ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಡೇ ಕೇರ್ ಸೆಂಟರ್ (Day Care Centre) ಒಂದರ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡ ಪುಟ್ಟ ಮಗು (Child death) ಬದುಕುಳಿಯಲಿಲ್ಲ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಮಗು ಮೂರು ದಿನಗಳ ಕಾಲ (Preschool Child dies after falling from third floor) ಜೀವನ್ಮರಣ ಹೋರಾಟ ನಡೆಸಿದ ಬಳಿಕ ಮೃತಪಟ್ಟಿದೆ.
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಡಿ ಬರುವ ಖಾಸಗಿ ಪ್ರಿ ಸ್ಕೂಲ್ ನಲ್ಲಿ ಕಲಿಯುತ್ತಿದ್ದ ಜೀನಾ ಎಂಬ ಮಗುವೇ ಮೃತಪಟ್ಟ ದುರ್ದೈವಿ. ಈಕೆ ಕೇರಳ ಮೂಲದ ಟೆಕ್ಕಿ ದಂಪತಿ ಜಿಟೋ ಟಾಮಿ ಜೋಸೆಫ್, ಬಿನಿಟೋ ಥಾಮಸ್ ಪುತ್ರಿ. ಜನವರಿ 22ರ ಮಧ್ಯಾಹ್ನ ಜೀನಾ ಮಹಡಿ ಮೇಲೆ ಆಡುತ್ತಿದ್ದಾಗ ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಮಗುವನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಅದು ಫಲ ನೀಡದೆ ಮಗು ಪ್ರಾಣವನ್ನೇ ಕಳೆದುಕೊಂಡಿದೆ.
ಖಾಸಗಿ ಡೆಲ್ಲಿ ಪ್ರಿ ಸ್ಕೂಲ್‌ನ ನರ್ಸರಿ ವಿಭಾಗದಲ್ಲಿ ಈ ಘಟನೆ ನಡೆದಿದೆ. ಪುಟ್ಟ ಮಕ್ಕಳ ಶಾಲೆಯನ್ನು ಮೂರನೇ ಮಹಡಿಯಲ್ಲಿ ನಡೆಸಿದ್ದು, ಮಕ್ಕಳು ಮಹಡಿಯಿಂದ ತಡೆ ಗೋಡೆ ಹತ್ತಿ ಹೊರಗೆ ಬಿದ್ದರೂ ಗಮನಿಸದೆ ಇರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಮಗು ಬಿದ್ದು ಗಾಯಗೊಂಡ ನಿಜವಾದ ಕಾರಣವನ್ನು ಕೂಡಾ ಶಾಲೆ ಮುಚ್ಚಿಟ್ಟಿತ್ತು ಎನ್ನಲಾಗಿದೆ. ಹೀಗಾಗಿ ನಿರ್ಲಕ್ಷ್ಯ ಮತ್ತು ಸರಿಯಾದ ಮಾಹಿತಿ ನೀಡದೆ ವಾಸ್ತವಾಂಶ ಮುಚ್ಚಿಟ್ಟಿದ್ದಕ್ಕಾಗಿ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Child Death: ಆಟವಾಡುತ್ತಿದ್ದ ಮಗುವಿನ ಜೀವ ತೆಗೆದ ಜೆಸಿಬಿ
ಮಗನನ್ನೇ ಗುಂಡು ಹಾರಿಸಿ ಕೊಂದ ತಂದೆ
ಬೆಂಗಳೂರು: ವ್ಯಕ್ತಿಯೊಬ್ಬರು ತನ್ನ ಬೆಳೆದು ನಿಂತ ಮಗನನ್ನೇ ಗುಂಡು ಹಾರಿಸಿ ಕೊಲೆ ಮಾಡಿ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕರೆಕಲ್ನ ಮನೆಯಲ್ಲಿ ವಾಸವಾಗಿರುವ ಸುರೇಶ್ ಎಂಬವರೇ ತಮ್ಮ ಮಗ ನರ್ತನ್ ಬೋಪಣ್ಣ (32) ಅವರನ್ನು ಕೊಲೆ ಮಾಡಿದವರು.
ಮನೆಯಲ್ಲಿ ತಂದೆ ಮತ್ತು ಮಗನ ನಡುವೆ ಮಾತಿಗೆ ಮಾತು ಬೆಳೆದು ತಂದೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಅವರು ಗುಂಡು ಹಾರಿಸಿದ್ದು ಬಂದೂಕಿನಿಂದಲೋ, ರೈಫಲ್‌ನಿಂದಲೋ ಎನ್ನುವುದು ಇನ್ನೂ ಸ್ಪಷ್ಟವಿಲ್ಲ.
ಮನೆಯಿಂದ ಕೇಳಿದ ಗುಂಡಿನ ಸದ್ದು ಮತ್ತು ಬಳಿಕದ ಆಕ್ರಂದನವನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣ ದೌಡಾಯಿಸಿದಾಗ ನರ್ತನ್ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ಕೂಡಲೇ ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಈ ಕೊಲೆಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿ ತಿಳಿದಿಲ್ಲ. ತಂದೆಯ ಕೈಯಲ್ಲಿ ಬಂದೂಕು ಅಥವಾ ರೈಫಲ್ ಎಲ್ಲಿಂದ ಬಂತು, ಅದಕ್ಕೆ ಲೈಸನ್ಸ್ ಇದೆಯಾ ಎಂದು ಗೊತ್ತಾಗಿಲ್ಲ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.