ಬೆಂಗಳೂರು: ಚಂದ್ರಯಾನ 3 (Chandrayana 3) ಯಶಸ್ವಿಯಾಗಿರುವುದು ಇಡೀ ದೇಶಕ್ಕೆ ಸಂಭ್ರಮ ತಂದಿದೆ. ಅದರಲ್ಲೂ ವಿಜ್ಞಾನ ಹಿನ್ನೆಲೆಯಿಂದ ಬಂದವರಿಗೆ ಇದೊಂದು ತಾವೇ ಸಾಧಿಸಿದಷ್ಟು ಹೆಮ್ಮೆ. ಸ್ವತಃ ಎಂಟೆಕ್ ಪದವೀಧರರಾಗಿ, ವಿಜ್ಞಾನ ಮತ್ತು ಅಧ್ಯಾತ್ಮವನ್ನು ಮಧುರವಾಗಿ ಬೆಸೆಯುವ ಸಂತರಾದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು (Shree Nirmalanndanatha swameeji) ಅತೀವವಾದ ಸಂಭ್ರಮಪಟ್ಟಿದ್ದಾರೆ. ಈ ಹಿಂದೆ ಇಸ್ರೊದ ಉಪಗ್ರಹಗಳ ಉಡಾವಣೆಯ ಸಂದರ್ಭದಲ್ಲಿ ಶ್ರೀಹರಿ ಕೋಟದ ಉಡ್ಡಯನ ಸ್ಥಳದಲ್ಲಿದ್ದು ವಿಜ್ಞಾನಿಗಳ ಬೆನ್ನು ತಟ್ಟಿದ್ದ ಶ್ರೀಗಳು ಚಂದ್ರಯಾನ 3 ಯಶಸ್ಸಿಗೆ ಕಾರಣರಾದವರನ್ನು ಅಭಿನಂದಿಸಿದ್ದಾರೆ.
ನಿರ್ಮಲಾನಂದನಾಥ ಶ್ರೀಗಳ ಸಂದೇಶ
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ -3 ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಕ್ಕೆ ಕಾರಣಕರ್ತರಾದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಯೋಜನಾ ನಿರ್ದೇಶಕ ವೀರಮುತ್ತುವೇಲ್, ಶ್ರೀಕಾಂತ್, ಕಲ್ಪನಾ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಉನ್ನಿ ಕೃಷ್ಣನ್ ನಾಯರ್, ಲಾಂಚಿಂಗ್ ಅಥಾರಿಟಿ ಸೆಂಟರ್ ಮುಖ್ಯಸ್ಥ ರಾಜರಾಜನ್ ಹಾಗೂ ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ ಶಂಕರನ್ ಮತ್ತು ಹಿರಿಯ ವಿಜ್ಞಾನಿ ರಿತು ಕರಿದಾಳ್ ಶ್ರೀವಾಸ್ತವ ಅವರು ಸೇರಿದಂತೆ ಈ ಯೋಜನೆಗಾಗಿ ಶ್ರಮಿಸಿದ ಎಲ್ಲ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳಿಗೆ ಹಾರ್ದಿಕವಾಗಿ ಅಭಿನಂದಿಸುತ್ತೇನೆ.
ವಿಶ್ವದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇಸ್ರೋ ಹೊಸ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಇದು ನಮ್ಮ ದೇಶಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಇದಕ್ಕೆ ಕಾರಣಕರ್ತರಾದ ಎಲ್ಲರೂ ಅಭಿನಂದನೀಯರು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಇಸ್ರೋ ಸಾಧನೆಯಲ್ಲಿ ಭಾಗಿಯಾದ ನಾಗಮಂಗಲದ ಹುಡುಗನಿಗೆ ಅಭಿನಂದನೆ
ಮಂಡ್ಯ: ಇಸ್ರೋ ಸಾಧನೆಯನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಅಭಿನಂದಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಇಸ್ರೋದ ಈ ಮಹಾ ಸಾಧನೆಯ ಭಾಗವಾಗಿರುವ ನಾಗಮಂದಲ ಮೂಲದ ಎಂಜಿ ನಿಯರ್ ರವಿ ಪಿ ಗೌಡ ಅವರನ್ನು ಅವರು ನೆನಪಿಸಿಕೊಂಡಿದ್ದಾರೆ. ರವಿ ಪಿ. ಗೌಡ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಯುವಕರಾಗಿದ್ದಾರೆ.
ʻʻಭಾರತೀಯರಿಗೆ ಇದೊಂದು ದೊಡ್ಡ ಹೆಮ್ಮೆ. ಇಸ್ರೋ ಸಾಧನೆ ಅವಿಸ್ಮರಣೀಯ. ಇದು ಭಾರತೀಯರು ಎಂದೂ ಮರೆಯಲಾಗದ ದಿನ. ಚಂದ್ರಯಾನ 3 ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಚಂದ್ರನ ಅಂಗಳ ಸ್ಪರ್ಶಿಸಿದೆ. ಮುಂದಿನ ಸಂಶೋಧನೆಗಳು ಇಡೀ ಜಗತ್ತಿಗೆ ಬೆಳಕು ಚೆಲ್ಲುವಂತಾಗಲಿ. ಈ ಸಾಧನೆಯಲ್ಲಿ ನೂರಾರು ವಿಜ್ಞಾನಿಗಳು ,ತಂತ್ರಜ್ಞರ ದಣಿವರಿಯದ ಶ್ರಮ ಅಡಗಿದೆʼʼ ಎಂದು ಹೇಳಿದ್ದಾರೆ ಚಲುವರಾಯ ಸ್ವಾಮಿ.
ʻʻನಮ್ಮ ಜಿಲ್ಲೆಯ ರವಿ .ಪಿ ಗೌಡ ಅವರು ಹಿರಿಯ ವಿಜ್ಞಾನಿಯಾಗಿ ಸಾಧಕರ ತಂಡದಲ್ಲಿ ಸೇವೆ ಸಲ್ಲಿಸಿರುವುದು ನಮೆಲ್ಲರಿಗೂ ಅಭಿಮಾನ ತರುವ ವಿಚಾರ. ಇಸ್ರೋ ಚಂದ್ರಯಾನ 3 ತಂಡಕ್ಕೆ ಹಾಗೂ ಸಾಧನೆಯ ಭಾಗವಾಗಿರುವ ರವಿ.ಪಿ ಗೌಡ ಅವರಿಗೆ ವಿಶೇಷ ಅಭಿನಂದನೆʼʼ ಎಂದು ಚಲುವರಾಯ ಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: Chandrayaan 3 : ಚಂದ್ರೋತ್ಸವ ವೈಭವ; ತಾವೇ ಚಂದಮಾಮನ ಮೇಲೆ ಕಾಲಿಟ್ಟು ಧ್ವಜ ಹಾರಿಸಿದಂತೆ ಕುಣಿದಾಡಿದ ಜನ!