಾವೇರಿ ನೀರು ನಿಯಂತ್ರಣ ಸಮಿತಿಯು ಆಗಸ್ಟ್‌ 26ರಂದು ನೀಡಿದ ಅದೇಶದಲ್ಲಿ ಆಗಸ್ಟ್‌ 29ರಿಂದ 15 ದಿನಗಳ ಕಾಲ 5000 ಕ್ಯೂಸೆಕ್‌ ನೀರು ಬಿಡಲು ಸೂಚಿಸಿತ್ತು. ಬಳಿಕ ಸೆ. 12ರಂದು ಮತ್ತೆ ಐದು ಸಾವಿರ ಕ್ಯೂಸೆಕ್‌ ನೀರು ಬಿಡಲು ಸೂಚಿಸಿತ್ತು. ಸೆಪ್ಟೆಂಬರ್‌ 26ರಂದು ಇದೇ ಆದೇಶವನ್ನು ರಿಪೀಟ್‌ ಮಾಡಿತ್ತು. ಅಕ್ಟೋಬರ್‌ 12ರಂದು ನೀಡಿದ ಆದೇಶದಲ್ಲಿ ಈ ಪ್ರಮಾಣವನ್ನು 3000ಕ್ಕೆ ಇಳಿಸಿತ್ತು. ಐದನೇ ಮೀಟಿಂಗ್‌ನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು 2600 ಕ್ಯೂಸೆಕ್‌ಗೆ ಇಳಿಸಿದೆ.

Exit mobile version