ಬೆಂಗಳೂರು: ದೊರೆಸಾನಿ, ಗೀತಾ ಮುಂತಾದ ಕಿರುತೆರೆಗಳಲ್ಲಿ ಅಭಿನಯಿಸಿದ್ದ ನಟಿ ಚೇತನಾ ರಾಜ್ (21) ಫ್ಯಾಟ್ ಫ್ರೀ ಸರ್ಜರಿ ವೇಳೆ ಅನುಮಾನಾಸ್ಪದವಾಗಿ ಮಂಗಳವಾರ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನವರಂಗ್ ಸರ್ಕಲ್ ಬಳಿಯಿರುವ ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ನಟಿ ಚೇತನಾ ಮೇ 16 ರಂದು ಬೆಳಗ್ಗೆ ಫ್ಯಾಟ್ ಫ್ರೀ ಸರ್ಜರಿಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಫ್ಯಾಟ್ ಫ್ರೀ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದೆ. ವೈದ್ಯರ ನಿರ್ಲಕ್ಷ ಇದಕ್ಕೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ | Explainer: ಚಾರ್‌ಧಾಮ್ ಯಾತ್ರೆ: ಸಾವುಗಳಿಗೆ ಕಾರಣವೇನು, ತಡೆಯುವುದು ಹೇಗೆ?
ಚೇತನಾ ಫ್ಯಾಟ್ ಫ್ರೀ ಸರ್ಜರಿ ಬಗ್ಗೆ ಪೋಷಕರಲ್ಲಿ ಹೇಳಿಕೊಂಡಿರಲಿಲ್ಲ. ಸ್ನೇಹಿತರೊಂದಿಗೆ ಆಸ್ಪತ್ರೆಗೆ ತೆರಳಿದ್ದರು. ಚೇತನಾ ಅವರು ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದರು. ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರವಾಹಿ ಮತ್ತು ಇನ್ನೂ ಬಿಡುಗಡೆಯಾಗಬೇಕಿರುವ ʼಹವಾಯಾಮಿʼ ಸಿನಿಮಾದಲ್ಲೂ ನಟಿಸಿದ್ದರು. ಶಸ್ತ್ರ ಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಪರಿಸ್ಥಿತಿ ಗಂಭೀರವಾಗಿತ್ತು. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಪ್ರಯತ್ನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಚೇತನಾ ರಾಜ್ ಮೃತಪಟ್ಟಿದ್ದಾರೆ ಎಂದು ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.
ಫ್ಯಾಟ್ ಫ್ರೀ ಸರ್ಜರಿ : ( Liposuction)
ಲಿಪೋಸಕ್ಷನ್ ( Liposuction) ಅಥವಾ ಫ್ಯಾಟ್ ಸರ್ಜರಿ (Fat Surgery) ಎಂದು ಕರೆಯಲ್ಪಡುವ ಈ ಸರ್ಜರಿಯಲ್ಲಿ ದೇಹದಲ್ಲಿಯ ಕೊಬ್ಬು ತೆಗೆಯುವ ವಿಧಾನವಾಗಿದೆ. ಹೆಚ್ಚು ತೂಕವನ್ನು ಹೊಂದಿರುವ ಅಥವಾ ದಪ್ಪ ಚರ್ಮದ ದೇಹಗಳಲ್ಲಿ ಈ ವಿಧಾನದಿಂದ ಸರ್ಜರಿ ಮಾಡಲಾಗುತ್ತದೆ. ಹೊಟ್ಟೆ, ಸೊಂಟ, ತೊಡೆಗಳು, ತೋಳುಗಳು ಅಥವಾ ಕುತ್ತಿಗೆಯಂತಹ ದೇಹದ ನಿರ್ದಿಷ್ಟ ಜಾಗದಲ್ಲಿ ಹೆಚ್ಚಾದ ಕೊಬ್ಬನ್ನು ತೆಗೆದು ಹಾಕಲು ಹೀರಿಕೊಳ್ಳುವ ತಂತ್ರವನ್ನು ಬಳಸಲಾಗುತ್ತದೆ.
ಇದನ್ನೂ ಓದಿ |ಗಂಟೆಗಟ್ಲೆ ಬಿಂಜ್ ವಾಚಿಂಗ್ ಮಾಡಿದ್ರೆ ರಕ್ತ ಹೆಪ್ಪುಗಟ್ಟಬಹುದು ಹುಷಾರ್!
ಮಗಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ಚೇತನಾ ತಂದೆ ವರದರಾಜ್ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ICU ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಹಿಂದೆ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುವುದಾಗಿ ಕೇಳಿದ್ದಳು. ನಾವು ಬೇಡ ಎಂದಿದ್ದೇವೆ. ಇಂದು ನಮ್ಮ ಗಮನಕ್ಕೆ ತರದೇ ಸರ್ಜರಿಗಾಗಿ ಅಸ್ಪತ್ರೆಗೆ ದಾಖಲಾಗಿದ್ದಾಳೆ. ನಾವು ಬರುವ ಹೊತ್ತಿಗೆ ಮಗಳಿಗೆ ಸರ್ಜರಿ ಆಗುತ್ತಿತ್ತು. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ನನ್ನ ಪುತ್ರಿ ಮೃತಪಟ್ಟಿದ್ದಾಳೆ ಎಂದು ದೂರಿದರು.