Site icon Vistara News

Cauvery Protest : ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ

BJP Cauvery protest at Bangalore

ಬೆಂಗಳೂರು: ಕಾವೇರಿ ನೀರಿನ ವಿಚಾರದಲ್ಲಿ (Cauvery protest) ರಾಜ್ಯದ ಹಿತಾಸಕ್ತಿ ಕಾಪಾಡಬೇಕಿದ್ದ ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ (Congress acting like Tamilnadu Agent) ರೀತಿಯಲ್ಲಿ ವರ್ತಿಸುತ್ತಿದೆ. ಸಚಿವರು ಕೂಡಾ ತಮಿಳುನಾಡಿನ ಪರ ದಲ್ಲಾಳಿಗಳಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ನಿಲ್ಲಿಸಲು ಮತ್ತು ರಾಜ್ಯಕ್ಕೆ ನ್ಯಾಯ ಸಿಗುವಂತೆ ಕಾನೂನಾತ್ಮಕ ಹೋರಾಟ ಸಂಘಟಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಕ್ಕಾಗಿ ಬಿಜೆಪಿ ವತಿಯಿಂದ ಬೆಂಗಳೂರಿನ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನೆಯಲ್ಲಿ (BJP Protest At Bangalore) ಅವರು ಮಾತನಾಡಿದರು.

BJP protest at Bangalore on cauvery

ʻʻರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಹೇಳುವ ಮೊದಲೇ ನೀರು ಬಿಟ್ಟಿದೆ. ನಮ್ಮ‌ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆʼʼ ಎಂದು ಆಕ್ಷೇಪಿಸಿರುವ ಬಿ.ಎಸ್‌ ಯಡಿಯೂರಪ್ಪ ಅವರು, ʻʻತಮಿಳುನಾಡಿನಿಂದ ತಜ್ಞರ ತಂಡ ಕಳಿಸಿ ಕಾವೇರಿಯಲ್ಲಿ ಎಷ್ಟು ನೀರಿದೆ ನೋಡಲಿ. ನಾವು ಸಂಕಷ್ಟದಲ್ಲಿದ್ದೇವೆ ಅಂತ ಗೊತ್ತಾಗಲಿʼʼ ಎಂದು ಹೇಳಿದರು.

ಕಾವೇರಿಯಲ್ಲಿ ನೀರಿಲ್ಲ ಅಂತ ಗೊತ್ತಿದ್ದರೂ ಹಗಲು ರಾತ್ರಿ ನೀರು ಬಿಟ್ಟು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲʼʼ ಎಂದು ಹೇಳಿದ ಯಡಿಯೂರಪ್ಪ, ಇದು ಬಿಜೆಪಿ ಬಿಜೆಪಿಯ ಸಾಂಕೇತಿಕ ಹೋರಾಟ. ಮುಂದೆ ಹಗಲು, ರಾತ್ರಿ ಹೋರಾಟ ಮುಂದುವರೆಸುತ್ತೇವೆ. ಎಲ್ಲಾ ಶಾಸಕ, ಸಂಸದರು ಸೇರಿ ಹೋರಾಟ ಮಾಡುತ್ತೇವೆ. ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ಅವರೂ ಇನ್ನು ಮುಂದೆ ಒಂದು ಹನಿ ನೀರು ಬಿಡೋದಕ್ಕೆ ಆಗಲ್ಲ, ಬಿಡುವುದು ಸರಿಯಲ್ಲ ಎಂದಿದ್ದಾರೆʼʼ ಎಂದರು.

ಕಾಂಗ್ರೆಸ್‌ ಸರ್ಕಾರ ತಮಿಳುನಾಡಿನ ಏಜಂಟರಂತೆ ವರ್ತಿಸುವುದನ್ನು ಬಿಟ್ಟು ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಬೇಕು, ಸರಿಯಾಗಿ ವಾಸ್ತವಿಕ ಸ್ಥಿತಿಯನ್ನು ತಿಳಿಸಬೇಕು ಎಂದರು.

BJP protest at Bangalore on cauvery

ಬಿಜೆಪಿ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿ

ಬೆಂಗಳೂರು ನಗರ ಬಿಜೆಪಿ ಘಟಕ ಆಯೋಜಿಸಿದ ಈ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಸಂಸದರಾದ ಪಿ.ಸಿ. ಮೋಹನ್‌, ಶಾಸಕರಾದ ಗೋಪಾಲಯ್ಯ. ಶಾಸಕ ರವಿ ಸುಬ್ರಹ್ಮಣ್ಯ, ಸಿ.ಕೆ ರಾಮಮೂರ್ತಿ, ಉದಯ್ ಗರುಡಾಚಾರ್ ಭಾಗಿಯಾಗಿದ್ದಾರೆ.

ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಪ್ರತಾಪಸಿಂಹ ನಾಯಕ್, ಬಿಜೆಪಿ ಪ್ರಧಾನಕಾರ್ಯದರ್ಶಿಗಳಾದ ಅಶ್ವಥ್ ನಾರಾಯಣ್, ಸಿದ್ದರಾಜು ಸೇರಿದಂತೆ ಹಲವು ಭಾಗಿಯಾಗಿದ್ದಾರೆ. ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಪರಾಜಿತ ಅಭ್ಯರ್ಥಿಗಳು, ಮಾಜಿ ಕಾರ್ಪೊರೇಟರ್ಸ್, ಕಾರ್ಯಕರ್ತರು ಭಾಗಿಯಾಗಿದ್ದಾರೆ.

ತಮಿಳುನಾಡಿನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಡಿಸಿಎಂ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ನಾಯಕರು ಕಾವೇರಿ ನಮ್ಮದು, ತೊಲಗಲಿ, ತೊಲಗಲಿ ಕಾಂಗ್ರೆಸ್ ತೊಲಗಲಿ ಎಂದು ಘೋಷಣೆ ಕೂಗಿದರು. ಬಳಿಕ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

BJP protest at Bangalore on cauvery

ಪಾರ್ಟನರ್‌ ಕಾಪಾಡಲು ಮುಂದಾದ ಡಿ.ಕೆ. ಶಿವಕುಮಾರ್‌

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯ ಅಧಃಪತನವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಪಕ್ಷದ ಪಾರ್ಟ್‌ನರ್ ಡಿಎಂಕೆಯನ್ನು ಕಾಪಾಡಲು ಮುಂದಾಗಿದ್ದಾರೆ. ಇದೇ ಡಿಕೆ ಶಿವಕುಮಾರ್ ಕಾವೇರಿ ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದರು. ಈಗ ಅದನ್ನು ಮರೆತಿದ್ದಾರೆ ಎಂದರು.

ಸೋನಿಯಾ ಗಾಂಧಿ ಮಧ್ಯಪ್ರವೇಶಿಸಲಿ ಎಂದ ಬೊಮ್ಮಾಯಿ

ಕಾವೇರಿ ವಿವಾದಕ್ಕೆ ಸಂಬಂಧಿಸಿ ಸುಲಭದ ದಾರಿ ಇದೆ. ನಿಮ್ಮ ಸ್ನೇಹಿತ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರಬರೆಯಿರಿ. ನಮ್ಮ ಬಳಿ ಕುಡಿಯುವ ನೀರಿಲ್ಲ ಅಂತ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ʻʻಕಾನೂನಿನ ಒಳಗೆ ರಾಜಕೀಯವಾಗಿ ನಿಲ್ಲಬೇಕಾದರೆ ಈ ವಿಷಯದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮಧ್ಯಪ್ರವೇಶ ಮಾಡಬೇಕು. ನೀರು ಕೇಳಬೇಡಿ, ಕರ್ನಾಟಕದಲ್ಲಿ ಸಂಕಷ್ಟ ಇದೆ ಅಂತ ಸ್ಟಾಲಿನ್‌ಗೆ ಹೇಳಬೇಕು. ಇದನ್ನು ಹೇಳಿದ್ರೆ ಸೋನಿಯಾ ಗಾಂಧಿ ಅವರಿಗೆ ಏನು ಅಧಿಕಾರ ಇದೆ ಅಂತಾರೆ. ಸಿದ್ದರಾಮಯ್ಯ ಅವರೇ, ಸೋನಿಯಾ ಗಾಂಧಿ ಅವರು ಇಬ್ಬರೂ ಸಿಎಂಗಳನ್ನು ಕೂರಿಸಿಕೊಂಡು ಮಾತನಾಡಿದರೆ ಆಗುತ್ತದೆ ಎಂದು ಸಲಹೆ ನೀಡಿದರು.

Exit mobile version