Site icon Vistara News

Cauvery Dispute : CWRC ಹೊಸ ಆದೇಶ ರಾಜ್ಯಕ್ಕೆ ಮರಣ ಶಾಸನ, ಸರಕಾರದ ವೈಫಲ್ಯದ ಫಲ; ಎಚ್‌ಡಿಕೆ ವಾಗ್ದಾಳಿ

HD Kumaraswamy at KRS

ಬೆಂಗಳೂರು: ಸೆ. 28ರಿಂದ ಜಾರಿಗೆ ಬರುವಂತೆ ತಮಿಳುನಾಡಿಗೆ ಮತ್ತೆ 18 ದಿನಗಳ ಕಾಲ ದಿನವೂ 3000 ಕ್ಯೂಸೆಕ್‌ ನೀರು ಬಿಡಬೇಕು (3000 Cusec water) ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery water regulatory Committee) ಹೊಸ ಆದೇಶವು (Cauvery Dispute) ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ (Death bell for Karnataka) ಎಂದು ಮಾಜಿ ಮುಖ್ಯಮಂತ್ರಿ ಎಚ್.‌ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ನಡೆದ ಸಭೆಯಲ್ಲಿ ಬಿಡಬೇಕಾದ ನೀರಿನ ಪ್ರಮಾಣವನ್ನು CWRCಯು 5000 ಕ್ಯೂಸೆಕ್‌ನಿಂದ 3000 ಕ್ಯೂಸೆಕ್‌ಗೆ ಇಳಿಸಿದೆ. ಆದರೆ, ಇದು ಸರಿಯಲ್ಲ, ಕರ್ನಾಟಕ ನೀರು ಬಿಡುವ ಪ್ರಮೇಯವೇ ಇಲ್ಲ. ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ತನ್ನ ಪರಿಸ್ಥಿತಿಯನ್ನು ವಿವರಿಸಿಲ್ಲ. ಜಲ ಸಂಪನ್ಮೂಲ ಇಲಾಖೆ ಮತ್ತು ಸರ್ಕಾರದ ನಡುವೆ ತಾಳ ಮೇಳವಿಲ್ಲದ ಪರಿಸ್ಥಿತಿ ಇದೆ. ಇದರಿಂದಾಗಿ ರಾಜ್ಯಕ್ಕೆ ಹೊಡೆತ ಬಿದ್ದಿದೆ ಎಂದು ಮಾಜಿ ಸಿಎಂ ಎಚ್.‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ ಎಂದು ಅವರು ಹೇಳಿದ್ದಾರೆ.

ಪೆಟ್ಟಿನ ಮೇಲೆ ಪೆಟ್ಟು ತಿನ್ನುವ ರಾಜ್ಯದ ಕತ್ತು ಹಿಸುಕಲು ಬಂದ ಕಾಂಗ್ರೆಸ್‌

ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3,000 ಕ್ಯೂಸೆಕ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ, ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ. ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್‌ ಸರ್ಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ ಎಂದಿದ್ದಾರೆ ಕುಮಾರಸ್ವಾಮಿ.

ಜಲಸಂಪನ್ಮೂಲ ಸಚಿವರು-ಅಧಿಕಾರಿಗಳ ನಡುವೆ ಎತ್ತು ಏರಿಗೆ ಕೋಣ ನೀರಿಗೆ!

ಕೆಆರ್ ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು “ನಮ್ಮಲ್ಲಿ ನೀರೇ ಇಲ್ಲ” ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು “ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ” ಎನ್ನುತ್ತಾರೆ. ‘ಎತ್ತು ಏರಿಗೆ, ಕೋಣ ನೀರಿಗೆ’ ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎನ್ನುವುದು ಕುಮಾರಸ್ವಾಮಿ ಆರೋಪ.

ಡಿಎಂಕೆ ಯೋಗ ಕ್ಷೇಮ ನೋಡಲು ಹೋಗಿ ರಾಜ್ಯದ ಹಿತ ಬಲಿ ಕೊಟ್ಟ ಸರಕಾರ

ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ಕುರುವೈ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ, ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ ‘ಬಂಡೆ’ ಎಳೆದಿದೆ ಎಂದು ಕುಮಾರಸ್ವಾಮಿ ಆಪಾದಿಸಿದ್ದಾರೆ.

ಸಂಕಷ್ಟ ಸೂತ್ರ ರೂಪಿಸದೆ ನೀರು ಬಿಡಲಾಗದೆಂದು ವಾದಿಸಿ: ಎಚ್‌ಡಿಕೆ ಸಲಹೆ

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ ‘ಸಂಕಷ್ಟ ಹಂಚಿಕೆ ಸೂತ್ರ’ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

Exit mobile version