ಬೆಂಗಳೂರು: ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ರಾಜ್ಯದ ಪಾಲಿನ ಹಣವನ್ನು ಕೇಂದ್ರ ಸರ್ಕಾರ (Central Government) ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನೇರ ಆರೋಪ ಮಾಡಿದ್ದಾರೆ. ರಾಜ್ಯಕ್ಕೆ ಕಳೆದ 5 ವರ್ಷದಲ್ಲಿ 73 ಸಾವಿರ ಕೋಟಿ ನಮಗೆ ಕಡಿತವಾಗಿದೆ ಎಂದು ಹೇಳಿರುವ ಅವರು ಈ ಅನ್ಯಾಯದ ವಿರುದ್ಧ, ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ಫೆಬ್ರವರಿ 7ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ (Protest against Central Government on February 7) ನಡೆಸಲಾಗುವುದು ಎಂದು ಅವರು ಪ್ರಕಟಿಸಿದರು.
ಕೇಂದ್ರ ಸರ್ಕಾರವು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ರಚನೆಯಾದ 14 ಮತ್ತು 15ನೇ ಹಣಕಾಸು ಆಯೋಗ ಶಿಫಾರಸುಗಳಂತೆ ಹಣ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಹಣ ನೀಡದೆ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರು ಸೋಮಾರ ವಿಧಾನಸೌಧದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಕೇಂದ್ರದ ವಿರುದ್ಧ ನಾವು ಧ್ವನಿ ಎತ್ತಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇಡೀ ಸರ್ಕಾರದಿಂದಲೇ ಜತೆಯಾಗಿ ಫೆ. 7ರಂದು ಪ್ರತಿಭಟನೆ
ಫೆಬ್ರವರಿ 7ರಂದು ಬೆಳಗ್ಗೆ 11 ಗಂಟೆಗೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಮ್ಮ ಇಡೀ ಸರ್ಕಾರವೇ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಎಲ್ಲಾ ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಪ್ರತಿಭಟನೆಯಲ್ಲಿ ಎಲ್ಲಾ ಸಂಸದರು ಕೂಡ ಭಾಗಿಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು.
ಇದು ರಾಜಕೀಯ ಪ್ರೇರಿತ ಪ್ರತಿಭಟನೆಯಲ್ಲ, ಹಕ್ಕಿಗಾಗಿ ನಡೆಸುವ ಹೋರಾಟ ಎಂದು ಹೇಳಿದ ಸಿದ್ದರಾಮಯ್ಯ ಅವರು, ಫೆಬ್ರವರಿ 6ರಂದು ಸಂಜೆಯೇ ದೆಹಲಿಗೆ ಹೋಗುತ್ತೇವೆ, ನಾಡಿದ್ದು ಪ್ರತಿಭಟನೆ ಮಾಡುತ್ತೇವೆ ಎಂದರು.
ಸಿದ್ದರಾಮಯ್ಯ ನೀಡಿದ ದಾಖಲೆ ಮಾಹಿತಿ, ಆಗ್ರಹ
1.ರಾಜ್ಯದಿಂದ 4 ಲಕ್ಷ 30 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. 100 ರೂ. ತೆರಿಗೆ ಕಟ್ಟಿದರೆ ನಮಗೆ ಶೇ 12-13ರಷ್ಟು ವಾಪಸ್ ಬರುತ್ತಿದೆ. ಆದರೆ, ಕರ್ನಾಟಕಕ್ಕೆ ಅನ್ಯಾಯವಾಗಿಲ್ಲವೆಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಾರೆ.
2. ಸಂವಿಧಾನ ಅಳವಡಿಸಿಕೊಂಡ ಬಳಿಕ ಒಕ್ಕೂಟ ವ್ಯವಸ್ಥೆ ಒಪ್ಪಿಕೊಂಡಿದ್ದೇವೆ. ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ಹೋಗುತ್ತದೆ. ಹಣಕಾಸು ಆಯೋಗ ನಿರ್ಧರಿಸಿದಂತೆ ಈ ಹಣ ರಾಜ್ಯಗಳಿಗೆ ನೀಡಬೇಕು.
3.14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 42ರಷ್ಟು ಹಣ ನೀಡಬೇಕು. 15ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 41ರಷ್ಟು ಹಣ ನೀಡಬೇಕು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೇ ಈ ಆಯೋಗ ರಚನೆ ಆಗಿತ್ತು.
ಇದನ್ನೂ ಓದಿ : CM Siddaramaiah: ಕುಂಕುಮ ನಿರಾಕರಿಸಿದ ಸಿದ್ದರಾಮಯ್ಯಗೆ ಬಿಜೆಪಿ ನಾಯಕರ ತರಾಟೆ
4.ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5498 ಕೋಟಿ ರೂಪಾಯಿ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದ್ದರು. ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ.
5.ಪೆರಿಫರಲ್ ರಿಂಗ್ ರಸ್ತೆಗೆ 3000 ಕೋಟಿ ರೂಪಾಯಿ ಹಾಗೂ ಜಲಮೂಲಗಳ ಅಭಿವೃದ್ಧಿಗೆ 3000 ಕೋಟಿ ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು. ಒಟ್ಟು ಕೇಂದ್ರ ಸರ್ಕಾರದಿಂದ 11,495 ಕೋಟಿ ರೂಪಾಯಿ ರಾಜ್ಯಕ್ಕೆ ಬರಬೇಕಿತ್ತು. ಒಟ್ಟು 5 ವರ್ಷದಲ್ಲಿ 73 ಸಾವಿರ ಕೋಟಿ ನಮಗೆ ಕಡಿಮೆಯಾಗಿದೆ.
6. ಜಿಎಸ್‌ಟಿಯಿಂದ ತೆರಿಗೆ ಹೆಚ್ಚಳವಾಗುತ್ತದೆ. ರಾಜ್ಯಗಳಿಗೆ ನಷ್ಟವಾದರೆ ಪರಿಹಾರ ರೂಪದಲ್ಲಿ ಹಣ ನೀಡ್ತೇವೆ ಎಂದಿದ್ರು. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡ್ತೇವೆ ಎಂದಿದ್ದರು. ಆದರೆ, ಬಿಡುಗಡೆ ಮಾಡಿಲ್ಲ. ಹಲವು ಬಾರಿ ಮನವಿ ಮಾಡಿದ್ರೂ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ.