Site icon Vistara News

Cholera disease: ಬೆಂಗಳೂರಿನಲ್ಲಿ ಯುವಕನಿಗೆ ಮಾರಕ ಕಾಲರಾ ರೋಗ ಪತ್ತೆ

Cholera disease

ಬೆಂಗಳೂರು: ಬೆಂಗಳೂರಿನಲ್ಲಿ ಕಾಲರಾ ರೋಗ (Cholera disease) ಕಾಣಿಸಿಕೊಂಡಿದೆ. ಬಿಬಿಎಂಪಿ ಪಶ್ಚಿಮ ವಲಯದಲ್ಲಿರುವ ಪಿಜಿಯಲ್ಲಿ ಯುವಕನಿಗೆ ಕಾಲರಾ ರೋಗ ಪತ್ತೆಯಾಗಿದೆ. ಸದ್ಯ ಯುವಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಿಜಿಯಲ್ಲಿ ವಾಸಿಸುವ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಅಂದಹಾಗೇ ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ಕಾಲರಾ ಕರುಳಿನ ಸೋಂಕು ಆಗಿದ್ದು, ತೀವ್ರವಾದ ಅತಿಸಾರ ಭೇದಿ, ವಾಂತಿ ಇದರ ಪ್ರಮುಖ ಲಕ್ಷಣವಾಗಿದೆ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: Robbery Case : ನಿದ್ದೆಗೆ ಜಾರಿದ ಮಾಲೀಕನ ಕೈ-ಕಾಲು ಕಟ್ಟಿ, ಮನೆಯನ್ನೇ ಲೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್‌!

ಮುನ್ನೆಚ್ಚರಿಕಾ ಕ್ರಮಗಳೇನು?

-ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
-ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.
-ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
-ವಾಂತಿ, ಭೇದಿಯಿಂದ ದೇಹದೊಳಗಿನ ನೀರಿನ ಅಂಶ ಹೊರಬರುತ್ತದೆ. ಹೀಗಾಗಿ ನೀರಿಗೆ ಎಲೆಕ್ಟ್ರೋಲೈಟ್‌ ಬೆರಸಿ ಕುಡಿಯಿರಿ.
-ವಾಂತಿ, ಭೇದಿ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ
-ಕಾಲರಾ ಬ್ಯಾಕ್ಟಿರಿಯಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version