Site icon Vistara News

ಕಣ್ಮರೆಯಾದ ಸಹೋದ್ಯೋಗಿಯನ್ನು ಕಂಡು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

Gurulingaswami Holimath bommai

ಬೆಂಗಳೂರು: ಅಕಾಲಿಕ ನಿಧನರಾದ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಅವರ ನಿಧನವನ್ನು ಕಂಡು ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರಿಟ್ಟರು.

ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಗುರುಲಿಂಗಸ್ವಾಮಿ ಹೊಳಿಮಠ( 47) ಅವರ ನಾಗರಭಾವಿಯಲ್ಲಿರುವ ನಿವಾಸಕ್ಕೆ ಬೊಮ್ಮಾಯಿ ಭೇಟಿ ನೀಡಿದರು.

ಈ ಸಮಯದಲ್ಲಿ ಪಾರ್ಥಿವ ಶರೀರಕ್ಕೆ ಹೂಗುಚ್ಚ ಅರ್ಪಿಸಿ ನಮಿಸಿದರು. ಕೆಲಕಾಲ ನೋಡುತ್ತ ನಿಂತ ಬೊಮ್ಮಾಯಿ ಅವರ ಕಣ್ಣಾಲಿಗಳು ತೇವವಾದವು. ಅಗಲಿದ ಸ್ನೇಹಿತನನ್ನು ನೆನೆದು ಕಣ್ಣೀರೊರೆಸಿಕೊಂಡು ಅಶ್ರುತರ್ಪಣ ಅರ್ಪಿಸಿದರು. ಗುರುಲಿಂಗಸ್ವಾಮಿ ಅವರ ಕುಟುಂಬದ ಜತೆಗೆ ಮಾತನಾಡಿ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಗುರುಲಿಂಗಸ್ವಾಮಿ ಅಕಾಲಿಕ ಮರಣದಿಂದ ದಿಗ್ಭ್ರಮೆ ಆಗಿದೆ. ಸುಮಾರು 20 ವರ್ಷದಿಂದ ಪರಿಚಿತ. ಕಷ್ಟಪಟ್ಟು ಓದಿ, ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡಿದವರು. ಹುಬ್ಬಳ್ಳಿಯ ದಿನಗಳಿಂದಲೂ ನನಗೆ ಪರಿಚಿತರು. ಅತ್ಯಂತ ಕ್ರಿಯಾಶೀಲ ಪತ್ರಕರ್ತ. ತಮ್ಮ ವರದಿಯ ನಿಖರತೆಯನ್ನು ಪಡೆದುಕೊಂಡೇ ಮುಂದುವರಿಯುವಂತಹ ಜವಾಬ್ದಾರಿಯುತ ಪತ್ರಕರ್ತ. ಸಾಮಾಜಿಕ ಜವಾಬ್ದಾರಿ ಇದ್ದಂತಹ ಪತ್ರಕರ್ತ ಅವರು.

ಇದನ್ನೂ ಓದಿ | ಮಾನವೀಯತೆ, ಸಹೃದಯತೆ ತುಂಬಿದ ಅಪರೂಪದ ಪತ್ರಕರ್ತ ಗುರುಲಿಂಗಸ್ವಾಮಿ: ಹರಿಪ್ರಕಾಶ್‌ ಕೋಣೆಮನೆ ಕಂಬನಿ

ತಾನೊಬ್ಬನೇ ಬೆಳೆಯದೇ ಅನೇಕರನ್ನು ಬೆಳೆಸಿದ, ಸದಾ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದ್ದವರು. ಪ್ರತಿದಿನ 2-3 ಜನರಿಗೆ ಸಹಾಯ ಮಾಡುವ ಕಡತ ತಂದು ಸಹಿ ಮಾಡಿಸುತ್ತಿದ್ದರು. ಮಾನವೀಯ ಗುಣಗಳಿದ್ದವು, ಸ್ನೇಹ ಗುಣಗಳಿದ್ದವು.

ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 8.30ರವರೆಗೆ ಹುಬ್ಬಳ್ಳಿ, ಹಾವೇರಿ ಪ್ರವಾಸದಲ್ಲಿ ನನ್ನ ಜತೆಗೇ ಇದ್ದರು. ಬೆಳಗ್ಗೆ ಎದ್ದಾಗ ಇಂತಹ ಸುದ್ದಿ ಬರುತ್ತದೆ ಎಂದು ಊಹಿಸಿರಲಿಲ್ಲ. ಈ ಹಿಂದೆ ನಾಗರಾಜ ಜಮಖಂಡಿ ಅವರನ್ನು ನಾವು ಕಳೆದುಕೊಂಡಿದ್ದೆವು. ಅವರು ಹಾಗೂ ಗುರುಲಿಂಗಸ್ವಾಮಿ ಇಬ್ಬರೂ ಜತೆಜತೆಗೇ ಬೆಳೆದವರು. ನಾಗರಾಜ ಜಮಖಂಡಿ ಅವರ ಪುಣ್ಯಸ್ಮರಣೆಯನ್ನು ಗುರುಲಿಂಗಸ್ವಾಮಿ ಅವರೇ ಮುಂದೆ ನಿಂತು ಮಾಡುತ್ತಿದ್ದರು. ಈ ರೀತಿ ಇಬ್ಬರು ಪತ್ರಕರ್ತ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಅವರ ಅಗಲಿಕೆ ಪತ್ರಿಕೋದ್ಯಮಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ನಷ್ಟವಾಗಿದೆ. ಅವರ ಕ್ರಿಯಾಶೀಲತೆ ಇತರರಿಗೂ ಮಾದರಿಯಾಗಲಿ ಎಂದು ಹಾರೈಸುತ್ತೇನೆ ಎಂದರು.

ಇದನ್ನೂ ಓದಿ | ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೃದಯಾಘಾತದಿಂದ ನಿಧನ

ಗುರುಲಿಂಗಸ್ವಾಮಿ ನಿಧನಕ್ಕೆ ಗಣ್ಯರ ಕಂಬನಿ

ಗುರುಲಿಂಗಸ್ವಾಮಿ ಅವರ ನಿಧನಕ್ಕೆ ಸಚಿವರಾದ ಕೆ. ಗೋಪಾಲಯ್ಯ, ನಾರಾಯಣಗೌಡ, ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಮುನಿರತ್ನ, ಆರಗ ಜ್ಞಾನೇಂದ್ರ, ಕೆ.ಎಸ್‌. ಈಶ್ವರಪ್ಪ, ಗೋವಿಂದ ಕಾರಜೋಳ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.

Exit mobile version