ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಭ್ರೂಣ ಹತ್ಯೆ ಜಾಲದ (feticide scam) ಭಯಾನಕ ಮುಖಗಳು ಒಂದೊಂದಾಗಿ ಹೊರಬರುತ್ತಿರುವ ನಡುವೆಯೇ ಬೆಂಗಳೂರಿನಲ್ಲಿ ಇನ್ನೊಂದು ಆತಂಕಕಾರಿ ದಂಧೆ ಬಯಲಾಗಿದೆ. ಇದು ಹಸುಗೂಸುಗಳನ್ನೇ (Newborn Child Market) ಮಾರಾಟ ಮಾಡುವ ಕ್ರಿಮಿನಲ್ ದಂಧೆ. ಸಾಮಾನ್ಯವಾಗಿ ಮಕ್ಕಳ ಮಾರಾಟ ಜಾಲ ಎಂದರೆ ಮಕ್ಕಳನ್ನು ಅಪಹರಣ (Children kidnap) ಮಾಡಿ ಮಾರಾಟ ಮಾಡುವುದು ಅಥವಾ ಹೆತ್ತವರೇ ತಮ್ಮ ಮಕ್ಕಳನ್ನು ಮಾರಾಟ ಮಾಡುವುದು ಎಂದು ಅಂದುಕೊಳ್ಳುತ್ತೇವೆ. ಆದರೆ, ಇಲ್ಲಿ ಬಯಲಾಗಿರುವುದು ಅದನ್ನೂ ಮೀರಿದ ದಂಧೆ. ಅದೇನೆಂದರೆ ಮಕ್ಕಳನ್ನು ಮಾರಾಟಕ್ಕಾಗಿಯೇ ಹುಟ್ಟಿಸಿ ಬಳಿಕ ಮಾರಾಟ ಮಾಡುವ ದಂಧೆ.
ಯಾವುದೇ ಸಿನಿಮಾಗೂ ಕಡಿಮೆ ಇಲ್ಲದ ರೀತಿಯಲ್ಲಿ ನಡೆಯುತ್ತಿದ್ದ ಈ ದಂಧೆಯನ್ನು ಸಿಸಿಬಿ ಟೀಮ್ ಬಂಧಿಸಿದ್ದು, ಎಂಟು ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಒಬ್ಬ ಪುರುಷನಾದರೆ, ಉಳಿದ ಏಳು ಮಂದಿ ಮಹಿಳೆಯರು. ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಬಂಧಿತ ಆರೋಪಿಗಳು.
ಗರ್ಭ ಧರಿಸುವ ಮೊದಲೇ ಡೀಲ್!
ಈ ದಂಧೆ ಯಾವ ಮಟ್ಟದ್ದೆಂದರೆ ಇಲ್ಲಿ ಮಕ್ಕಳು ಹುಟ್ಟಿದ ಮೇಲೆ ಮಾರಾಟದ ಡೀಲ್ ಆಗುವುದಲ್ಲ. ಮಕ್ಕಳು ಹುಟ್ಟುವ ಮೊದಲೇ ಅಥವಾ ಗರ್ಭ ಧರಿಸುವ ಮೊದಲೇ ಡೀಲ್ ಆಗುತ್ತದೆ. ಅಂದರೆ ಇದು ಮಕ್ಕಳನ್ನು ಹೆತ್ತು ಮಾರಾಟ ಮಾಡುವ ಜಾಲ.
ಬೆಂಗಳೂರಿನಲ್ಲಿ ಮಕ್ಕಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವುದನ್ನು ಗಮನಿಸಿದ ಖದೀಮರು ಒಂದು ನೆಟ್ವರ್ಕ್‌ನ್ನು ಬೆಳೆಸಿ ಈ ದಂಧೆಯನ್ನು ನಡೆಸುತ್ತಿದ್ದಾರೆ. ಇದು ಹೇಗೆ ಕಾರ್ಯಾಚರಿಸುತ್ತದೆ ಎಂದರೆ, ಮೊದಲು ಈ ಟೀಮ್ ಬಡ ಮಹಿಳೆಯರನ್ನು ಮತ್ತು ಅವರ ಕುಟುಂಬವನ್ನು ಟಾರ್ಗೆಟ್ ಮಾಡುತ್ತದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಮದುವೆಯಾಗಿ ಹಲವು ಮಕ್ಕಳನ್ನು ಪಡೆಯುವ ಕೆಲವು ವರ್ಗಗಳನ್ನು ಗುರುತಿಸುತ್ತದೆ. ಅವರಿಗೆ ಹಣದ ಆಮಿಷವೊಡ್ಡಿ ಮಗು ಹುಟ್ಟುವ ಮೊದಲೇ ಡೀಲ್ ಮಾಡಿಕೊಳ್ಳಲಾಗುತ್ತದೆ. ಅವರು ಗರ್ಭ ಧರಿಸಿ ಮಕ್ಕಳಾದ ಬಳಿಕ ಅವುಗಳನ್ನು ಈ ಟೀಮ್ ಖರೀದಿ ಮಾಡುತ್ತದೆ. ಬಳಿಕ ಅದನ್ನು ಬೇರೆಯವರಿಗೆ ಮಾರಾಟ ಮಾಡುತ್ತಾರೆ.
ಪೋಷಕರಿಂದ ಭಾರಿ ಬೇಡಿಕೆ
ಒಂದು ಕಡೆ ಗರ್ಭ ಧರಿಸುವ ಹೆಣ್ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡಿದ್ದರೆ, ಇನ್ನೊಂದು ಕಡೆಯಲ್ಲಿ ಮಕ್ಕಳಿಗಾಗಿ ಬೇಡಿಕೆ ಇಡುವ ಪೋಷಕರ ಜತೆಗೂ ಇವರು ನೆಟ್ವರ್ಕ್ ಕ್ರಿಯೇಟ್ ಮಾಡಿಕೊಂಡಿರುತ್ತಾರೆ. ಹಾಗೆ ಇಲ್ಲಿ ಮಕ್ಕಳು ಹುಟ್ಟುತ್ತಿದ್ದಂತೆಯೇ ಅವರಿಗೆ ಮಾರಾಟ ಮಾಡಲಾಗುತ್ತದೆ. ಈ ದಂಧೆಕೋರರ ಕೈಯಲ್ಲಿ ಆಗಲೇ 60 ಮಕ್ಕಳಿಗೆ ಡಿಮ್ಯಾಂಡ್ ಇತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೊಲೀಸರಿಗೆ ಗೊತ್ತಾಗಿದ್ದು ಹೇಗೆ?
ಮುರುಗೇಶ್ವರಿ ಎಂಬ ಮಹಿಳೆ ಗರ್ಭ ಧರಿಸಿದ್ದಳು. ಆದರೆ, ಆಕೆಗೆ ಹಣಕಾಸು ಮತ್ತಿತರ ಸಮಸ್ಯೆ ಕಾಡಿತ್ತು. ಆಗ ಆಕೆಯ ಅಸಹಾಯಕತೆ ಈ ಗ್ಯಾಂಗ್‌ನ ಗಮನಕ್ಕೆ ಬಂದಿತ್ತು. ಬಹುಶಃ ಆಕೆಯನ್ನು ಪರೀಕ್ಷೆ ಮಾಡುತ್ತಿದ್ದ ವೈದ್ಯರೇ ಈ ಗ್ಯಾಂಗ್‌ನ ಪರಿಚಯ ಮಾಡಿಸಿರುವ ಸಾಧ್ಯತೆಗಳಿವೆ. ಮರುಗೇಶ್ವರಿಯನ್ನು ಭೇಟಿ ಮಾಡಿದ ಗ್ಯಾಂಗ್ ಆಕೆಗೆ ಹಣಕಾಸು ಮತ್ತು ನೈತಿಕ ಬೆಂಬಲವನ್ನು ನೀಡಿತ್ತು. ಮತ್ತು ಆಕೆಯ ಎಲ್ಲ ಪೋಷಣೆ ನೋಡಿಕೊಳ್ಳುವುದಾಗಿ ತಿಳಿಸಿತ್ತು. ಈ ಒಂದು ಡೀಲ್‌ನ ಬಗ್ಗೆ ಅದ್ಯಾವುದೋ ಮೂಲದಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ಅದರ ಜತೆಗೆ ನವೆಂಬರ್ 24ರಂದು ಒಂದು ಮಗುವಿನ ಮಾರಾಟದ ಡೀಲ್ ನಡೆಯಲಿದೆ ಎಂಬ ಮಾಹಿತಿ ಇದಾಗಿತ್ತು. ಹೀಗಾಗಿ ಪೊಲೀಸರು ಡೀಲ್ ನಡೆಯಲಿದೆ ಎಂದು ನಿಗದಿಯಾಗಿದ್ದ ಆರ್‌ಆರ್ ನಗರ ದೇವಸ್ಥಾನದ ಬಳಿ ಹೊಂಚು ಹಾಕಿ ಕುಳಿತಿದ್ದರು. ಮಧ್ಯವರ್ತಿಗಳು ತಮಿಳುನಾಡು ನೋಂದಣಿಯ ಕಾರಿನಲ್ಲಿ ಬಂದಿದ್ದರೆ, ಸಿಸಿಬಿ ಅಧಿಕಾರಿಗಳು ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು. ಅಲ್ಲೇ ಈ ದಂಧೆಕೋರರನ್ನು ಮಟ್ಟ ಹಾಕಲಾಗಿದೆ.
ಐವಿಎಫ್ ಮೂಲಕವೂ ಮಕ್ಕಳಿಗೆ ಜನ್ಮ, ಡಾಕ್ಟರ್‌ಗಳೇ ಭಾಗಿ
ಈ ದಂಧೆಕೋರರು ಎಷ್ಟೊಂದು ಪ್ರಭಾವಿಗಳಾಗಿದ್ದಾರೆ ಎಂದರೆ ಇವರು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರನ್ನು ಕೂಡಾ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಐವಿಎಫ್ ಮತ್ತಿತರ ಕೃತಕ ಗರ್ಭಧಾರಣಾ ವಿಧಾನಗಳ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿದೆ.
ಅಂದರೆ ಅಸಹಾಯಕ ಹೆಣ್ಮಕ್ಕಳನ್ನು ಗುರುತಿಸಿ ಒಂದೋ ಅವರಿಗೆ ಅವರದೇ ಗಂಡನ ಮೂಲಕ ಮಗುವನ್ನು ಪಡೆದು ಮಾರಾಟ ಮಾಡುವಂತೆ ಹೇಳುವುದು, ಇಲ್ಲವೇ ಕೃತಕ ಗರ್ಭಧಾರಣೆಯ ಮೂಲಕ ಮಗುವನ್ನು ಪಡೆಯುವಂತೆ ಆಮಿಷ ಒಡ್ಡಲಾಗುತ್ತದೆ. ಒಮ್ಮೆ ಆ ಮಹಿಳೆ ಈ ಗ್ಯಾಂಗ್ ಜತೆ ಒಪ್ಪಂದ ಮಾಡಿಕೊಂಡಳೆಂದರೆ ಬಳಿಕ ಆಕೆಯ ಎಲ್ಲಾ ಆರೋಗ್ಯ ತಪಾಸಣೆಯ ನಿಗಾವನ್ನು ಇದೇ ತಂಡ ವಹಿಸಿಕೊಳ್ಳುತ್ತದೆ. ಕೊನೆಗೆ ಹೆರಿಗೆಯ ಹಂತದಲ್ಲಿ ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತದೆ. ಬಳಿಕ ಆಸ್ಪತ್ರೆಯಿಂದಲೇ ಮಗುವನ್ನು ಹಸ್ತಾಂತರಿಸಲಾಗುತ್ತದೆ. ಇದು ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಕುಟುಂಬದ ಕೆಲವರಿಗಷ್ಟೇ ಗೊತ್ತಿರುತ್ತದೆ.
ಕೊನೆಗೆ ಹೆರಿಗೆ ಹಂತದಲ್ಲೇ ಮಗು ಸಾವಾಗಿದೆ ಎಂತಲೋ, ಹುಟ್ಟಿದ ಬಳಿಕ ಪ್ರಾಣ ಬಿಟ್ಟಿದೆ ಎಂತಲೋ ಕತೆ ಕಟ್ಟಲಾಗುತ್ತದೆ. ಆದರೆ, ಮಗು ಮಾತ್ರ ಇನ್ಯಾರದೋ ಪಾಲಾಗಿರುತ್ತದೆ.
ಒಂದು ಮಗುವಿಗೆ 8ರಿಂದ 15 ಲಕ್ಷ ರೂ. ನಿಗದಿ
ಈ ಜಾಲ ಒಂದು ಮಗುವಿನ ಮಾರಾಟಕ್ಕೆ ಪಡೆಯುವ ಮೊತ್ತ 8ರಿಂದ 15 ಲಕ್ಷ ರೂ. ಈಗ ಬಂಧನಕ್ಕೆ ಒಳಗಾಗಿರುವ ಟೀಮ್ ಇದುವರೆಗೆ ಸುಮಾರು 60 ಶಿಶುಗಳ ಮಾರಾಟ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದೆ.
ಈ ನಡುವೆ, ಹತ್ತು ಮಕ್ಕಳನ್ನು ಬುಕ್ ಮಾಡಿಕೊಂಡ ಪೋಷಕರ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಉಳಿದವರ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈಗ ಬಂಧನದಲ್ಲಿರುವ ಎಂಟು ಮಂದಿಯನ್ನು ಕೂಡಾ ತೀವ್ರ ವಿಚಾರಣೆ ಮಾಡಲಾಗುತ್ತಿದೆ.