Site icon Vistara News

Cauvery Dispute: ಪ್ರಾಧಿಕಾರದ ಮುಂದೆ ಮರುಪರಿಶೀಲನೆ ಅರ್ಜಿ ಸಲ್ಲಿಕೆ, ತೀರ್ಪು ನೋಡಿಕೊಂಡು ಸುಪ್ರೀಂಗೆ

Cauvery water dispute KRS DAM

ಬೆಂಗಳೂರು/ನವದೆಹಲಿ: ಸೆ. 28ರಿಂದ ಅಕ್ಟೋಬರ್‌ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಹರಿಸಬೇಕು (Cauvery water Dispute) ಎಂಬ ಆದೇಶವನ್ನು ಮರುಪರಿಶೀಲಿಸಲು ಕೋರಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Authority-CWMA) ಮುಂದೆ ರಾಜ್ಯ ಸರ್ಕಾರ ಶನಿವಾರ ಮರುಪರಿಶೀಲನೆ ಅರ್ಜಿ (Review petition) ಸಲ್ಲಿಸಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee-CWRC)ಯು ಕಳೆದ ಸೆಪ್ಟೆಂಬರ್‌ 26ರಂದು ನಡೆದ ಸಭೆಯಲ್ಲಿ ಸೆ. 28ರಿಂದ ಅಕ್ಟೋಬರ್‌ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀಡು ಹರಿಸಬೇಕು ಎಂದು ಸೂಚಿಸಿತ್ತು. ಸೆ. 29ರಂದು ನಡೆದ ಪ್ರಾಧಿಕಾರ ಸಭೆಯಲ್ಲಿ ಪ್ರಾಧಿಕಾರ ಕೂಡಾ ಈ ಆದೇಶವನ್ನು ಎತ್ತಿಹಿಡಿದಿತ್ತು.

ರಾಜ್ಯವು ಅತ್ಯಂತ ತೀವ್ರವಾದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಜಲಾಶಯಗಳಲ್ಲಿ ನೀರಿಲ್ಲ. ಬೆಳೆಗೆ ಬಿಟ್ಟು ಕುಡಿಯುವ ನೀರಿನ ಸಂಕಷ್ಟ ಎದುರಾಗುವ ಸ್ಥಿತಿ ಇದೆ. ಹೀಗಿದ್ದರೂ ಮತ್ತೆ ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಸಮಿತಿ ಮತ್ತು ಪ್ರಾಧಿಕಾರಗಳು ಆದೇಶ ನೀಡುತ್ತಿವೆ. ಅದನ್ನು ಸುಪ್ರೀಂಕೋರ್ಟ್‌ ಕೂಡಾ ಎತ್ತಿ ಹಿಡಿಯುತ್ತಿದೆ. ರಾಜ್ಯದ ಯಾವ ವಾದವನ್ನೂ ಒಪ್ಪುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಂಕಷ್ಟದ ಪರಿಸ್ಥಿತಿಯಿಂದ ಪಾರಾಗುವುದು ಹೇಗೆ ಎಂಬ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ನಿವೃತ್ತ ನ್ಯಾಯಮೂರ್ತಿಗಳು, ಅಡ್ವೊಕೇಟ್‌ ಜನರಲ್‌ಗಳು, ನೀರಾವರಿ ತಜ್ಞರ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಕಾವೇರಿ ಪ್ರಾಧಿಕಾರದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸುವುದು, ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವುದು ಮತ್ತು ಮೇಕೆದಾಟು ಯೋಜನೆಗಾಗಿ ಒತ್ತಾಯಿಸುವುದು ಎಂಬ ಮೂರು ಆಯ್ಕೆಗಳನ್ನು ಮಾಡಿಕೊಳ್ಳಲಾಗಿತ್ತು.

ಇದೀಗ ಮೊದಲ ಹಂತವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿದೆ.

ಸೆ.29 ರ ಆದೇಶವನ್ನು ಮರುಪರಿಶೀಲನೆ ಮಾಡಬೇಕು. ಬರ ದಿನೇ ದಿನೇ ಹೆಚ್ಚುತ್ತಿದೆ, ನೀರಿನ ಕೊರತೆ ಹೆಚ್ಚಾಗಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕುಡಿಯುವ ನೀರಿಗೂ ಕೂಡ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ತಾವು ನೀಡಿದ್ದ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸಂಜೆ ಮರುಪರಿಶೀಲನಾ ಅರ್ಜಿ ದಾಖಲಾಗಿದೆ. ಇದರ ಜತೆಗೆ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂಬ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ : Cauvery water dispute : ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ

ಈ ನಡುವೆ, ಮರುಪರಿಶೀಲನೆ ಅರ್ಜಿಯ ಸಲ್ಲಿಕೆಯಾಗಿರುವುದನ್ನು ಸಿಎಂ ಸಿದ್ದರಾಮಯ್ಯ ದೃಢಪಡಿಸಿದ್ದಾರೆ. ಈಗ ಮೊದಲ ಹಂತದಲ್ಲಿ ಪ್ರಾಧಿಕಾರದಲ್ಲಿ ಮರುಪರಿಶೀಲನೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲಿ ಯಾವ ತೀರ್ಪು ಬರುತ್ತದೆ ಎನ್ನುವುದರ ಆಧಾರದ ಮೇಲೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಈ ಬಾರಿ ಮೇಕೆದಾಟು ಪ್ರಸ್ತಾಪ ಸಾಧ್ಯತೆ

ಮುಂದಿನ ಬಾರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಮೇಕೆದಾಟು ಅಣೆಕಟ್ಟು ನಿರ್ಮಾಣದ ವಿಚಾರವನ್ನು ರಾಜ್ಯ ಪ್ರಸ್ತಾಪಿಸಲಿದೆ. ಈ ಯೋಜನೆಯ ಚರ್ಚೆ ಬಂದಾಗಲೆಲ್ಲ ತಮಿಳುನಾಡು ವಿರೋಧಿಸುತ್ತಿದೆ. ಆದರೆ, ಈ ಬಾರಿ ಸುಪ್ರೀಂಕೋರ್ಟ್‌ ತಾನೇ ಮೇಕೆದಾಟು ಯೋಜನೆಯ ಪ್ರಸ್ತಾಪ ಮಾಡಿದ್ದರಿಂದ ರಾಜ್ಯಕ್ಕೆ ಅನುಕೂಲವಾಗಲಿದೆ.

Exit mobile version