Site icon Vistara News

Chaitra Kundapura : ನಕಲಿ ಹಿರಿಯ ಬಿಜೆಪಿ ನಾಯಕ ಚನ್ನಾ ನಾಯಕ್‌ ಅರೆಸ್ಟ್‌!; ಮೋದಿ ನಂತ್ರ ನೀವೇ ಅಂದಿದ್ಲಂತೆ ಚೈತ್ರಾ!

BL Channa nayak Arrested

ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್‌ ಕೊಡಿಸುತ್ತೇನೆಂದು ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಚೈತ್ರಾ ಕುಂದಾಪುರ ಗ್ಯಾಂಗ್‌ (Chaitra Kundapura) ಐದು ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ, ಈ ನಾಟಕದಲ್ಲಿ ಹಿರಿಯ ಬಿಜೆಪಿ ನಾಯಕ ʻನಾಯಕ್‌ʼ ಪಾತ್ರವನ್ನು ವಹಿಸಿದ ಬಿ.ಎಲ್‌. ಚನ್ನಾ ನಾಯಕ್‌ನನ್ನು (BL Channa nayak) ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ವಿಸ್ತಾರ ನ್ಯೂಸ್‌ ಚನ್ನಾ ನಾಯಕ್‌ ಅವರನ್ನು ಪತ್ತೆ ಹಚ್ಚಿ ಕಾರಿನಲ್ಲಿ ಕೂರಿಸಿ ವಾಹನ ಚಲಿಸುತ್ತಲೇ ಮಾತನಾಡಿಸುತ್ತಿದ್ದಾಗ ಸಿಸಿಬಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಿ.ಎಲ್‌. ಚನ್ನಾನಾಯಕ್‌ ಅವರು ವಿಸ್ತಾರ ನ್ಯೂಸ್‌ ಜತೆ ಮಾತನಾಡುವ ಆರಂಭದಲ್ಲೇ ʻಮೊದಲೇ ಹೇಳಿಬಿಡ್ತೇನೆ. ನಾನು ಕೆ.ಆರ್‌. ಪುರಂನವನೂ ಅಲ್ಲ, ಕಬಾಬ್‌ ಮಾರೋನೂ ಅಲ್ಲ. ನಾನೊಬ್ಬ ಸಣ್ಣ ಬ್ಯುಸಿನೆಸ್‌ ಮಾಡಿಕೊಂಡಿರುವ ವ್ಯಕ್ತಿ. ರಾಜಕೀಯ ಹಿನ್ನೆಲೆಯೂ ಇಲ್ಲ. ಒಮ್ಮೆ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿದ್ದೆ ಅಷ್ಟೆʼʼ ಎಂದು ಸ್ಪಷ್ಟಪಡಿಸಿದರು.

ಚೈತ್ರಾ ಕುಂದಾಪುರ (Chaitra Kundapura) ಮತ್ತು ಗ್ಯಾಂಗ್‌ ಗೋವಿಂದ ಪೂಜಾರಿ ಅವರನ್ನು ವಂಚಿಸುವುದಕ್ಕಾಗಿ ಮಾಡಿದ ನಾಟಕದಲ್ಲಿ ಚನ್ನಾ ನಾಯಕ್‌ಗೆ ಚುನಾವಣಾ ಸಮಿತಿಯಲ್ಲಿರುವ ಹಿರಿಯ ಬಿಜೆಪಿ ನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಬೆಂಗಳೂರಿನ ಕುಮಾರಕೃಪಾದಲ್ಲಿ ನಡೆದ ಘಟನಾವಳಿಯಲ್ಲಿ ಗೋವಿಂದ ಪೂಜಾರಿ ಅವರನ್ನು ಭೇಟಿಯಾಗಿ ʻನಿಮಗೆ ಟಿಕೆಟ್‌ ಆಗಿದೆ. ನೀವು ಮುಂದಿನ ವಿಷಯವನ್ನು ವಿಶ್ವನಾಥ್‌ ಜಿ (ಆರೆಸ್ಸೆಸ್‌ ಪ್ರಚಾರಕನ ಪಾತ್ರ) ಅವರಲ್ಲಿ ಮಾತನಾಡಿʼʼ ಎಂದು ಹೇಳಿ ಒಂದು ಪತ್ರವನ್ನು ಅವರಿಗೆ ಕೊಡುವ ಕೆಲಸ ಅಷ್ಟೆ. ಈ ಕೆಲಸವನ್ನು ಗೋವಿಂದ ಪೂಜಾರಿ ಅವರಿಗೆ ಸಣ್ಣ ಸಂಶಯವೂ ಬಾರದಂತೆ ನಿರ್ವಹಿಸಿದ್ದ ಶ್ರೇಷ್ಠ ನಟನೆಗಾಗಿ ಸಿಸಿಬಿ ಪೊಲೀಸರು ಗುರುವಾರ ಅವರನ್ನು ಬಂಧಿಸಿ ಕರೆದೊಯ್ದರು!

ಅಷ್ಟಕ್ಕೂ ಚನ್ನಾ ನಾಯಕ್‌ ಈ ವಂಚಕರ ಕೈಗೆ ಸಿಕ್ಕಿದ್ದು ಹೇಗೆ? ಈ ಕೆಲಸವನ್ನು ಒಪ್ಪಿಸಿದ್ದು ಹೇಗೆ ಎಂಬುದು ಒಂದು ಇಂಟ್ರೆಸ್ಟಿಂಗ್‌ ಕಥೆ. ಅದನ್ನು ಅವರ ಬಾಯಲ್ಲೇ ಕೇಳಿ..

ಒಂದು ದಿನ ಗಗನ್‌ ಮತ್ತು ಧನರಾಜ್‌ ನನ್ನ ಹತ್ರ ಬಂದರು (ಚನ್ನಾ ನಾಯಕ್‌ಗೆ ಕಡೂರಿನ ಬಿಜೆಪಿ ನಾಯಕ ಗಗನ್‌ ಮತ್ತು ಧನರಾಜ್‌ ಅದು ಹೇಗೋ ಪರಿಚಯ). ನಿಮ್ಮಿಂದ ಒಂದು ಕೆಲಸ ಆಗಬೇಕು ಅಂದರು. ಅದೆಂಥ ಕೆಲಸ ಎಂದು ನಾನೂ ಕೇಳಿದೆ. ʻʻನೀವು ರಾಜಕೀಯದಲ್ಲಿ ಇದ್ದವರು. ಕಷ್ಟ ಸುಖ ಎಲ್ಲ ಗೊತ್ತಿದೆ. ನಮ್ಮವರದ್ದು ಒಂದು ಟಿಕೆಟ್‌ ಆಗಿದೆ. ಅದನ್ನು ಅವರಿಗೆ ತಿಳಿಸಬೇಕು. ಅಷ್ಟೇ ಕೆಲಸʼ ಅಂದರು. ಇದನ್ನು ನಾನು ಯಾಕೆ ಮಾಡಬೇಕು ಎಂದು ಕೇಳಿದೆ. ಅದಕ್ಕೆ ಅವರು ಇದರಿಂದ ನಿಮ್ಮ ರಾಜಕೀಯ ಜೀವನಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು. ನಿಮಗೆ ಮುಂದೆ ಟಿಕೆಟ್‌ ಸಿಗಬಹುದು ಎಂದೆಲ್ಲ ಹೇಳಿದರು. ಅದಕ್ಕೆ ನಾನು ನಾನು ಬಿಜೆಪಿಯಲ್ಲ, ಕಾಂಗ್ರೆಸ್‌ ಅಲ್ಲ, ನನಗೆ ಹೇಗೆ ಟಿಕೆಟ್‌ ಕೊಡ್ತಾರೆ ಎಂದೆಲ್ಲ ಕೇಳಿದೆ. ಕೊನೆಗೆ ಅವರು ನಿಮಗೆ ಚೈತ್ರಾ ಕುಂದಾಪುರ ಗೊತ್ತಾ, ಅವರು ಹೇಳಿದ್ದು ನಿಮ್ಮಲ್ಲಿ ಮಾತನಾಡಲು ಎಂದು ಹೇಳಿದರು. ಆಗ ನಾನು ಅವರು ಗೊತ್ತಿಲ್ಲದೆ ಏನು? ಹಿಂದುತ್ವದ ಉಗ್ರ ಹೋರಾಟಗಾರ್ತಿ ಅಲ್ವಾ ಎಂದು ಕೇಳಿದೆ. ಹಾಗಿದ್ದರೆ ನಿಮ್ಮಲ್ಲೇನು ಮಾತು? ಅವರಲ್ಲೇ ಮಾತನಾಡ್ತೇನೆ ಎಂದೆ.

ಧನರಾಜ್‌ ಮತ್ತು ಗಗನ್‌ ಕಡೂರು ಜತೆ ನಾನು ಕಡೂರಿಗೆ ಹೋದೆ. ಅಲ್ಲಿ ಹೋದಾಗ ಚೈತ್ರಾ ನನ್ನನ್ನು ನೋಡಿದ ಕೂಡಲೇ ಸಿಕ್ಕಾಪಟ್ಟೆ ಬಿಲ್ಡಪ್‌ ಕೊಡಲು ಶುರು ಮಾಡಿದರು. ʻನಾಯಕರೇ ನೀವು ಇಲ್ಲಿ ಇರಬೇಕಾದವರಲ್ಲ. ನೀವು ರಾಷ್ಟ್ರೀಯ ನಾಯಕರಾಗಬೇಕಾದವರು. ನಿಮಗೆ ಏಳೆಂಟು ಭಾಷೆ ಬರ್ತದೆ. ರಾಜಕೀಯದಲ್ಲಿ ಪಳಗಿದ್ದೀರಿʼ ಎಂದೆಲ್ಲ ಹೇಳಿದರು. ಅಷ್ಟೇ ಅಲ್ಲ, ನೋಡಿ ಬಿಜೆಪಿಯಲ್ಲಿ ಮೋದಿಯ ನಂತ್ರ ಯಾರಿದ್ದಾರೆ, ನೀವೆಲ್ಲ ಮುಂದೆ ಬರಬೇಕು ಎಂದು ಹೇಳಿದರು.

ಇದನ್ನೂ ಓದಿ: Chaitra Kundapura : ವಂಚನೆ ಕಥೆ ಅತ್ಲಾಗಿರಲಿ, ಕಡುಬಡವ ಗೋವಿಂದ ಪೂಜಾರಿ ಮಹಾಸಾಧಕನಾದ Motivational ಕಥೆ ಕೇಳಿ

ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳೀತಾ ಇದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದರೆ ನಮಗೆ ಮುಂದೆ ಲಾಭ ಆಗ್ತದೆ. ಹೀಗಾಗಿ ಗೋವಿಂದ ಪೂಜಾರಿ ಅವರಿಗೆ ಟಿಕೆಟ್‌ ಕೊಡಿಸ್ತಾ ಇದ್ದೇನೆ. ಎಲ್ಲ ಖರ್ಚು ಕೂಡಾ ಮಾಡ್ತಾ ಇದ್ದೇನೆ. ಅದನ್ನು ಅವರಿಗೆ ತಿಳಿಸುವ ಕೆಲಸ ಆಗಬೇಕು. ಆ ಕೆಲಸ ನೀವು ಮಾಡಬೇಕು ಎಂದರು. ನನಗೆ ಇದರಲ್ಲಿ ಯಾವುದೇ ತಪ್ಪು ಅಂತ ಕಾಣಲಿಲ್ಲ. ಫೈರ್‌ ಬ್ರಾಂಡ್‌ ನಾಯಕಿ ಅಲ್ವಾ? ಟಿಕೆಟ್‌ ಕೊಟ್ಟಾರು ಅನಿಸಿತು. ಹೀಗಾಗಿ ಅವರು ಹೇಳಿದ ರೀತಿಯಲ್ಲಿ ಆಕ್ಟ್‌ ಮಾಡಿದೆ.

ಈಗ ಹೇಳಲಾಗುತ್ತಿರುವ ಹಾಗೆ ನಾನು ತಲೆಮರೆಸಿಕೊಂಡೇನೂ ಇರಲಿಲ್ಲ. ಇಲ್ಲೇ ಇದ್ದೆ ಎಂದು ಚನ್ನಾ ನಾಯಕ್‌ ಹೇಳಿದರು.

ಗುರುವಾರ ಏನೇನಾಯ್ತು?

ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಬಂಧಿತರಾಗಿದ್ದ ಐವರು ಆರೋಪಿಗಳನ್ನು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದಾಗ 10 ದಿನಗಳ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಚೈತ್ರಾ ಕುಂದಾಪುರ, ಗಗನ್‌ ಕಡೂರ್‌, ಧನರಾಜ್‌, ರಮೇಶ್‌ ಮತ್ತು ಪ್ರಜ್ವಲ್ ಸಿಸಿಬಿ ವಶದಲ್ಲಿದ್ದಾರೆ. ಗುರುವಾರ ಅವರೆಲ್ಲರನ್ನೂ ಸಿಸಿಬಿ ಕಚೇರಿಗೆ ತರಲಾಯಿತು.

ಈ ವೇಳೆ, ಪೊಲೀಸ್‌ ವಾಹನದಿಂದ ಇಳಿದು ಸಿಸಿಬಿ ಕಚೇರಿಗೆ ಹೋಗುವ ಸಣ್ಣ ಗ್ಯಾಪ್‌ನಲ್ಲಿ ಚೈತ್ರಾ ಎರಡು ವಿಷಯಗಳನ್ನು ಹೇಳಿದ್ದಳು. ಒಂದು, ಸ್ವಾಮೀಜಿ ಸಿಕ್ಕಾಕಿಕೊಳ್ಳಲಿ, ಎಲ್ಲ ಸತ್ಯ ಹೊರಗೆ ಬರುತ್ತದೆ, ಎರಡನೆಯದು ಇದು ಇಂದಿರಾ ಕ್ಯಾಂಟೀನ್‌ ವಿಷಯದಲ್ಲಿ ನಡೆಯುತ್ತಿರುವ ಆಟ ಎಂದು. ಇದರ ವಿಚಾರದಲ್ಲೇ ಒಂದಿಷ್ಟು ಚರ್ಚೆಗಳು ನಡೆದವು. ಸ್ವಾಮೀಜಿಯ ಬಂಧನದಿಂದ ದೊಡ್ಡ ದೊಡ್ಡ ನಾಯಕರ ಕಥೆ ಹೊರಗೆ ಬರುತ್ತದೆ ಎಂಬ ಸುದ್ದಿ ಹರಡಿದೆ. ಆದರೆ, ಇಂದಿರಾ ಕ್ಯಾಂಟೀನ್‌ ವಿಷಯಕ್ಕೂ ಇದಕ್ಕೂ ಸಂಬಂಧವಿಲ್ಲ ಎನ್ನುವುದು ಗೊತ್ತಾಯಿತು. ಆ ಬಳಿಕ ಐದನೇ ಆರೋಪಿ ಚನ್ನಾ ನಾಯಕ್‌ ಬಂಧನ ನಡೆದಿದೆ.

ಇವೆಲ್ಲದರ ನಡುವೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ‌ ಡೀಲ್ ಬಯಲಿಗೆಳೆಯಲು ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲಾಗುತ್ತಿದೆ., ಆರೋಪಿಗಳ ಬ್ಯಾಂಕ್ ಡಿಟೇಲ್ಸ್ ಕಲೆ ಹಾಕಲು‌ ಆರೋಪಿಗಳಾದ ಚೈತ್ರಾ ಕುಂದಾಪುರ, ಗಗನ್ ಕಡೂರು, ಧನರಾಜ್, ರಮೇಶ್, ಪ್ರಜ್ವಲ್ ಸೇರಿದಂತೆ ಎಲ್ಲಾ ಆರೋಪಿಗಳನ್ನ ಪ್ರತ್ಯೇಕವಾಗಿ ವಿಚಾರಣೆ ಮುಂದುವರಿದೆ.

ಈ ನಡುವೆ ಗೋವಿಂದ ಪೂಜಾರಿ ಅವರು ಕೂಡಾ ಸಿಸಿಬಿ ಕಚೇರಿಗೆ ಬಂದಿದ್ದು ತನಗೆ ನೀಡಲಾದ ನೋಟಿಸ್‌ಗೆ ಉತ್ತರ ನೀಡಿದ್ದಾರೆ.

Exit mobile version