Site icon Vistara News

Chaitra Kundapura : ಇನ್ನೂ ಅರೆಸ್ಟ್‌ ಆಗದ ಹಾಲಶ್ರೀ; ಬಂಧನವಾದ್ರೆ ಹೊರ ಬೀಳುತ್ತಾ ದೊಡ್ಡ ದೊಡ್ಡ ನಾಯಕರ ಹೆಸರು?

HalaSree swameeji

ಬೆಂಗಳೂರು: ಬೆಂಕಿ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್‌ನಿಂದ ನಡೆಸಿರುವ ಐದು ಕೋಟಿ ರೂ. ವಂಚನೆ ಪ್ರಕರಣ ಅಂತಿಮವಾಗಿ ರಾಜಕಾರಣದ ಪಡಸಾಲೆಗೂ ಬರುತ್ತದೆಯೇ ಎನ್ನುವ ಪ್ರಶ್ನೆ ಗಂಭೀರವಾಗಿ ಕೇಳಿಬಂದಿದೆ. ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಬೈಂದೂರು ಕ್ಷೇತ್ರದ ಟಿಕೆಟ್‌ ತೆಗೆಸಿಕೊಡುತ್ತೇನೆ ಎಂದು ಭರವಸೆ ನೀಡಿ ಐದು ಕೋಟಿ ರೂ. ವಸೂಲಿ ಮಾಡಿದ್ದ ಚೈತ್ರಾ ಕುಂದಾಪುರ ಗ್ಯಾಂಗ್‌ನಲ್ಲಿ ಹಲವರನ್ನು ಬಂಧಿಸಲಾಗಿದೆ. ಆದರೆ, ನೇರವಾಗಿ 1.5 ಕೋಟಿ ರೂ. ಪಡೆದುಕೊಂಡ ವಿಜಯ ನಗರ ಜಿಲ್ಲೆಯ ಹೂವಿನಹಡಗಲಿಯ ಹಿರೇಹಡಗಲಿ ಸಂಸ್ಥಾನ ಮಠದ ಅಭಿನವ ಅಭಿನವ ಹಾಲಶ್ರೀ ಸ್ವಾಮೀಜಿ (Abhinava Halasree Swameeji) ಅವರ ಬಂಧನ ಇನ್ನೂ ಆಗಿಲ್ಲ. ಅವರ ಬಂಧನ ಆಗ್ಲಿ ಎಲ್ಲಾ ಸತ್ಯ ಹೊರಬೀಳುತ್ತದೆ ಎಂದು ಚೈತ್ರ ಕುಂದಾಪುರ ಹೇಳಿದ್ದಕ್ಕೂ ಇನ್ನೂ ಸ್ವಾಮೀಜಿ ಬಂಧನ ಆಗದೆ ಇರುವುದಕ್ಕೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಗಾಢವಾಗಿ ಕಾಡಿದೆ.

ಸ್ವಾಮೀಜಿ ಸಿಕ್ಕಾಕಿಕೊಳ್ಳಿ ಸತ್ಯ ಹೊರಗೆ ಬರುತ್ತೆ!

ಮಂಗಳವಾರ ರಾತ್ರಿ ಬಂಧನಕ್ಕೆ ಒಳಗಾದ ಚೈತ್ರಾ ಕುಂದಾಪುರ ಟೀಮನ್ನು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ಸಿಸಿಬಿ ವಶಕ್ಕೆ ಪಡೆಯಲಾಗಿತ್ತು. ರಾತ್ರಿ ಇಡೀ ಸಾಂತ್ವನ ಕೇಂದ್ರದಲ್ಲಿದ್ದ ಚೈತ್ರಾ ಕುಂದಾಪುರಳನ್ನು ಗುರುವಾರ ಮುಂಜಾನೆ ಸಿಸಿಬಿ ಕಚೇರಿಗೆ ಕರೆ ತಂದಾಗ ಮೀಡಿಯಾಗಳ ಕ್ಯಾಮೆರಾ ನೋಡಿದ್ದೇ ತಡ, ʻಸ್ವಾಮೀಜಿ ಸಿಕ್ಕಾಕಿಕೊಳ್ಳಿ. ಎಲ್ಲಾ ಸತ್ಯ ಹೊರಗೆ ಬರುತ್ತದೆʼʼ ಎಂದು ಚೈತ್ರಾ ಹೇಳಿದ್ದು ಭಾರಿ ಸುದ್ದಿಯಾಗಿದೆ.

ನಿಜವೆಂದರೆ, ಈ ಪ್ರಕರಣದ ಪ್ರಧಾನ ಆರೋಪಿಗಳಲ್ಲಿ ಒಬ್ಬರಾಗಿರುವ ಹಾಲ ಶ್ರೀ ಸ್ವಾಮೀಜಿ ಇನ್ನೂ ಬಂಧನವಾಗಿಲ್ಲ. ಅವರನ್ನು ಯಾಕೆ ಬಂಧಿಸಿಲ್ಲ ಎಂಬುದು ನಿಗೂಢವಾಗಿದೆ. ಅವರು 1.5 ಕೋಟಿ ರೂ. ಪಡೆದಿದ್ದಾರೆ ಎಂಬುದನ್ನು ಅವರೇ ಒಪ್ಪಿಕೊಂಡಿರುವ ಬಗ್ಗೆ ಗೋವಿಂದ ಪೂಜಾರಿ ದಾಖಲೆಯನ್ನು ನೀಡಿದ್ದಾರೆ.

ಹಾಲಶ್ರೀ ಸ್ವಾಮೀಜಿ ಈ ಪ್ರಕರಣದಲ್ಲಿ ಅತಿ ದೊಡ್ಡ ಕೊಂಡಿ ಎನ್ನುವುದು ಚೈತ್ರಾ ಟೀಮ್‌ನ ಆರೋಪ. ಚೈತ್ರಾ ಎಂಡ್‌ ಟೀಮ್‌ ಆರಂಭದಲ್ಲಿ ಗೋವಿಂದ ಪೂಜಾರಿ ಅವರಿಂದ ಐವತ್ತು ಲಕ್ಷ ರೂ. ವಸೂಲಿ ಮಾಡಿದ ಬಳಿಕ ನೇರವಾಗಿ ಮಾತನಾಡಿಸಿದ್ದೇ ಸ್ವಾಮೀಜಿಯನ್ನು.

ಸ್ವಾಮೀಜಿಯವರಿಗೆ ರಾಜ್ಯದ ಮತ್ತು ಕೇಂದ್ರದ ಬಿಜೆಪಿ ನಾಯಕರ ಜತೆ ನೇರವಾದ ಸಂಪರ್ಕವಿದೆ. ಖಟ್ಟರ್‌ ಹಿಂದುತ್ವವಾದಿಯಾಗಿರುವ ಅವರ ಮಾತಿಗೆ ಬೆಲೆ ಇದೆ ಎನ್ನುವ ಕಾರಣಕ್ಕಾಗಿಯೇ ಟಿಕೆಟ್‌ ಕೊಡಿಸಬೇಕು ಎಂಬ ಉದ್ದೇಶದಿಂದ ಟೀಮ್‌ ಗೋವಿಂದ ಪೂಜಾರಿ ಅವರನ್ನು ಸ್ವಾಮೀಜಿಗೆ ಪರಿಚಯ ಮಾಡಿಕೊಟ್ಟಿದೆ. ಮಾತ್ರವಲ್ಲ ಸ್ವತಃ ಚೈತ್ರಾ ಕುಂದಾಪುರನೇ ಗೋವಿಂದ ಪೂಜಾರಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದಾರೆ.

ಮಠದಲ್ಲಿ ಸ್ವಾಮೀಜಿಗಳ ಜತೆ ಚೈತ್ರಾ, ಗೋವಿಂದ ಪೂಜಾರಿ

ಈ ಹಂತದಲ್ಲಿ ಸ್ವಾಮೀಜಿ ಅವರು ಗೋವಿಂದ ಪೂಜಾರಿ ಅವರನ್ನು ಮಾತನಾಡಿಸಿ ಚುನಾವಣಾ ಟಿಕೆಟ್‌ ಬೇಕು ಎಂದಾದರೆ 1.5 ಕೋಟಿ ರೂ. ಕೊಡಬೇಕು ಎಂದು ಹೇಳುತ್ತಾರೆ. ಈ ಮಾತುಕತೆ ನಡೆಯುವುದು 2022ರ ಸೆಪ್ಟೆಂಬರ್‌ ಮೊದಲ ವಾರದಲ್ಲಿ. ಗೋವಿಂದ ಪೂಜಾರಿಯವರು ಸ್ವಾಮೀಜಿ ಕೇಳಿದ ಹಣವನ್ನು 2023ರ ಜನವರಿ 16ರಂದು ಬೆಂಗಳೂರಿನ ಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ನೀಡಿದ್ದಾರೆ.

ಇದೆಲ್ಲ ಪ್ರಕರಣ ಮುಗಿದು ಟಿಕೆಟ್‌ ಸಿಗದೆ ಇದ್ದಾಗ ಮೋಸದ ಬಲೆಗೆ ಬಿದ್ದಿದ್ದೇನೆ ಎನ್ನುವ ಅರಿವಾಗುವ ಪೂಜಾರಿ ಅವರು ಸ್ವಾಮೀಜಿಯವರನ್ನೂ ಕೇಳುತ್ತಾರೆ. ಆಗ ಸ್ವಾಮೀಜಿಯವರು ನಾನು, ನಾನು ತೆಗೆದುಕೊಂಡು 1.5 ಕೋಟಿ ರೂ.ಗೆ ಮಾತ್ರ ಜವಾಬ್ದಾರ. ಅದನ್ನು ಕೊಡುತ್ತೇನೆ. ದಯವಿಟ್ಟು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಬೇಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ ಗೋವಿಂದ ಪೂಜಾರಿ ಅವರು ಸ್ವಾಮೀಜಿಯನ್ನೂ ಸೇರಿಸಿಯೇ ದೂರು ದಾಖಲಿಸುತ್ತಾರೆ.

ಚೈತ್ರಾ ಟೀಮಿಗೆ ಸ್ವಾಮೀಜಿ ಟಿಕೆಟ್‌ ಕೊಡಿಸುವ ವಿಶ್ವಾಸವಿತ್ತಾ?!

ಚೈತ್ರಾ ಎಂಡ್‌ ಟೀಮಿಗೆ ಹಾಲಶ್ರೀ ಸ್ವಾಮೀಜಿ ಅವರು ಗೋವಿಂದ ಪೂಜಾರಿ ಅವರಿಗೆ ಟಿಕೆಟ್‌ ಕೊಟ್ಟೇ ಕೊಡಿಸುತ್ತಾರೆ ಎಂಬ ನಂಬಿಕೆ ಇದ್ದಂತಿದೆ. ಯಾಕೆಂದರೆ ಹಾಲಶ್ರೀಗಳಿಗೆ ನಾಡಿನ ಹಲವು ಪ್ರಮುಖ ರಾಜಕಾರಣಿಗಳ ಒಡನಾಟವಿರುವುದರಿಂದ ಅವರು ಹೇಳಿದ ಮಾತನ್ನು ತಳ್ಳಿ ಹಾಕುವುದಿಲ್ಲ. ಹೀಗಾಗಿ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೂ ಟಿಕೆಟ್‌ ಕೈ ತಪ್ಪಿರುವುದು ಅವರನ್ನು ಕಂಗಾಲು ಮಾಡಿದೆ.

ಈಗ ಚೈತ್ರಾ ಟೀಮಿಗೆ ಇರುವ ಒಂದು ಆಶಾವಾದ ಏನು ಅಂದರೆ ಪೊಲೀಸರು ಈಗ ಹಾಲಶ್ರೀಯನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ. ನೀವು ಪಡೆದಿರುವ 1.5 ಕೋಟಿ ರೂ.ಯನ್ನು ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ? ದಾಖಲೆಗಳು, ಬ್ಯಾಂಕ್‌ ಅಕೌಂಟ್‌ಗಳ ಪರಿಶೀಲನೆ ನಡೆಯುತ್ತದೆ. ಹಾಲಶ್ರೀಗಳು ತಾವು ಪಡೆದ ಹಣದಲ್ಲಿ ಹೆಚ್ಚಿನ ಮೊತ್ತವನ್ನು ಟಿಕೆಟ್‌ಗಾಗಿ ಬಿಜೆಪಿಯ ಕೆಲವು ನಾಯಕರಿಗೆ ಕೊಟ್ಟಿದ್ದಾರೆ. ಹಾಲಶ್ರೀಗಳು ಈ ವಿಚಾರವನ್ನು ವಿಚಾರಣೆಯ ವೇಳೆ ಬಾಯಿ ಬಿಡುತ್ತಾರೆ, ಆಗ ಎಲ್ಲ ಸತ್ಯ ಹೊರಬರುತ್ತದೆ ಎನ್ನುವುದು.

ಹಾಲಶ್ರೀಗಳು ಗೋವಿಂದ ಪೂಜಾರಿ ಅವರನ್ನು ಕೆಲವು ಬಿಜೆಪಿ ನಾಯಕರ ಜತೆ ಭೇಟಿ ಕೂಡಾ ಮಾಡಿಸಿದ್ದರು ಎಂಬ ಮಾತನ್ನೂ ಚೈತ್ರಾ ಟೀಮ್‌ ಹೇಳುತ್ತಿದೆ. ಇದೆಲ್ಲದರ ಆಧಾರದಲ್ಲಿ ಚೈತ್ರಾ ಈ ಪ್ರಕರಣದಲ್ಲಿ ಬಿಜೆಪಿಯ ದೊಡ್ಡ ನಾಯಕರ ಹೆಸರು ಮೇಲೆದ್ದು ಬರುತ್ತದೆ ಎಂದು ಹೇಳುತ್ತಿರುವಂತೆ ಕಾಣುತ್ತಿದೆ.

ಆದರೆ, ಹಾಲ ಶ್ರೀ ಸ್ವಾಮೀಜಿಯ ಬಂಧನವೇ ಇನ್ನೂ ಆಗಿಲ್ಲ. ಮಂಗಳವಾರ ರಾತ್ರಿ ಮಠದಿಂದ ಹೊರಗೆ ಹೋದವರು ಯಾರ ಕಣ್ಣಿಗೂ ಬಿದ್ದಿಲ್ಲ. ಹೂವಿನಹಡಗಲಿಯ ಮಠದಲ್ಲಿರುವವರು ಸ್ವಾಮೀಜಿಯವರನ್ನು ಸಿಸಿಬಿ ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಸಿಸಿಬಿ ಇನ್ನೂ ಅವರು ತಮ್ಮ ವಶದಲ್ಲಿ ಇರುವುದನ್ನು ತಿಳಿಸಿಲ್ಲ.

ಒಟ್ಟಿನಲ್ಲಿ ಹಾಲಶ್ರೀ ಅವರು ಈ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅಭಿಮಾನಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ಹಿಂದೂ ಪರ ಚಟುವಟಿಕೆಗಳಲ್ಲಿ ತೊಡಗಿದ್ದ ಈ ಜಂಗಮ ಮಠದ ಸ್ವಾಮೀಜಿ ಟಿಕೆಟ್‌ ಕೊಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಅವರು ನಿಜಕ್ಕೂ ಯಾರಾದರೂ ರಾಜಕಾರಣಿಗಳ ಹೆಸರು ಬಾಯಿ ಬಿಡುತ್ತಾರಾ ಅಥವಾ ಬಾಯಿಬಡುಕಿ ಚೈತ್ರಾ ಕುಂದಾಪುರನೇ ಎಲ್ಲ ಕೃತ್ಯಗಳ ಸೂತ್ರಧಾರಿ ಅನ್ನುತ್ತಾರಾ ಕಾದು ನೋಡಬೇಕು.

Exit mobile version