Site icon Vistara News

Chaitra Kundapura : Big Update; ಅದು ಆತ್ಮಹತ್ಯೆ ಯತ್ನ ಅಲ್ಲ, ಚೈತ್ರಾ ಕುಂದಾಪುರ ಫಿಟ್ಸ್‌ ಬಂದು ಕುಸಿದು ಬಿದ್ದದ್ದು!

chaitra recovering

ಬೆಂಗಳೂರು: ಬಿಜೆಪಿ ಟಿಕೆಟ್‌ ಕೊಡಿಸುತ್ತೇನೆಂದು ಉದ್ಯಮಿ ಗೋವಿಂದ ಪೂಜಾರಿಗೆ (Govinda Poojari) ಐದು ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಅವರ ಆರೋಗ್ಯ ಸ್ಥಿತಿಯ ಬಗ್ಗೆ ಬಿಗ್‌ ಅಪ್‌ಡೇಟ್‌ (Health Update) ಸಿಕ್ಕಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದ ವೇಳೆ ಒಮ್ಮಿಂದೊಮ್ಮೆಗೇ ಕುಸಿದುಬಿದ್ದಿದ್ದ ಆಕೆ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ (Chaitra is recovering).

ಸೆ. 12ರಂದು ಬಂಧಿತರಾಗಿದ್ದ ಆಕೆ ಮತ್ತು ಟೀಮ್‌ ಈಗ ಸಿಸಿಬಿ ಕಸ್ಟಡಿಯಲ್ಲಿದೆ. ಚೈತ್ರಾ ಕುಂದಾಪುರ ಅವರನ್ನು ರಾತ್ರಿ ಸಾಂತ್ವನ ಕೇಂದ್ರದಲ್ಲಿ ಉಳಿಸಲಾಗುತ್ತಿದ್ದು, ಶುಕ್ರವಾರ ಬೆಳಗ್ಗೆ ಅಲ್ಲಿಂದ ಕರೆತಂದು ವಿಚಾರಣೆ ಶುರುಮಾಡಲಾಗಿತ್ತು. ಅಷ್ಟು ಹೊತ್ತಿಗೆ ಅವರು ನೊರೆ ಕಾರಿಕೊಂಡು ಅಲ್ಲೇ ಕುಸಿದುಬಿದ್ದರು. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಆರಂಭದಲ್ಲಿ ಅವರು ಯಾವುದೋ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಹೀಗಾಗಿ ನೊರೆ ಕಾರಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಯಾವುದೇ ವಿಷ ಸೇವಿಸಿದ್ದಲ್ಲ. ಅವರು ಜನಸಾಮಾನ್ಯರ ಭಾಷೆಯಲ್ಲಿ ಫಿಟ್ಸ್‌ ಎಂದು ಹೇಳಲಾಗುವ ಅಪಸ್ಮಾರ, ಮೂರ್ಛೆ ರೋಗಕ್ಕೆ (Epilepsy) ಒಳಗಾಗಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂತು.

ಫಿಟ್ಸ್‌ ರೋಗ ಬಂದಾಗ ಆಗುವಂತೆ ಅವರಿಗೂ ನರ್ವ್‌ ಸೀಜ್‌ ಆಗಿ ಬಳಿಕ ರಿಲ್ಯಾಕ್ಸ್‌ ಆಗಿದ್ದಾರೆ. ಇದೀಗ ಅವರ ರಕ್ತದ ಒತ್ತಡ, ಪಲ್ಸ್ ರೇಟ್ ನಾರ್ಮಲ್ ಇದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚೈತ್ರ ಸುಧಾರಿಸಿಕೊಳ್ಳುತ್ತಿದ್ದು, ಕರೆದೊಯ್ಯಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸ್ವಲ್ಪ ಸಮಯ ಆಸ್ಪತ್ರೆಯಲ್ಲೇ ಇರಲಿ ಎಂದು ಪೊಲೀಸರು ಕಾಯುತ್ತಿದ್ದು, ಬಳಿಕ ಶಿಫ್ಟ್‌ ಮಾಡುವ ಸಾಧ್ಯತೆಗಳಿವೆ.

ಈ ಹಿಂದೆಯೂ ಫಿಟ್ಸ್‌ ನಿಂದ ಬಿದ್ದಿದ್ದರು ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರಗೆ ಹಿಂದೆಯೂ ಫಿಟ್ಸ್‌ ರೋಗ ಕಾಡಿದ ಇತಿಹಾಸ ಇದೆ ಎಂದು ಹೇಳಲಾಗುತ್ತಿದೆ. ಅತಿಯಾದ ಒತ್ತಡವಾದಾಗ, ಭಾವೋದ್ವೇಗಕ್ಕೆ ಒಳಗಾದಾಗ ಅವರು ಕುಸಿದು ಬಿದ್ದ ಘಟನೆಗಳು ನಡೆದಿವೆ. ಒಮ್ಮೆ ಪ್ರಜ್ಞೆ ತಪ್ಪಿಯೂ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಬಾರಿ ಭಾಷಣ ಮಾಡುವಾಗಲೇ ಬಿದ್ದಿದ್ದರು ಎನ್ನಲಾಗಿದೆ. ಚೈತ್ರಾ ಈ ಸಮಸ್ಯೆಗಾಗಿ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ದಿನಗಳಿಂದ ಮಾತ್ರೆ ಕೂಡಾ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.

ಮೂರು ದಿನದಿಂದ ನಿದ್ದೆಯಿಲ್ಲ, ಸರಿಯಾಗಿ ಊಟವಿಲ್ಲ

ಸೆ. 12ರಂದು ಬಂಧನಕ್ಕೆ ಒಳಗಾದ ಬಳಿಕ ಚೈತ್ರ ಕುಂದಾಪುರ ಇನ್ನೂ ಸರಿಯಾಗಿ ನಿದ್ದೆ ಮಾಡಿಲ್ಲ ಎಂದು ಹೇಳಲಾಗಿದೆ. ನಾನು ಈ ಪ್ರಕರಣದಲ್ಲಿ ಸಿಕ್ಕಿಬೀಳುವಂತಾಯಿತಲ್ಲ ಎಂದ ವಿಪರೀತ ಒತ್ತಡಕ್ಕೆ ಒಳಗಾಗಿದ್ದ ಆಕೆ ಊಟವನ್ನೂ ಮಾಡಿರಲಿಲ್ಲ. ಅದರ ಜತೆಗೆ ಮಾತ್ರೆಯನ್ನೂ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಅದರ ಜತೆಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅನಿವಾರ್ಯತೆಯಿಂದ ಆಕೆ ನಲುಗಿದ್ದಾಳೆ. ಹೀಗಾಗಿ ಫಿಟ್ಸ್‌ ಬಂದು ಪ್ರಜ್ಞಾಹೀನಳಾಗಿದ್ದಾಳೆ ಎನ್ನಲಾಗಿದೆ.

Exit mobile version