Site icon Vistara News

Chaitra Kundapura : ಕಾವಿ ತೆಗೆದು ಟೀಶರ್ಟ್‌ ತೊಟ್ಟಿದ್ದ ಹಾಲಶ್ರೀ ಸ್ವಾಮೀಜಿ; ಕ್ಲೂ ಕೊಟ್ಟಿದ್ದು ರೈಲ್ವೇ ಟಿಕೆಟ್‌ PNR ನಂಬರ್‌

HalaShri Swameeji arrested in Cuttack

ಬೆಂಗಳೂರು: ಉದ್ಯಮಿ ಗೋವಿಂದ ಪೂಜಾರಿಗೆ (Govinda Poojari) ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುತ್ತೇನೆ ಎಂದು ಹೇಳಿ 1.5 ಕೋಟಿ ರೂ. ತೆಗೆದುಕೊಂಡಿದ್ದ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ (HalaShri Swameeji) ಆಗಲೇ ಕಾವಿ ಕಿತ್ತು ಹಾಕಿ ಟೀ ಶರ್ಟ್‌ (Swameeji in T Shirt) ತೊಟ್ಟಾಗಿದೆಯಂತೆ!

ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ ಉದ್ಯಮಿ ಗೋವಿಂದ ಪೂಜಾರಿಯವರಿಗೆ ಐದು ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಬಂಧನ ಸತ್ರ ಆರಂಭವಾಗುತ್ತಲೇ ತಲೆ ಮರೆಸಿಕೊಂಡಿದ್ದ ಹಾಲಶ್ರೀ ಸ್ವಾಮೀಜಿಯನ್ನು ಒಡಿಶಾದ ಕಟಕ್‌ನಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ (Halashri swameeji arrested in Cuttack). ಸಿಸಿಬಿ ಪೊಲೀಸರ ಮೂರು ತಂಡಗಳು ಹಾಲಶ್ರೀಯ ಹುಡುಕಾಟದಲ್ಲಿ ತೊಡಗಿದ್ದು, ಅವರು ಒಡಿಶಾದ ಕಟಕ್‌ನಲ್ಲಿರುವುದು ತಿಳಿಯುತ್ತಿದ್ದಂತೆಯೇ ಅಲ್ಲಿನ ಪೊಲೀಸರಿಗೆ ಹೇಳಿ ಬಂಧಿಸಲು ಸೂಚಿಸಲಾಗಿತ್ತು. ಅದರಂತೆ ಅಲ್ಲಿನ ಪೊಲೀಸರು ಹೋಗಿ ನೋಡಿ ಬಂಧಿಸಿದ್ದಾರೆ. ಆದರೆ, ಅವರು ಬಂಧಿಸಿದ್ದು ಕರ್ನಾಟಕದ ಪೊಲೀಸರು ಹೇಳಿದ ಕಾವಿಧಾರಿ ಸ್ವಾಮೀಜಿಯಾಗಿರಲಿಲ್ಲ!

ಅಭಿನವ ಹಾಲಶ್ರೀಗಳನ್ನು ಯಾವತ್ತೂ ಎಲ್ಲರೂ ನೋಡಿದ್ದು ಕಾವಿ ದಿರಿಸಿನಲ್ಲೇ. ಇದೇ ಆಧಾರದಲ್ಲಿ ಹುಡುಕಾಟವು ನಡೆದಿತ್ತು. ಆದರೆ, ಕರ್ನಾಟಕ ಪೊಲೀಸರು ನೀಡಿದೆ ಕ್ಲೂಗಳನ್ನು ಹಿಡಿದುಕೊಂಡು ಹೋಗಿ ನೋಡಿದರೆ ಆ ವ್ಯಕ್ತಿ ಕಾವಿ ಧರಿಸಿರಲಿಲ್ಲ. ಬದಲಾಗಿ ಟೀ ಶರ್ಟ್‌ ಹಾಕಿದ್ದರು. ಇವರೇನಾ ನಿಜಕ್ಕೂ ಸ್ವಾಮೀಜಿ ಎಂದು ಕಟಕ್‌ ಪೊಲೀಸರು ಮತ್ತೊಮ್ಮೆ ಕನ್ಫರ್ಮ್‌ ಮಾಡಿಕೊಂಡು ಬಳಿಕ ಬಂಧಿಸಿದ್ದಾರೆ. ಹಣದ ಹಿಂದೆ ಹೋದ ಸ್ವಾಮೀಜಿಯನ್ನು ಜನರು ಬಟ್ಟೆ ಕಳಚುವ ಮುನ್ನ ಅವರೇ ಕಾವಿ ಕಳಚಿದಂತಾಗಿದೆ.

ಹಾಗಿದ್ದರೆ ಸಿಸಿಬಿ ಪೊಲೀಸರಿಗೆ ಅವರು ಕಟಕ್‌ನಲ್ಲಿರುವ ವಿಚಾರ ತಿಳಿದಿದ್ದು ಹೇಗೆ?

ಅದೊಂದು ರೋಚಕ ಕಥೆ

ಗೋವಿಂದ ಪೂಜಾರಿ ಅವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಸೆಪ್ಟೆಂಬರ್‌ 8ರಂದು. ಅದು ಸಿಸಿಬಿ ಪೊಲೀಸರ ಕೈಗೆ ಬಂದು ಬಂಧನಕ್ಕಾಗಿ ಹುಡುಕಾಟ ಶುರುವಾಗಿದ್ದು ಸೆಪ್ಟೆಂಬರ್‌ 11ರ ಹೊತ್ತಿಗೆ. ಸೆಪ್ಟೆಂಬರ್‌ 12ರಂದು ರಾತ್ರಿ ಚೈತ್ರಾ ಕುಂದಾಪುರಳನ್ನು ಬಂಧಿಸಿದ ಹೊತ್ತಿಗೇ ಅಲ್ಲಿ ಹಾಲಶ್ರೀ ಬಂಧನಕ್ಕೆ ಪ್ಲ್ಯಾನ್‌ ನಡೆದಿತ್ತು. ಆದರೆ, ಇದರ ಸುಳಿವನ್ನು ಪಡೆದ ಸ್ವಾಮೀಜಿ ಕಣ್ಮರೆಯಾಗಿದ್ದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಫೋನ್‌ ಕರೆಯೊಂದು ಬಂದಿತ್ತು. ಕಾರ್ಯಕ್ರಮದ ಮಧ್ಯದಿಂದಲೇ ಅವರು ಎದ್ದು ಹೊರಟಿದ್ದರು. ಹಾಗೆ ಹೋದವರು ಮೈಸೂರಿಗೆ ಹೋಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯೊಂದು ಲಭ್ಯವಾಗಿತ್ತು. ಆದರೆ, ಮೈಸೂರಿನಲ್ಲಿ ಅವರಿಗೆ ಆಪ್ತರಾದ ಎಲ್ಲರ ಮನೆಗಳ ಮೇಲೂ ಕಣ್ಣಿಡಲಾಗಿತ್ತು. ಆದರೆ ಅವರು ಸಿಕ್ಕಿರಲಿಲ್ಲ.

ಲಭ್ಯವಿರುವ ಮಾಹಿತಿಗಳ ಪ್ರಕಾರ, ಹಾಲಶ್ರೀಗಳು ಮೈಸೂರಿನಲ್ಲೇ ಇದ್ದರು. ಅಲ್ಲಿಂದ ರೈಲಿನಲ್ಲಿ ಕಾಶಿಗೆ ಹೊರಟಿದ್ದರು. ಆದರೆ, ಜತೆಯಲ್ಲಿ ಬೇರೆ ಯಾರಾದರೂ ಇದ್ದರೆ ಡೇಂಜರ್‌ ಎಂದು ಒಬ್ಬನೇ ಪ್ರಯಾಣ ಬೆಳೆಸಿದ್ದಾರೆ. ಬಹುಶಃ ಕಾಶಿಗೆ ಹೋಗಿ ತಲೆಮರೆಸಿಕೊಳ್ಳುವ ಪ್ಲ್ಯಾನ್‌ ಅವರದ್ದಾಗಿತ್ತು. ಆದರೆ ಅವರು ಒಂದೇ ರೈಲಿನಲ್ಲಿ ತೆರಳಿಲ್ಲ. ಅವರು ಮೊದಲು ಹೋಗಿದ್ದು ಹೈದರಾಬಾದ್‌ಗೆ.

ಅವರ ನಿರ್ದಿಷ್ಟ ಚಲನವಲನವನ್ನು ಟ್ರ್ಯಾಕ್‌ ಮಾಡುವ ವೇಳೆ ಅವರು ಹೈದರಾಬಾದ್‌ನಲ್ಲಿರುವ ಸುಳಿವೊಂದು ಸಿಕ್ಕಿತ್ತು. ಹಾಗಾಗಿ ಅಲ್ಲಿನ ಪೊಲೀಸರನ್ನು ಅಲರ್ಟ್‌ ಮಾಡಲಾಗಿತ್ತು. ಆದರೆ, ಅಲ್ಲಿ ಸ್ವಾಮೀಜಿ ಸಿಕ್ಕಿಲ್ಲ.

ನಿಜವೆಂದರೆ ಸ್ವಾಮೀಜಿ ಹೈದರಾಬಾದ್‌ಗೆ ಹೋಗಿದ್ದು ನಿಜ. ಅಲ್ಲಿ ಅವರು ಸ್ವಲ್ಪ ಸಮಯ ಇದ್ದರು. ಅಲ್ಲಿಂದ ಫಾರೂಖಿಬಾದ್‌ನ ಒಂದು ಆಶ್ರಮಕ್ಕೆ ತೆರಳಿದ್ದರು. ಬಳಿಕ ಪೂರಿ ಮತ್ತು ಕೋನಾರ್ಕ್‌ಗೆ ಹೋಗಿದ್ದಾರೆ. ಪೂರಿ ಜಗನ್ನಾಥ ಮತ್ತು ಕೋನಾರ್ಕ್‌ನ ಸೂರ್ಯ ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರೆ.

ಕೋನಾರ್ಕ್‌ನಲ್ಲಿ ಒಂದು ರೈಲ್ವೇ ಟಿಕೆಟ್‌ ತೆಗೆದುಕೊಂಡರು!

ಕೋನಾರ್ಕ್‌ನ ಸೂರ್ಯ ದೇವಾಲಯದಲ್ಲಿ ದರ್ಶನ ಮುಗಿಸಿದ ಸ್ವಾಮೀಜಿ ಅಲ್ಲಿ ಒಂದು ಮೊಬೈಲ್‌ ಖರೀದಿ ಮಾಡಿದ್ದಾರೆ. ಅದರಿಂದ ಆಂಧ್ರದ ಸ್ವಾಮೀಜಿಗೆ ಕರೆ ಮಾಡಿದ್ದಾರೆ. ಜತೆಗೆ ಒಂದು ರೈಲ್ವೇ ಟಿಕೆಟ್‌ ಬುಕ್‌ ಮಾಡಿದ್ದಾರೆ. ಹಾಗೆ ಪಡೆದ ಟಿಕೆಟ್‌ನ ಪಿಎನ್‌ಆರ್‌ ನಂಬರ್‌ ಅವರು ಎಲ್ಲಿದ್ದಾರೆ ಎನ್ನುವ ಸ್ಪಷ್ಟ ಕ್ಲೂವನ್ನು ಪೊಲೀಸರಿಗೆ ನೀಡಿತ್ತು ಎನ್ನಲಾಗಿದೆ. ಅದು ಹೇಗೆ ಎನ್ನುವುದು ಸ್ಪಷ್ಟವಾಗಿಲ್ಲ.

ಪಿಎನ್‌ಆರ್‌ ನಂಬರ್‌ ಪ್ರಕಾರ ಸ್ವಾಮೀಜಿ ಕಟಕ್‌ನ ನಿರ್ದಿಷ್ಟ ರೈಲ್ವೇ ನಿಲ್ದಾಣದಿಂದ ರೈಲು ಹತ್ತಬೇಕಾಗಿತ್ತು. ಆದರೆ, ಕಟಕ್‌ ಪೊಲೀಸರು ಅಲ್ಲಿ ಹೋಗಿ ನೋಡಿದಾಗ ಈ ವ್ಯಕ್ತಿ ಅಲ್ಲಿರಲಿಲ್ಲ. ಅವರು ಬುಕ್‌ ಮಾಡಿದ ಸೀಟು ಖಾಲಿಯಾಗಿತ್ತು. ಆದರೆ, ಕಟಕ್‌ ಪೊಲೀಸರು ಬಿಡಲಿಲ್ಲ. ಅದೇ ರೈಲಿನಲ್ಲಿ ಪ್ರಯಾಣ ಮುಂದುವರಿಸಿದರು.

ಇದನ್ನೂ ಓದಿ: Chaitra Kundapura : Big Update; ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ ; ಒಡಿಶಾದ ಕಟಕ್‌ನಲ್ಲಿ ತಲೆಮರೆಸಿಕೊಂಡಿದ್ದ ಶ್ರೀ!

ಆಗ ಮುಂದಿನ ಸ್ಟೇಷನ್‌ನಲ್ಲಿ ಆ ನಿರ್ದಿಷ್ಟ ಸೀಟಿನ ವ್ಯಕ್ತಿ ಬಂದು ಕುಳಿತರು. ಆದರೆ, ಅವರು ಕಾವಿಧಾರಿ ಸ್ವಾಮೀಜಿ ಆಗಿರಲಿಲ್ಲ. ಕೊನೆಗೆ ಅವರನ್ನು ವಿಚಾರಣೆ ನಡೆಸಿದಾಗ ಅವರೇ ಸ್ವಾಮೀಜಿ ಎಂದು ತಿಳಿದುಬಂತು. ಬದುಕುವುದಕ್ಕಾಗಿ, ಕೇಸರಿ ತೊಟ್ಟುಕೊಂಡಿದ್ದರೆ ಸುಲಭದಲ್ಲಿ ಹಿಡಿದುಬಿಡಬಹುದು ಎಂಬ ಭಯದಲ್ಲಿ ಅವು ಕಾವಿ ಬಿಟ್ಟು ಟೀ ಶರ್ಟ್‌ಗೆ ಮೊರೆ ಹೋಗಿದ್ದರು.

ಇದನ್ನೂ ಓದಿ: Chaitra Kundapura : ಚೈತ್ರಾ ಕುಂದಾಪುರ ವಂಚನೆ ಕೇಸಿನಲ್ಲಿ ವಜ್ರದೇಹಿ ಸ್ವಾಮೀಜಿ ಹೆಸರು; ಹಾಗಿದ್ದರೆ ಅವರ ಪಾತ್ರವೇನು?

ಹಾಗೆ ಅವರನ್ನು ರೈಲಿನಲ್ಲಿ ವಶಕ್ಕೆ ಪಡೆದಾಗ ಸಮಯ, ಸೋಮವಾರ ರಾತ್ರಿ 9.30!

ಇದೀಗ ಕಟಕ್‌ ಪೊಲೀಸರ ವಶದಲ್ಲಿದ್ದಾರೆ ಸ್ವಾಮೀಜಿ. ಸಿಸಿಬಿ ಅಧಿಕಾರಿಗಳು ಕೂಡಾ ಆಗಲೇ ಕಟಕ್‌ ತಲುಪಿದ್ದಾರೆ. ಸ್ವಾಮೀಜಿಯನ್ನು ಅಲ್ಲಿನ ಕೋರ್ಟ್‌ಗೆ ಹಾಜರುಪಡಿಸಿ ಅಲ್ಲಿಂದ ಟ್ರಾನ್ಸಿಟ್‌ ವಾರಂಟ್‌ ಪಡೆದು ಬೆಂಗಳೂರಿಗೆ ಕರೆತರಲಾಗುತ್ತದೆ. ಸಂಜೆ ವೇಳೆಗೆ ಸ್ವಾಮೀಜಿ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಕಟಕ್‌ನಿಂದ ಬರುವ ರೈಲಿನಲ್ಲೇ ಅವರನ್ನು ಬೆಂಗಳೂರಿಗೆ ತರುವ ಸಾಧ್ಯತೆ ಇದೆ.

Exit mobile version