Site icon Vistara News

Cauvery Protest : ಸೆ. 26ರಂದು ಬೆಂಗಳೂರು ಬಂದ್‌; 150ಕ್ಕೂ ಅಧಿಕ ಸಂಘಟನೆಗಳ ಜಂಟಿ ಕರೆ, ಸ್ತಬ್ಧವಾಗಲಿದೆ ರಾಜಧಾನಿ

September 26 Bangalore bandh

ಬೆಂಗಳೂರು: ಕಾವೇರಿ ನೀರಿನ ಉಳಿವಿಗಾಗಿ ಸೆಪ್ಟೆಂಬರ್‌ 26ರಂದು (ಮಂಗಳವಾರ) ಬೆಂಗಳೂರು ಬಂದ್‌ಗೆ (Bangalore bandh on September 26) ಕರೆ ನೀಡಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park Bangalore) ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala Samrakshana Samiti) ನೇತೃತ್ವದಲ್ಲಿ ಶನಿವಾರ ನಡೆದ ಬೃಹತ್‌ ಪ್ರತಿಭಟನಾ ಮತ್ತು ಸಮಾಲೋಚನಾ ಸಭೆಯಲ್ಲಿ (Cauvery Protest) ಸೆಪ್ಟೆಂಬರ್ 26ರಂದು ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಯಿತು. ಸುಮಾರು 150ಕ್ಕೂ ಅಧಿಕ ಸಂಘಟನೆಗಳು ಈ ಬಂದ್‌ಗೆ ಬೆಂಬಲ ನೀಡಲಿದೆ ಎಂದು ಪ್ರಕಟಿಸಲಾಗಿದೆ.

ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಿದ್ದವು.

ಆಮ್‌ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಚಂದ್ರು (Mukhyamantri Chandru), ರೈತ ಮುಖಂಡ ಕುರುಬೂರು ಶಾಂತಕುಮಾರ್ (Kuruburu Shantakumar), ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್, ಜಯ ಕರ್ನಾಟಕ ಸಂಘಟನೆ ಮುಖಂಡರು, ಶಾಶ್ವತ ನೀರಾವರಿ ಹೋರಾಟ ಸಮಿತಿ, ಜಲ ಸಂರಕ್ಷಣಾ ಸಮಿತಿ ಮುಖಂಡರಿಂದ ಅಭಿಪ್ರಾಯ ಮಂಡನೆಯಾದ ಬಳಿಕ ಸೆ. 26ರಂದು ಬಂದ್‌ಗೆ ಕರೆ ನೀಡಲು ನಿರ್ಧರಿಸಲಾಯಿತು.

ರಾಜಸ್ತಾನಿ ಸಂಘಟನೆಗಳ ಒಕ್ಕೂಟದಿಂದಲೂ ಕಾವೇರಿ ಹೋರಾಟಕ್ಕೆ ಸಾಥ್

ʻʻಬಂದ್ ಮಾಡಿದ್ರೆ ನಾವು ಬೆಂಬಲ ಕೊಡ್ತೇವೆ. ಯಾಕೆಂದರೆ ಕಾವೇರಿ ಋಣ ನಮ್ಮ ಮೇಲೆಯೂ ಇದೆ. ಅದಕ್ಕಾಗಿ ನಾವು ಈ ಹೋರಾಟಕ್ಕೆ ಬೆಂಬಲ ಕೊಡ್ತೀವೆʼʼ ಎಂದ ರಾಜಸ್ತಾನಿ ಸಂಘಟನೆ ಮುಖ್ಯಸ್ಥರು ಹೇಳಿದರು.

ಮಂಗಳವಾರದ ಬಂದ್ ಹೇಗಿರಲಿದೆ?

ಸಂಘಟನೆಗಳ ನಾಯಕರು ಮಾಡಿರುವ ಪ್ಲ್ಯಾನ್‌ ಪ್ರಕಾರ ಮುಂದಿನ ಮಂಗಳವಾರ ಎಲ್ಲಾ ಸಾರ್ವಜನಿಕ ಸೇವೆಗಳು ಸ್ಥಗಿತವಾಗಲಿವೆ.
-ಅಂಗಡಿ ಮುಂಗಟ್ಟುಗಳು ಬಂದ್‌
– ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತ
-ಶಾಲಾ ಕಾಲೇಜ್‌, ಸರ್ಕಾರಿ ಕಚೇರಿ ಕಾರ್ಯ ಚಟುವಟಿಕೆ ಸ್ಥಗಿತ
– ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್

ಹೀಗೆ ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್‌ ಆಗಬೇಕು ಎನ್ನುವುದು ಸಂಘಟಕರ ನಿರೀಕ್ಷೆಯಾಗಿದೆ.

ಅಂದು ಟೌನ್ ಹಾಲ್ ಬಳಿ ಬೃಹತ್ ಪ್ರತಿಭಟನೆ ನಡೆದು ನಂತರ ಫ್ರೀಡಂ ಪಾರ್ಕ್ ವರೆಗೂ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Cauvery Protest : ಕಾಂಗ್ರೆಸ್‌ ಪಕ್ಷ ತಮಿಳುನಾಡಿನ ಏಜೆಂಟ್‌ ಎಂದ ಬಿಎಸ್‌ವೈ, ಬಿಜೆಪಿಯಿಂದ ಬೀದಿಗಿಳಿದು ಹೋರಾಟ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಜಯ ಕರ್ನಾಟಕ ಸಂಘಟನೆ

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ಸಮಾಲೋಚನೆಯಲ್ಲಿ ಪಾಲ್ಗೊಂಡ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಬಳಿಕ ಪ್ರತ್ಯೇಕವಾಗಿ ವಿಧಾನಸೌಧ ಮುತ್ತಿಗೆಗೆ ತಯಾರಿ ನಡೆಸಿದರು. ಅವರನ್ನು ಬಳಿಕ ಬಂಧಿಸಲಾಯಿತು.

Exit mobile version