Site icon Vistara News

Child Trade : ಒಂದು ಮಗು ಹೆತ್ತು ಕೊಟ್ರೆ ತಾಯಿಗೆ 3 ಲಕ್ಷ, ಏಜೆಂಟ್‌ಗೆ 5 ಲಕ್ಷ ರೂ.!

Child trade accused

ಬೆಂಗಳೂರು: ಬೆಂಗಳೂರಿನಲ್ಲಿ ನವಜಾತ ಶಿಶುಗಳ (Newborn babies) ಉತ್ಪತ್ತಿ (!) ಮತ್ತು ಮಾರಾಟ ದಂಧೆಯೊಂದು (Child Trade) ನಡೆಯುತ್ತಿರುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇದು ಮಕ್ಕಳನ್ನು ಹೆತ್ತು ಕೊಡುವ ಪಕ್ಕಾ ವ್ಯಾಪಾರಿ ದಂಧೆಯಾಗಿದ್ದು, ಇದರಲ್ಲಿ ಗರ್ಭ ಧರಿಸಿ ಮಗುವನ್ನು ಹೆತ್ತು ಕೊಟ್ಟರೆ ಮೂರು ಲಕ್ಷ ನೀಡಲಾಗುತ್ತದೆ. ಇದನ್ನು ಮಕ್ಕಳ ಅವಶ್ಯಕತೆ ಇರುವ ಗ್ರಾಹಕರಿಗೆ ಎಂಟು ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಅಂದರೆ ಏಜೆಂಟರಿಗೆ 5 ಲಕ್ಷ ರೂ. ಸಿಗುತ್ತದೆ!

ಹೆಣ್ಮಕ್ಕಳನ್ನು ಮೊದಲೇ ಗುರುತಿಸಿ ಅವರು ಗರ್ಭ ಧರಿಸಿದ ಕೂಡಲೇ ಮಗುವನ್ನು ಬುಕ್‌ ಮಾಡಿಕೊಂಡು ಬಳಿಕ, ಹೆರಿಗೆಯಾಗುತ್ತಿದ್ದಂತೆಯೇ ಆ ಮಗುವನ್ನು ಖರೀದಿ ಮಾಡುವ ಅತ್ಯಂತ ಭಯಾನಕ ಕಾರ್ಯಾಚರಣೆ ಇದಾಗಿದೆ. ಈ ತಂಡಕ್ಕೆ ಸೇರಿದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಅವರನ್ನು ಬಂಧಿಸಲಾಗಿದೆ. ಇದರಲ್ಲಿ ಮುರುಗೇಶ್ವರಿ ಮಗು ಮಾರಾಟಕ್ಕೆ ಮುಂದಾಗಿದ್ದ ತಾಯಿ.

Child trade accused

ಈ ಟೀಮ್‌ ಮೊದಲು ಮಗುವನ್ನು ಮಾರಾಟ ಮಾಡಬಹುದಾದ ಹೆಣ್ಮಕ್ಕಳನ್ನು ಗುರುತಿಸುತ್ತದೆ. ಈ ಕೆಲಸವನ್ನು ಕೆಲವು ವೈದ್ಯರ ನೆಟ್‌ವರ್ಕ್‌ ಮೂಲಕವೂ ನಡೆಸುತ್ತದೆ ಎನ್ನಲಾಗಿದೆ. ಬಡತನದ ಹಿನ್ನೆಲೆ, ಕಾರ್ಮಿಕ ಕುಟುಂಬಗಳ ಮಹಿಳೆಯರನ್ನು ಗುರುತಿಸಿ ಅವರ ಜತೆಗೆ ಮಗುವನ್ನು ಹೆತ್ತು ಕೊಡುವ ಗುಪ್ತ ಒಪ್ಪಂದವನ್ನು ಮಾಡಿಕೊಳ್ಳುತ್ತದೆ. ಕೊನೆಗೆ ಮಗು ಹುಟ್ಟಿದ ಮೇಲೆ ಆಸ್ಪತ್ರೆಯಿಂದಲೇ ಮಗು ಅದರ ಮೂಲ ಗ್ರಾಹಕರಿಗೆ ಹಸ್ತಾಂತರವಾಗುತ್ತದೆ. ಇತ್ತ ಮಗು ಹೆತ್ತು ಕೊಟ್ಟ ಕುಟುಂಬಕ್ಕೆ ಹಣ ಸಂದಾಯವಾಗುತ್ತದೆ. ಅತ್ತ ಏಜೆಂಟ್‌ಗಳಿಗೆ ಗ್ರಾಹಕರಿಂದ ಹಣ ಸಿಗುತ್ತದೆ. ಇದು ಒಂದು ವಿಧಾನವಾದರೆ, ಇನ್ನೊಂದು ವಿಧಾನದಲ್ಲಿ ಈ ಮಹಿಳೆಯರನ್ನು ಅಕ್ರಮವಾಗಿ ಬಾಡಿಗೆ ತಾಯಿಯರಂತೆ ಬಳಸಲಾಗುತ್ತದೆ.

ಒಂದು ಮಗು ಹೆತ್ತು ಕೊಟ್ಟರೆ 3 ಲಕ್ಷ ಸಿಗುತ್ತದೆ!

ಮಕ್ಕಳ ಮಾರಾಟ ಜಾಲ ಮಗುವನ್ನು ಹೆತ್ತು ಕೊಡುವ ಮಹಿಳೆಗೆ ಕೊಡುವ ಮೊತ್ತ ಮೂರು ಲಕ್ಷ ರೂ. ಅದೇ ಟೀಮ್‌ ಮಗುವನ್ನು ಮೊದಲೇ ಬುಕ್‌ ಮಾಡಿಕೊಂಡ ಗ್ರಾಹಕರಿಗೆ ಮಾರುವುದು ಕನಿಷ್ಠ ಎಂಟು ಲಕ್ಷ ರೂ.ಗಳಿಗೆ. ಕೆಲವೊಮ್ಮೆ ಈ ಮೊತ್ತ 10ರಿಂದ 15 ಲಕ್ಷವೂ ಇರುತ್ತದೆ.

ಎಂಟು ವರ್ಷಗಳಿಂದ ನಡೆಯುತ್ತಿದೆ ಈ ದಂಧೆ

ಬಂಧಿತ ಟೀಮ್‌ಗೆ ಈ ದಂಧೆಯಲ್ಲಿ ಎಂಟು ವರ್ಷಗಳ ಅನುಭವವಿದೆ ಎನ್ನಲಾಗಿದೆ. ಗರ್ಭಿಣಿಯಾಗಿದ್ದು, ಮನೆಯಲ್ಲಿ ಆರ್ಥಿಕ ಸಂಕಷ್ಟ ಇರುವ ಮಹಿಳೆಯರನ್ನು ಟಾರ್ಗೆಟ್‌ ಮಾಡಿಕೊಂಡು ಈ ದಂಧೆ ನಡೆಯುತ್ತಿದೆ. ಅದರಲ್ಲೂ ಈಗಾಗಲೇ ಎರಡ್ಮೂರು ಮಕ್ಕಳಿದ್ದು ಮತ್ತೆ ಗರ್ಭಿಣಿಯಾಗಿ ಕಷ್ಟದಲ್ಲಿರುವ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತದೆ.

ಕೆಲವೊಂದು ಮಹಿಳೆಯರು ಆಕಸ್ಮಿಕವಾಗಿ ಗರ್ಭ ಧರಿಸಿರುತ್ತಾರೆ. ಆದರೆ ಮನೆಯಲ್ಲಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಇನ್ನೊಂದು ಮಗು ಹುಟ್ಟಿದರೆ ಕಷ್ಟ ಎಂಬ ಪರಿಸ್ಥಿತಿ ಇರುತ್ತದೆ. ಹೀಗಾಗಿ ಅವರು ಅಬಾರ್ಷನ್‌ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಅಂಥ ಮಹಿಳೆಯರಿಗೆ ಸಾಂತ್ವನ ಹೇಳಿ, ಅವರಲ್ಲಿ ಧೈರ್ಯ ತುಂಬಿ ಕೊನೆಗೆ ಈ ಮಗುವೇ ನಿಮ್ಮ ಆರ್ಥಿಕ ಸಂಕಷ್ಟವನ್ನು ಬಗೆಹರಿಸುವ ಶಕ್ತಿಯಾಗುತ್ತದೆ ಎಂದು ಮನಸ್ಸಿಗೆ ತುಂಬಲಾಗುತ್ತದೆ.

ಈ ಕಾರ್ಯಾಚರಣೆಯಲ್ಲಿ ಕೆಲವು ಆಸ್ಪತ್ರೆಗಳ ವೈದ್ಯರು ಕೂಡಾ ಶಾಮೀಲಾಗಿರುತ್ತಾರೆ ಎನ್ನಲಾಗಿದೆ. ಅದರಲ್ಲೂ ಮಕ್ಕಳನ್ನ ಹೆರಲು ಕೂಲಿ ಮಾಡುವ ಮಹಿಳೆಯರನ್ನೆ ಹೆಚ್ಚಾಗಿ ಹುಡುಕಾಟ ನಡೆಸುತ್ತಾರೆ.

ಈ ದಂಧೆಯಲ್ಲಿ ಆರೋಪಿಗಳ ಜೊತೆಗೆ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರ ಕೈವಾಡ ಇದೆ ಎಂದು ಸಿಸಿಬಿಗೆ ಮಾಹಿತಿ ಸಿಕ್ಕಿದೆ. ಅವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ಇದನ್ನೂ ಓದಿ : Child trade : ಮಕ್ಕಳ ಮಾರಾಟದ ಬೃಹತ್‌ ಜಾಲ ಪತ್ತೆ;‌ ಹೊಟ್ಟೆಯಲ್ಲಿ ಇರುವಾಗಲೇ ಬುಕಿಂಗ್!

ಸಹಜ ಗರ್ಭಧಾರಣೆಯಷ್ಟೇ ಅಲ್ಲ, ಕೃತಕ ಗರ್ಭ ಧಾರಣೆಯೂ ಇದೆ

ಈ ದಂಧೆ ಕೇವಲ ಸಹಜವಾಗಿ ಗರ್ಭ ಧರಿಸಿದ ಮಹಿಳೆಯರನ್ನು ಮಾತ್ರವಲ್ಲ, ಕೃತಕ ಗರ್ಭಧಾರಣೆಗೆ ಒಪ್ಪುವ ಬಾಡಿಗೆ ತಾಯಂದಿರನ್ನೂ ಒಳಗೊಂಡಿದೆ. ಇಲ್ಲಿ ನಿಜವಾದ ಗಂಡ-ಹೆಂಡಿರ ವೀರ್ಯ ಮತ್ತು ಅಂಡಾಣುವನ್ನು ಬಳಸಿ ಒಬ್ಬ ಮಹಿಳೆಯ ಹೊಟ್ಟೆಯಲ್ಲಿ ಮಗುವನ್ನು ಬೆಳೆಸುವ ಪ್ರಕ್ರಿಯೂ ಇದೆ ಅಥವಾ ಯಾರದೋ ವೀರ್ಯ ಮತ್ತು ಅಂಡಾಣುವಿನಿಂದ ಹುಟ್ಟಿದ ಭ್ರೂಣವನ್ನು ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಬೆಳೆಸುವ ದಂಧೆಯೂ ಇದೆ. ಇದರಲ್ಲಿ ಐವಿಎಫ್‌ ಕೇಂದ್ರಗಳ ವೈದ್ಯರು ಮತ್ತು ತಂತ್ರಜ್ಞರ ಪಾಲು ದೊಡ್ಡದಿದೆ.

ಈ ರೀತಿ ಗರ್ಭಧಾರಣೆಗೆ ಕೆಲವೊಮ್ಮೆ ಬಡವರಾಗಿರುವ ಆದರೆ ಆರೋಗ್ಯವಂತರಾಗಿರುವ ಹೆಣ್ಮಕ್ಕಳ ಅಂಡಾಣುವನ್ನು ಬಳಸಿಕೊಳ್ಳುವುದು ಕೂಡಾ ಇದೆ. ಈ ದಂಧೆಯಲ್ಲಿ ಪ್ರಮುಖವಾಗಿ ಟಾರ್ಗೆಟ್‌ ಆಗುವುದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ತರುಣಿಯರು ಎನ್ನಲಾಗಿದೆ.

ಮಾರಾಟವಾದ ಹತ್ತು ಮಕ್ಕಳ ವಿಳಾಸ ಪತ್ತೆ

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಈ ದಂಧೆ ಹರಡಿದೆ. ಇದನ್ನು ಬೆನ್ನು ಹತ್ತಿರುವ ಪೊಲೀಸರಿಗೆ ಮಾರಾಟವಾಗಿದ್ದ 10 ಮಕ್ಕಳ ವಿಳಾಸ ಸಿಕ್ಕಿದೆ. ಅಂದರೆ ೧೦ ಎಳೆ ಕಂದಮ್ಮಗಳ ಪೋಷಕರನ್ನು ಪತ್ತೆ ಹಚ್ಚಲಾಗಿದೆ. ಈ ಕಂದಮ್ಮಗಳು ಅವು ಹುಟ್ಟಿದ 15ರಿಂದ 20 ದಿನಗಳ ಒಳಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.

Exit mobile version