ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲ ಬಿಕ್ಕಟ್ಟಿಗೆ (Cauvery Dispute) ಸಂಬಂಧಿಸಿ ಇಂದು ಸುಪ್ರೀಂಕೋರ್ಟ್‌ನಲ್ಲಿ (Supreme court) ಮಹತ್ವದ ವಿಚಾರಣೆ ನಡೆಯಲಿದೆ. ಅದಕ್ಕೆ ಮುನ್ನ ಕರ್ನಾಟಕದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದ ತಂಡವೊಂದು ಗುರುವಾರ ಬೆಳಗ್ಗೆ ಕೇಂದ್ರ ಜಲ ಶಕ್ತಿ ಸಚಿವ (Central Water resource Minister) ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಹಾಗೂ ಸಂಸದರೊಂದಿಗೆ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮಾತುಕತೆ ನಡೆಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬುಧವಾರ ದಿಲ್ಲಿಯಲ್ಲಿ ರಾಜ್ಯ ಸಂಸದರ ಜತೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಇದರಲ್ಲಿ ಎಲ್ಲ ಸಂಸದರು ಮತ್ತು ಮಂತ್ರಿಗಳು ರಾಜ್ಯದ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಲಾಗಿತ್ತು. ನೆಲ ಜಲದ ವಿಷಯದಲ್ಲಿ ಎಲ್ಲರೂ ಜತೆಗಿದ್ದೇವೆ ಎಂಬ ಸಂದೇಶವನ್ನು ರವಾನಿಸಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಶೇಖಾವತ್ ಭೇಟಿಗೆ ಸಮಯದ ವ್ಯವಸ್ಥೆ ಮಾಡಿದ್ದರು.
ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ
ತಮಿಳುನಾಡಿಗೆ ಪ್ರತಿ ನಿತ್ಯವೂ ಐದು ಟಿಎಂಸಿ ನೀರು ಬಿಡಲೇಬೇಕು ಎಂದು ತಾಕೀತು ಮಾಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿ- CWRC ಮತ್ತು ಅದನ್ನು ಪದೇಪದೆ ಎತ್ತಿ ಹಿಡಿದು ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ -CWMA ಆದೇಶಗಳನ್ನು ಪ್ರಶ್ನೆ ಮಾಡಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿಯನ್ನು ಸಲ್ಲಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ 21 ದಿನಗಳ ಹಿಂದೆಯೇ ನಡೆಯಬೇಕಾಗಿತ್ತು. ಆದರೆ, ನಾನಾ ಕಾರಣಗಳಿಗಾಗಿ ಮುಂದಕ್ಕೆ ಹಾಕಲ್ಪಡುತ್ತಾ ಹೋಗಿದ್ದು ಸೆಪ್ಟೆಂಬರ್ 21ಕ್ಕೆ ಈಗ ದಿನ ನಿಗದಿಯಾಗಿದೆ. ಇಂದು ಬರುವ ತೀರ್ಮಾನ ರಾಜ್ಯದ ಪಾಲಿಗೆ ಮಹತ್ವದ್ದಾಗಿದೆ.