ಬೆಂಗಳೂರು: 2023ರ ಜು. 18ರಂದು ಉಡುಪಿಯ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ (Nethrajyothi Paramedical College) ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಒಬ್ಬ ಹಿಂದೂ ವಿದ್ಯಾರ್ಥಿನಿ ಟಾಯ್ಲೆಟ್ (Udupi Toilet Case) ಬಳಸುವ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂದು ಹೇಳಲಾದ ಪ್ರಕರಣ ನಿಜ ಎಂದು ಸಿಐಡಿ ತನ್ನ ಚಾರ್ಜ್‌ಶೀಟ್‌ನಲ್ಲಿ (CID ChargeSheet) ತಿಳಿಸಿದೆ. ಆದರೆ, ಇದರ ಹಿಂದೆ ಕೋಮು ಉದ್ದೇಶಗಳು ಇದ್ದಂತಿಲ್ಲ ಎಂದು ಹೇಳಿದೆ. ಸಿಐಡಿ ಚಾರ್ಜ್‌ಶೀಟ್‌ನಿಂದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಬಿಜೆಪಿ (BJP Karnataka) ಹೇಳಿದೆ.
ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಅವರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ, ಮೂವರು ಆರೋಪಿಗಳು ಶೌಚಾಲಯದಲ್ಲಿ ವಿಡಿಯೋ ಮಾಡಿರುವುದು ತಪ್ಪಾಗಿದೆ ಎಂದು ಕ್ಷಮಾಪನ ಪತ್ರ ಬರೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಆರೋಪಿಗಳು ಬರೆದುಕೊಟ್ಟಿರುವ ಪತ್ರವು ಅವರ ಹಸ್ತಾಕ್ಷರದೊಂದಿಗೆ ಹೋಲಿಕೆ ಆಗಿದ್ದನ್ನು ಉಲ್ಲೇಖಿಸಲಾಗಿದೆ. ಈ ಮೂಲಕ ವಿದ್ಯಾರ್ಥಿನಿಯರು ತಪ್ಪು ಮಾಡಿರುವುದು ನಿಜ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ತಪ್ಪೊಪ್ಪಿಗೆಯ ಕ್ಷಮಾಪನ ಪತ್ರ ಹಾಗೂ ಸಂತ್ರಸ್ತ ವಿದ್ಯಾರ್ಥಿನಿ ಹೇಳಿಕೆಗಳ ಆಧಾರದಲ್ಲಿ ಆರೋಪಿಗಳ ವಿರುದ್ಧ ಕಲಂ 204, 509, 120(ಬಿ) ಸಹಿತ 34, 37 ಐಪಿಸಿ ಹಾಗೂ 66(ಇ) ಐಟಿ ಆ್ಯಕ್ಟ್‌ನಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್‌ನ ಎರಡು ಸಂಪುಟಗಳಲ್ಲಿ 925 ಪುಟಗಳಿವೆ. 91 ಸಾಕ್ಷಿಗಳಿಂದ ಮಾಹಿತಿ ಪಡೆಯಲಾಗಿದೆ.
ಹಾಗಿದ್ದರೆ ಸಿಐಡಿ ಮುಂದೆ ಸಂತ್ರಸ್ತ ವಿದ್ಯಾರ್ಥಿನಿ ಹೇಳಿದ್ದೇನು?
- ವಿಡಿಯೋ ಚಿತ್ರೀಕರಣ ವಿಚಾರದ ಕುರಿತು ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ ತಾನು ಭಾಗವಹಿಸಿಲ್ಲ. ಬಳಿಕ ಆಡಳಿತ ಮಂಡಳಿಯವರು ಪೋಷಕರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ.
- ಪೋಷಕರನ್ನು ಕರೆಸಿ ಮಾತುಕತೆ ನಡೆಸಿದ ವೇಳೆ ನಾನು ಈ ವಿಷಯ ಹೊರಗೆ ಹೋದರೆ ನನ್ನ ಮತ್ತು ಆ ಮೂರು ಜನರ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದ್ದೇನೆ. ಅಲ್ಲದೆ ಆ ಮೂವರು ಹೆಣ್ಣು ಮಕ್ಕಳು ಈ ವಿಚಾರವಾಗಿ ಎಲ್ಲರ ಮುಂದೆ ಕ್ಷಮಾಪಣೆಯನ್ನು ಕೇಳಿದ್ದರು.
- ಮಾತುಕತೆ ಸಂದರ್ಭ ನನ್ನ ತಾಯಿ, ಈ ವಿಚಾರವನ್ನು ಪ್ರಚಾರ ಮಾಡಬಾರದು, ನನ್ನ ಮಗಳ ಭವಿಷ್ಯ ಹಾಳಾಗುತ್ತದೆ. ಆ ಕಾರಣ ನಾವು ಯಾವುದೇ ರೀತಿಯ ದೂರನ್ನು ನೀಡಲು ಆಗುವುದಿಲ್ಲ ಎಂದು ಪೊಲೀಸರ ಮುಂದೆ ತಿಳಿಸಿದ್ದರು.
- ಒಂದು ವೇಳೆ ಆರೋಪಿಗಳು ಆ ರೀತಿಯ ವಿಡಿಯೊ ಮಾಡಿದ್ದರೆ ಅಥವಾ ಫೋಟೊ ತೆಗೆದಿದ್ದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು.- ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಗಿ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Udupi Toilet Case: ನೇತ್ರಜ್ಯೋತಿ ಕಾಲೇಜಿಗೆ ಸಿಐಡಿ ಎಸ್‌ಪಿ ಭೇಟಿ; ಸಂತ್ರಸ್ತ ವಿದ್ಯಾರ್ಥಿನಿಯಿಂದ ಹೇಳಿಕೆ ದಾಖಲು
ಆರೋಪಿತ ವಿದ್ಯಾರ್ಥಿನಿಯರ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಏನಿದೆ?
ಆರೋಪಿತ ವಿದ್ಯಾರ್ಥಿನಿಯರು ತಮಾಷೆ ಅಥವಾ ಪ್ರ್ಯಾಂಕ್ ವಿಡಿಯೋ ಮಾಡುವ ಹವ್ಯಾಸ ಹೊಂದಿದ್ದರು. ಜುಲೈ 18, 2023ರಂದು ಕಾಲೇಜಿನ ಶೌಚಾಲಯದಲ್ಲಿ ತಮ್ಮ ಗೆಳತಿಯ ವಿಡಿಯೋ ಮಾಡಿದ್ದರು. ಆದರೆ, ಅವರು ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಗೆಳತಿಯ ಬದಲಾಗಿ ಸಹಪಾಠಿ ಯುವತಿ ಇರುವುದು ಗೊತ್ತಾಗಿದೆ.
ಕೂಡಲೇ ವಿಡಿಯೋ ಡಿಲಿಟ್ ಮಾಡಿದ ವಿದ್ಯಾರ್ಥಿನಿಯರು ಸಂತ್ರಸ್ತೆಗೆ ತಪ್ಪಾಗಿ ವಿಡಿಯೋ ಮಾಡಿರುವ ವಿಚಾರ ತಿಳಿಸಿ ಕ್ಷಮೆ ಯಾಚಿಸಿದ್ದಾರೆ. ಬಳಿಕ ಈ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಾಗಿದೆ. ಆಡಳಿತ ಮಂಡಳಿ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದಾಗ ಅವರು ವಿಡಿಯೋ ಮಾಡಿರುವುದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ. ವಿಡಿಯೊದಲ್ಲಿ ಸಂತ್ರಸ್ತೆ ತಲೆ ಎತ್ತಿ ನೋಡುವ ಸನ್ನಿವೇಶವಷ್ಟೇ ದಾಖಲಾಗಿದೆ.
ವಿದ್ಯಾರ್ಥಿನಿಯರು ಆಡಳಿತ ಮಂಡಳಿಗೆ ಕೊಟ್ಟಿರುವ ಕ್ಷಮಾಪಣಾ ಪತ್ರದ ಬರಹಕ್ಕೂ ಅವರ ಕೈ ಬರಹಕ್ಕೂ ತಾಳೆಯಾಗುತ್ತಿದೆ ಎಂದು ಎಫ್‌ಎಸ್‌ಎಲ್ ವರದಿ ದೃಢೀಕರಿಸಿದೆ. ಕಾಲೇಜಿನ ಸಿಸಿಟಿವಿ ವಿಡಿಯೋ ಕೂಡ ವಿದ್ಯಾರ್ಥಿನಿಯರ ಮೇಲಿರುವ ಆರೋಪಕ್ಕೆ ಪೂರಕವಾಗಿದೆ ಎಂದು ಸಿಐಡಿ ತನ್ನ ಚಾರ್ಜ್ ಶೀಟ್‌ನಲ್ಲಿ ತಿಳಿಸಿದೆ ಎನ್ನಲಾಗಿದೆ.
ಹಾಗಂತ ಸಿಐಡಿ ತನಿಖೆಗೂ ಈ ವಿಡಿಯೊ ಸಿಕ್ಕಿಲ್ಲ. ಅದನ್ನು ತಕ್ಷಣವೇ ಡಿಲೀಟ್ ಮಾಡಲಾಗಿದೆ. ಅದನ್ನು ರಿಟ್ರೀವ್ ಮಾಡಲು ಕೂಡಾ ಆಗಿಲ್ಲ. ಅದನ್ನು ಬೇರೆ ಯಾರಿಗೂ ಹಂಚಿದಂತಿಲ್ಲ ಎಂದು ಚಾರ್ಜ್‌ಶೀಟ್‌ನಲ್ಲಿ ಇದೆ ಎನ್ನಲಾಗಿದೆ.
ಪ್ರಾಂಕ್ ಎಂದ ಕಾಂಗ್ರೆಸ್‌ಗೆ ಇದು ಮುಖಭಂಗ ಎಂದ ಬಿಜೆಪಿ
ಉಡುಪಿ ಕಾಲೇಜಿನ ಟಾಯ್ಲೆಟ್‌ನಲ್ಲಿ ಹಿಂದೂ ಯುವತಿಯರ ವಿಡಿಯೋ ಪ್ರಕರಣವನ್ನು ‘Prank’ ಎಂದು ರಾಜ್ಯದ ಜನತೆಯ ಕಿವಿ ಮೇಲೆ ಹೂವಿಡಲು ಷಡ್ಯಂತ್ರ ರಚನೆ ಮಾಡಿದ್ದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ. ಪೊಲೀಸರು ತನಿಖೆ ಮಾಡುವ ಮುನ್ನವೇ ಪ್ರಕರಣಕ್ಕೆ ಕ್ಲೀನ್ ಚಿಟ್ ಕೊಟ್ಟು ಜಿಹಾದಿಗಳಿಗೆ ರಕ್ಷಣೆ ನೀಡಲು ಮುಂದಾಗಿತ್ತು ಕಾಂಗ್ರೆಸ್ ಸರ್ಕಾರ ಹಾಗೂ ಅಸಮರ್ಥ ಗೃಹ ಸಚಿವ ಡಾ. ಜಿ. ಪರಮೇಶ್ವರ್. ಆದರೆ, ಸಿಐಡಿ ತನಿಖೆಯಲ್ಲಿ ಜಿಹಾದಿ ಕೃತ್ಯದ ಸತ್ಯ ಹೊರಬಂದಿದೆ. ಮಜಾವಾದಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕರ್ನಾಟಕದಲ್ಲಿ ಜಿಹಾದಿ ಕೃತ್ಯಗಳು ಹೆಚ್ಚಾಗಿವೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಉಡುಪಿ ಪ್ರಕರಣ, ವಿಧಾನಸೌಧದ ಪಾಕ್ ಘೋಷಣೆ ಪ್ರಕರಣ, ಭಯೋತ್ಪಾದಕರ ಬಂಧನ ಸೇರಿದಂತೆ ಹಲವು ಪ್ರಕರಣಗಳನ್ನು ಮುಚ್ಷಿ ಹಾಕಲು ಹೋಗಿ ಪಾ’ಕೈ’ಸ್ತಾನ್ ಸರ್ಕಾರ ಸಿಕ್ಕಿಬಿದ್ದಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರಕ್ಕೆ ಮರ್ಯಾದೆ ಇದ್ದರೆ, ಪ್ರಕರಣಗಳ ದಿಕ್ಕು ತಪ್ಪಿಸುವ ಬದಲು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಆಡಳಿತ ನಡೆಸುವ ಯೋಗ್ಯತೆ ದಮ್ಮು ತಾಕತ್ತು ಇಲ್ಲದಿದ್ದರೆ ಮನೆಗೆ ನಡೆಯಬೇಕು! ಎಂದು #AntiHinduCongress#UdupiHorror ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಅದು ಟ್ವೀಟ್ ಮಾಡಿದೆ.