ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು (Cauvery Water Dispute) ಬಿಡುವುದನ್ನು ವಿರೋಧಿಸಿ ಗುರುವಾರ (ಅ.5) ಬೆಂಗಳೂರಿಂದ ರ‍್ಯಾಲಿ ನಡೆಯುತ್ತಿದೆ. ವಾಟಾಳ್ ನಾಗರಾಜ್ (Vatal Nagraj) ಹಾಗೂ ಕನ್ನಡಪರ ಸಂಘಟನೆಗಳು, ಕೆಆರ್‌ಎಸ್‌ಗೆ ಮುತ್ತಿಗೆ (KRS) ಹಾಕಿ ಆಕ್ರೋಶ ಹೊರಹಾಕಲು ಸಜ್ಜಾಗಿವೆ. ಗುರುವಾರ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ರ‍್ಯಾಲಿ ಆರಂಭವಾಗಿದೆ. ಅಲ್ಲಿಂದ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್, ಕಾಟನ್ ಪೇಟೆ, ಸಿಸಿಬಿ, ಚಾಮರಾಜಪೇಟೆ, ನಾಯಂಡಹಳ್ಳಿ, ಕೆಂಗೇರಿ ಮುಖಾಂತರ ಬಿಡದಿ, ಚನ್ನಪಟ್ಟಣ, ಮಂಡ್ಯ ತಲುಪಿ ರೈತರ ಜತೆ ವಾಟಾಳ್ ನಾಗರಾಜ್ ಸಮಾಲೋಚನೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕಾವೇರಿಗಾಗಿ (Cauvery Water Dispute) ಎದ್ದಿದ್ದ ಕಿಚ್ಚಿನ ಜ್ವಾಲೆ ಮತ್ತೊಮ್ಮೆ ಕಾವು ಪಡೆಯೋಕೆ ಸಜ್ಜಾಗಿದೆ. ಈಗಾಗಲೇ ಕರ್ನಾಟಕ ಬಂದ್ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಸಂಘಟನೆಗಳು, ಅ.5ರಂದು ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಮರಕ್ಕೆ ರಣಕಹಳೆ ಊದಿವೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು ಬಂದ್, ಕರ್ನಾಟಕ ಬಂದ್‌ಗಳ ಜತೆಗೆ ಹಲವು ಪ್ರತಿಭಟನೆಗಳ ಮೂಲಕ ಕಾವೇರಿ ನಮ್ಮದು ಎಂಬ ಕೂಗನ್ನು ಕನ್ನಡಿಗರು ಎಲ್ಲೆಡೆ ಪಸರಿಸಿದರು. ಕರ್ನಾಟಕ ಬಂದ್ ಮೂಲಕ ಕಾವೇರಿ ನಮ್ಮವಳು ಎಂಬ ಕೂಗು ಮೊಳಗಿಸಿದ್ದ ಹೋರಾಟಗಾರರು, ಇದೀಗ ಮತ್ತೆ ಕಾವೇರಿಗಾಗಿ ರಣಕಹಳೆ ಮೊಳಗಿಸಲು ಸಜ್ಜಾಗಿ ನಿಂತಿದ್ದಾರೆ.
ಕೆಆರ್‌ಎಸ್ ಮುತ್ತಿಗೆ
ಬೆಂಗಳೂರಿಂದ ನೂರಾರು ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಸುಮಾರು 5 ಸಾವಿರ ಕಾರುಗಳು ಹಾಗೂ 20 ಸಾವಿರ ಬೈಕ್‌ಗಳ ಜತೆಗೆ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೆ ತೆರಳಲು ಯೋಜನೆ ರೂಪಿಸಲಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಆರಂಭವಾಗಿರುವ ರ‍್ಯಾಲಿ, ಕೆಆರ್‌ಎಸ್ ತನಕ ಸಾಗಲಿದ್ದು, ಬಳಿಕ ಕೆಆರ್‌ಎಸ್ ಮುತ್ತಿಗೆ ಹಾಕಿ ಪ್ರತಿಭಟಿಸಲು ತಯಾರಿ ನಡೆದಿದೆ.
ಅದಕ್ಕೂ ಮೊದಲು ರಾಮನಗರದ ಐಜೂರು ಗೇಟ್ ಬಳಿ ಪ್ರತಿಭಟನೆ ನಡೆಸಿ ಅವರು ರ‍್ಯಾಲಿಗೆ ಸಾಥ್ ನೀಡಲಿದ್ದಾರೆ. ಮಂಡ್ಯದಲ್ಲಿ ಕಾವೇರಿಗಾಗಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು ವಾಟಾಳ್ ಭೇಟಿ ಮಾಡಲಿದ್ದಾರೆ. ನಂತರ ಮೈಸೂರಿನಿಂದ ಬರುವ ರೈತರ ಜತೆ ಸೇರಿ ಶ್ರೀರಂಗಪಟ್ಟಣ, ಪಂಪ್ ಹೌಸ್ ಮೂಲಕ ಕೆಆರ್‌ಎಸ್ ಮುತ್ತಿಗೆ ಹಾಕಲಿದ್ದಾರೆ.ಕೆಆರ್‌ಎಸ್ ಒಡಲು ಖಾಲಿಯಾಗುತ್ತಿದ್ದರೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಬೃಹತ್ ರ‍್ಯಾಲಿ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದ್ದೇವೆ ಎಂದು ಕನ್ನಡಪರ ಹೋರಾಟಗಾರರು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ