Site icon Vistara News

BN Bachegowda : ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಬಿಜೆಪಿಗೆ ರಾಜೀನಾಮೆ, ಕೈ ಸೇರ್ಪಡೆ?

BN Bachegowda Sharath Bachegowda

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ (Chikkaballapura BJP MP) ಬಿ.ಎನ್‌. ಬಚ್ಚೇಗೌಡ (BN Bachegowda) ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸುವುದಿಲ್ಲ ಎಂದು 2023ರ ಆಗಸ್ಟ್‌ ತಿಂಗಳಲ್ಲೇ ಘೋಷಿಸಿದ್ದ ಅವರು ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಇದ್ದರು. ಈ ಬಾರಿ ಅವರ ಹೆಸರು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ಗೆ ಪರಿಗಣನೆಯಾಗಿರಲಿಲ್ಲ. ಈ ನಡುವೆ ಅವರು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮೆ (Bachegowda Resigns from BJP) ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಬರೆದಿರುವ ಪತ್ರದಲ್ಲಿ, ʻʻನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಸದರಿ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಈ ಮೂಲಕ ತಮ್ಮನ್ನು ಕೋರುತ್ತೇನೆ. 2008ರಲ್ಲಿ ಬಿಜೆಪಿ ಪಾರ್ಟಿಯಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದು, ಶಾಸಕನಾಗಿ ಸಚಿವನಾಗಿ ಮತ್ತು 2019ರಲ್ಲಿ ಸಂಸದನಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಬಿಜೆಪಿ ಪಕ್ಷಕ್ಕೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Parliament Election : ಚಿಕ್ಕಬಳ್ಳಾಪುರದಿಂದ ಶರತ್‌ ಬಚ್ಚೇಗೌಡರ ಪತ್ನಿ ಪ್ರತಿಭಾ ಕಣಕ್ಕೆ?; ಕುಟುಂಬ ಹೇಳಿದ್ದೇನು?

ಐದು ಬಾರಿ ಶಾಸಕ, ಒಮ್ಮೆ ಸಂಸದರಾಗಿದ್ದರು

ಪ್ರಸಕ್ತ 81ರ ವಯಸ್ಸಿನಲ್ಲಿರುವ ಬಿ.ಎನ್‌. ಬಚ್ಚೇಗೌಡ ಅವರು ಜನತಾ ಪರಿವಾರದ ನಾಯಕನಾರಿ ರಾಜಕೀಯ ಶುರು ಮಾಡಿದ್ದರು. ಬಿ.ಎನ್‌. ಬಚ್ಚೇಗೌಡ ಅವರು 1978, 1985, 1994, 1999 ಮತ್ತು 2008ರಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಐದು ಬಾರಿ ಆಯ್ಕೆಯಾಗಿದ್ದಾರೆ. 1989, 2004 ಮತ್ತು 2013ರ ಚುನಾವಣೆಯಲ್ಲಿ ಸೋಲು ಕಂಡ ಅವರು ಒಮ್ಮೆ ಜಗದೀಶ್‌ ಶೆಟ್ಟರ್‌ ಅವರ ಸಂಪುಟದಲ್ಲಿ ಮಂತ್ರಿಯೂ ಆಗಿದ್ದರು. 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರ ವಿರುದ್ಧ ಸೋತಿದ್ದ ಅವರು ಮುಂದೆ 2019ರಲ್ಲಿ ಗೆಲುವು ಸಾಧಿಸಿದ್ದರು.

ನಿವೃತ್ತಿಯ ಸಂದರ್ಭದಲ್ಲಿ ಅವರು ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಕಾರ 75 ವರ್ಷಕ್ಕೆ ನಿವೃತ್ತಿ ಘೋಷಣೆ ಮಾಡಿಕೊಳ್ಳಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇನೆ. ಮೋದಿ ಅವರು ನನಗೆ ಪಕ್ಷದಲ್ಲಿ ಟಿಕೆಟ್ ಕೋಡೋದಿಲ್ಲ ಅಂತ ಹೇಳಿಬಿಟ್ಟಿದ್ದಾರೆ. ಟಿಕೆಟ್ ಕೊಡೋದಿಲ್ಲ ಅಂತ ಸೀರಿಯಸ್ಸಾಗಿ ಹೇಳಿಬಿಟ್ಟಿದ್ದಾರೆ. ಒನ್ ಫ್ಯಾಮಿಲಿ ಒನ್ ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮಗಳು, ಮೊಮ್ಮಗ ರಾಜಕಾರಣಕ್ಕೆ ಬರುವಂತಿಲ್ಲ ಎಂದಿದ್ದಾರೆ. ಹೀಗಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆʼʼ ಎಂದು 2023ರ ಆಗಸ್ಟ್‌ನಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಂಸದ ಬಿ.ಎನ್ ಬಚ್ಚೇಗೌಡ ಹೇಳಿದ್ದರು.

ಬಿ.ಎನ್‌. ಬಚ್ಚೇಗೌಡರು ಸಂಸದರಾಗಿ ಸಂಸತ್‌ ಕಲಾಪದಲ್ಲಿ ಭಾಗವಹಿಸುವುದು ಬಿಟ್ಟರೆ ಹೆಚ್ಚಿನ ಚಟುವಟಿಕೆಯಲ್ಲಿ ಇರಲಿಲ್ಲ. ಈ ನಡುವೆ, 2019ರಲ್ಲಿ ನಡೆದ ಆಪರೇಷನ್‌ ಕಮಲದಲ್ಲಿ ಭಾಗಿಯಾದ ಕಾಂಗ್ರೆಸ್‌ ನಾಯಕ ಎಂ.ಟಿ.ಬಿ ನಾಗರಾಜ್‌ ಅವರು ಹೊಸಕೋಟೆಯಿಂದ ಬಿಜೆಪಿ ಅಭ್ಯರ್ಥಿಯಾದಾಗ ಅವರಿಗೆ ಬಿಜೆಪಿ ಬಗ್ಗೆ ಭ್ರಮನಿರಸನವಾಗಿತ್ತು. ಈ ಸಿಟ್ಟಿನಲ್ಲಿ ಬಚ್ಚೇಗೌಡರ ಪುತ್ರ ಶರತ್‌ ಬಚ್ಚೇಗೌಡ ಅವರು ಕಾಂಗ್ರೆಸ್‌ ಸೇರಿದ್ದರು. ಅದೇ ಉಪಚುನಾವಣೆಯಲ್ಲಿ ಎಂ.ಟಿ.ಬಿ ನಾಗರಾಜ್‌ ಅವರನ್ನು ಸೋಲಿಸಿದರು.

ಇದೀಗ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ಜತೆಗೆ ಶರತ್‌ ಅವರ ಪತ್ನಿ ಪ್ರತಿಭಾ ಶರತ್‌ ಬಚ್ಚೇಗೌಡ ಅವರು ಕೂಡಾ ಸಕ್ರಿಯರಾಗಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಟಿಕೆಟ್‌ಗೆ ಅವರ ಹೆಸರು ಕೂಡಾ ಕೇಳಿಬಂದಿತ್ತು. ಆದರೆ, ಬಚ್ಚೇಗೌಡರು ಇದನ್ನು ನಿರಾಕರಿಸಿದ್ದರು.

ಇದೀಗ ಬಿಜೆಪಿಗೆ ರಾಜೀನಾಮೆ ನೀಡಿರುವ ಬಿ.ಎನ್‌. ಬಚ್ಚೇಗೌಡರು ಸಕ್ರಿಯ ರಾಜಕಾರಣದಿಂದ ದೂರ ನಿಲ್ಲುವ ಸಾಧ್ಯತೆ ಇದೆ. ಆದರೆ, ಕಾಂಗ್ರೆಸ್‌ ಪಕ್ಷಕ್ಕೆ ಸೇರಿ ನೈತಿಕ ಬೆಂಬಲ ನೀಡಬಹುದು ಎನ್ನಲಾಗುತ್ತಿದೆ.

Exit mobile version